ಕೊರೋನಾ ನಂತರ ಅತಿ ಅಗತ್ಯವಾಗಿರುವ ವಿಷಯಗಳಲ್ಲಿ ನೆಟ್ವರ್ಕ್ ಕೂಡಾ ಒಂದು. ಕಳೆದ ಎರಡು ವರ್ಷಗಳಲ್ಲಿ ನೆಟ್ವರ್ಕ್ ಸಮಸ್ಯೆ ಗ್ರಾಮೀಣ ಭಾಗದಲ್ಲಿ ವಿಪರೀತವಾಗಿ ಕಾಡಿದೆ. ಇದೀಗ ಖಾಸಗಿ ಟವರ್ ಸ್ವಂತ ಜಮೀನಿನಲ್ಲಿ ನಿರ್ಮಾಣ ಮಾಡಿ ವೇಗದ ಇಂಟರ್ನೆಟ್ ಪಡೆದ ಸಂಗತಿಯೊಂದು ಇಲ್ಲಿದೆ.
ಕೊರೋನಾ ಕಾಲದ ನಂತರ ಗ್ರಾಮೀಣ ಜನರು ಸಂಕಷ್ಟ ಅನುಭವಿಸಿದರು. ಅದರಲ್ಲೂ ವರ್ಕ್ ಪ್ರಂ ಹೋಂ ಉದ್ಯೋಗಿಗಳು, ವಿದ್ಯಾರ್ಥಿಗಳು ಇನ್ನಿಲ್ಲದ ಕಷ್ಟ ಪಟ್ಟರು. ಹಾಗೆ, ಕಳೆದ ವರ್ಷ ಕಷ್ಟ ಪಟ್ಟವರಲ್ಲಿ ಕಾಸರಗೋಡು ಜಿಲ್ಲೆಯ ಬದಿಯಡ್ಕ ಬಳಿಯ ಮುಂಡಿತ್ತಡ್ಕದ ಮುರಳಿ ಅವರೂ ಒಬ್ಬರು. ಖಾಸಗಿ ಸಂಸ್ಥೆಯ ಉದ್ಯೋಗಿ ಹಾಗೂ ಐಟಿ ಸಂಸ್ಥೆ ಹೊಂದಿರುವ ಮುರಳಿ ಅವರು ಕಳೆದ ವರ್ಷ ಇಂಟರ್ನೆಟ್ ಸೌಲಭ್ಯ ಇಲ್ಲದೆ ಪರದಾಟ ನಡೆಸಿದರು. ಬೆಂಗಳೂರಿನಲ್ಲಿ ಸಂಸ್ಥೆ ಹೊಂದಿರುವ ಅವರು ಕಳೆದ ವರ್ಷದ ಕೊರೋನಾ ಲಾಕ್ಡೌನ್ ಸಮಯದಲ್ಲಿ ಹಲವು ಸಮಯ ಎದುರಿಸಿದರು. ಬಳಿಕ ಬೆಂಗಳೂರಿನಲ್ಲಿಯೇ ಕೆಲಸ ಮಾಡಿದರು. ಈ ಬಾರಿಯೂ ಲಾಕ್ಡೌನ್ ಆರಂಭವಾಗುವ ವೇಳೆ ನೆಟ್ವರ್ಕ್ ವ್ಯವಸ್ಥೆ ಬಗ್ಗೆ ಗಂಭೀರ ಚಿಂತನೆ ನಡೆಸಿದರು.
ಕಾಸರಗೋಡು ಜಿಲ್ಲೆಯ ಬದಿಯಡ್ಕ ಬಳಿಯ ಶೇಣಿ ಪ್ರದೇಶದಲ್ಲಿ ಅವರ ಮನೆ ಇದೆ. ಹೀಗಾಗಿ ಮನೆಗೆ ವೇಗದ ಇಂಟರ್ನೆಟ್ ಗಾಗಿ ಬಿ ಎಸ್ ಎನ್ ಎಲ್ ಸೇರಿದಂತೆ ವಿವಿಧ ಖಾಸಗಿ ಕಂಪನಿಗಳನ್ನು ಸಂಪರ್ಕಿಸಿದರು, ಕೇಬಲ್ ವ್ಯವಸ್ಥೆಗೂ ಬೆನ್ನು ಬಿದ್ದರು. ಕೇಬಲ್ ವ್ಯವಸ್ಥೆಗಳು ನಿರ್ವಹಣೆ ದೃಷ್ಟಿಯಿಂದ ಕೇರಳದ ಕೆಲವು ಗ್ರಾಮೀಣ ಭಾಗಗಳಲ್ಲಿ ಈಚೆಗೆ ನಿಧಾನವಾಗಿಸಿದ ಬಗ್ಗೆಯೂ ಮಾಹಿತಿ ಪಡೆದರು. ಹೀಗಾಗಿ ಇವರ ಪ್ರದೇಶಕ್ಕೆ ಇಂಟರ್ನೆಟ್ ಸದ್ಯ ಲಭ್ಯವಾಗುವುದು ಕಷ್ಟ ಎಂದು ಅನಿಸಿತು. ಈ ಸಮಯದಲ್ಲಿ ಬಿ ಎಸ್ ಎನ್ ಎಲ್ ನ ಏರ್ ಫೈಬರ್ ವ್ಯವಸ್ಥೆ ಮೂಲಕ ಕೇಬಲ್ ಇಲ್ಲದೆಯೇ ವೇಗದ ಇಂಟರ್ನೆಟ್ ಲಭ್ಯವಾಗುವ ಮಾಹಿತಿ ಪಡೆದರು. ಈ ಬಗ್ಗೆ ಬಿ ಎಸ್ ಎನ್ ಎಲ್ ಮೂಲಕ ಪ್ರಾಂಚೈಸಿಯಾದ ಸೆಲ್ ಟೋನ್ ಬಾಯಾರು ಅನ್ನು ಸಂಪರ್ಕಿಸಿ ವ್ಯವಸ್ಥೆ ಮಾಡುವಂತೆ ತಿಳಿಸಿದಾಗ ಶೇಣಿ ಪ್ರದೇಶದಲ್ಲಿ ಏರ್ ಫೈಬರ್ ವ್ಯವಸ್ಥೆ ಆದರೂ ಮುರಳಿ ಅವರ ಮನೆಗೆ ವೇಗ ಇಂಟರ್ನೆಟ್ ಲಭ್ಯವಾಗಲಿಲ್ಲ, ಇವರ ಜೊತೆಗೆ ಆಸುಪಾಸಿನ ಮನೆಗಳಿಗೂ ಇಂಟರ್ನೆಟ್ ಇರಲಿಲ್ಲ. ಹೀಗಾಗಿ ಮುರಳಿ ಅವರ ಮಿತ್ರ ಕೇಶವ ಅವರೂ ಸೇರಿ ಸ್ವಂತ ಜಾಗದಲ್ಲಿ ಖಾಸಗಿಯಾಗಿ ಟವರ್ ನಿರ್ಮಾಣಕ್ಕೆ ಮುಂದಾದರು.
ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಗಳ ಮೂಲಕ ಟವರ್ ನಿರ್ಮಾಣದ ಮಾಹಿತಿ ಪಡೆದು 33 ಮೀಟರ್ ಎತ್ತರದ ಟವರ್ ನಿರ್ಮಾಣಕ್ಕೆ ಮುಂದಾಗಿ 1.45 ಲಕ್ಷ ರೂಪಾಯಿ ವೆಚ್ಚದಲ್ಲಿ ಟವರ್ ನಿರ್ಮಿಸಿದರು. ಮಲೆನಾಡು ಹಾಗೂ ಕರಾವಳಿ ಭಾಗವಾದ್ದರಿಂದ ಗುಣಮಟ್ಟದ ಕಬ್ಬಿಣ ಅಳವಡಿಕೆ ಮಾಡಿದ್ದರಿಂದ ಸ್ವಲ್ಪ ವೆಚ್ಚವಾಗಿದೆ ಎನ್ನುವ ಮುರಳಿ ಅವರು ನಮಗೆ ಅತೀ ಅಗತ್ಯವಾಗಿ ವೇಗದ ಇಂಟರ್ನೆಟ್ ಬೇಕಿತ್ತು, ಹೀಗಾಗಿ ಟವರ್ ಸ್ಥಾಪಿಸಲೇಬೇಕಾಯಿತು. ಈಗ ಊರಿನ ಮಂದಿಯೂ ಅಗತ್ಯವಿದ್ದರೆ ಇದೇ ಟವರ್ ಮೂಲಕ ಸಂಪರ್ಕ ಪಡೆಯಬಹುದು ಎನ್ನುತ್ತಾರೆ. ಸದ್ಯ ಬಿ ಎಸ್ ಎನ್ ಎಲ್ ಏರ್ ಫೈಬರ್ ಮೂಲಕ ವೇಗದ ಇಂಟರ್ನೆಟ್ ಲಭ್ಯವಾಗಿದ್ದು ಯಾವುದೇ ಅಡೆ ತಡೆ ಇಲ್ಲದೆ ಕೆಲಸ ಮಡಲಾಗುತ್ತದೆ ಎನ್ನುತ್ತಾರೆ ಮುರಳಿ.
ಗ್ರಾಮೀಣ ಭಾಗದಲ್ಲಿ ವೇಗದ ಇಂಟರ್ನೆಟ್ ಲಭ್ಯವಾಗಬೇಕು, ಆದರೆ ನಿರ್ವಹಣೆಯೂ ಕಡಿಮೆ ಇರಬೇಕು. ಅಂತಹ ಕಡೆಗಳಲ್ಲಿ ಏರ್ ಫೈಬರ್ ನಂತಹ ವ್ಯವಸ್ಥೆ ಹೆಚ್ಚು ಅನುಕೂಲ ಎನ್ನುತ್ತಾರೆ ಸೆಲ್ ಟೋನ್ ಬಾಯಾರು ಇದರ ವಿಷ್ಣುಪ್ರಸಾದ್.
ಗ್ರಾಮೀಣ ಭಾಗಗಳಲ್ಲಿ ಯಾವುದೇ ಕಾರಣಕ್ಕೂ ನೆಟ್ವರ್ಕ್ ಸಿಗದ ಕಡೆಗಳಲ್ಲಿ ಒಂದಷ್ಟು ಮಂದಿ ಒಂದಾಗಿ ಖಾಸಗಿ ಟವರ್ ಸ್ಥಾಪನೆ ಮಾಡಿ ಇಂಟರ್ನೆಟ್ , ನೆಟ್ವರ್ಕ್ ಪಡೆಯುವ ವ್ಯವಸ್ಥೆ ಮಾಡಹುದಾಗಿದೆ. ಸರಕಾರಗಳು ಮಾಡಬೇಕಾದ ವ್ಯವಸ್ಥೆಗಳನ್ನು ಗ್ರಾಮೀಣ ಜನರೇ ಮಾಡಲು ಸಾಧ್ಯವಿದೆ.