ತ್ರಿಪುರಾದಲ್ಲಿ ಅಡಿಕೆ ಬೆಳೆ ವಿಸ್ತರಣೆಗೆ ಸರ್ಕಾರ ಪ್ರೋತ್ಸಾಹ ನೀಡುವುದರ ಜೊತೆಗೇ ಉಪಬೆಳೆಯಾಗಿ ಕೊಕೋ ಬೆಳೆಯಲು ಕೂಡಾ ಉತ್ತೇಜನ ನೀಡುತ್ತಿದೆ. ಈಗಾಗಲೇ ಅಡಿಕೆ ಹಾಗೂ ಕೊಕೋ ಕೂಡಾ ಬೆಳೆಯಲು ಅನುಕೂಲಕರ ಕೃಷಿ ಹವಾಮಾನ ಪರಿಸ್ಥಿತಿ ಇರುವುದರಿಂದ ಕೊಕೋ ಬೆಳೆಗೆ ಭರವಸೆಯ ವಲಯವೆಂದು ಗುರುತಿಸಲ್ಪಟ್ಟಿದೆ. ಹೀಗಾಗಿ ಕೊಕೋ ಬೆಳೆಯ ಬಗ್ಗೆಯೂ ಈಗ ತರಬೇತಿ ಆರಂಭವಾಗಿದೆ.
ವೈಜ್ಞಾನಿಕ ಕೊಕೋ ಕೃಷಿ ಮತ್ತು ಮೌಲ್ಯವರ್ಧನೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಕೂಡಾ ಸರ್ಕಾರ ಹೊಂದಿದೆ. ವಿಶೇಷವಾಗಿ ಉತ್ತರ ತ್ರಿಪುರಾದಲ್ಲಿ ಕೊಕೋವನ್ನು ಅಡಿಕೆ ಆಧಾರಿತ ಬೆಳೆ ವ್ಯವಸ್ಥೆಗಳೊಂದಿಗೆ ಪರಿಣಾಮಕಾರಿಯಾಗಿ ಅಂತರ ಬೆಳೆಯಾಗಿ ಬೆಳೆಯಬಹುದು ಎಂದು ಮಾಹಿತಿ ನೀಡಲಾಗಿದೆ. ಭಾರತ ಸರ್ಕಾರದ ಕೃಷಿ ಸಚಿವಾಲಯವು ಈಶಾನ್ಯ ಪ್ರದೇಶದಲ್ಲಿ ಕೊಕೋ ಕೃಷಿ ಪ್ರದೇಶವನ್ನು 50,000 ಹೆಕ್ಟೇರ್‌ಗಳಿಗೆ ವಿಸ್ತರಿಸಲು ಸಲಹೆ ನೀಡಿದೆ. ತ್ರಿಪುರಾ ಕೃಷಿಕರು ಈ ವಿಸ್ತರಣಾ ಅಭಿಯಾನದಿಂದ ಪ್ರಯೋಜನ ಪಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಸಿಪಿಸಿಆರ್‌ಐ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಬಳಸಿಕೊಂಡು ಸಣ್ಣ ಉದ್ಯಮಿಗಳು ಮತ್ತು ಸ್ವಸಹಾಯ ಗುಂಪುಗಳಿಗೆ “ಬೀನ್ ಟು ಬಾರ್” ಚಾಕೊಲೇಟ್ ಘಟಕದ ಬಗ್ಗೆಯೂ ಮಾಹಿತಿ ನೀಡಲಾಗಿದೆ.
ತ್ರಿಪುರಾದಲ್ಲಿ ಸರ್ಕಾರದ ನೆರವಿನೊಂದಿಗೆ ಅಡಿಕೆ ಬೆಳೆ ವಿಸ್ತರಣೆ ಹಾಗೂ ಉಪಬೆಳೆಯ ಕಡೆಗೂ ಆದ್ಯತೆ ನೀಡಲಾಗುತ್ತಿದೆ. ಅನೇಕ ವರ್ಷಗಳಿಂದ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಈಗಷ್ಟೇ ಉಪ ಬೆಳೆಯ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ. ಅಡಿಕೆಯ ಜೊತೆಗೆ ಈಗ ಕೊಕೋ, ಕಾಫಿ, ಕಾಳುಮೆಣಸು ಮೊದಲಾದ ಉಪಬೆಳೆಯೂ ಅಗತ್ಯವಿದೆ. ಕೃಷಿ, ಗ್ರಾಮೀಣ, ಪರಿಸರ ಸುದ್ದಿಗಳಿಗಾಗಿ ನಮ್ಮ ಚಾನೆಲ್ ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ…

