ಗ್ರಾಮೀಣ ಭಾಗದಲ್ಲಿ ನಿತ್ಯವೂ ಒಂದಲ್ಲ ಒಂದು ಸಮಸ್ಯೆ. ರಸ್ತೆ, ಸೇತುವೆ, ವಿದ್ಯುತ್, ನೆಟ್ವರ್ಕ್.. ಈ ವಿಷಯಗಳು ಗ್ರಾಮೀಣ ಭಾಗದಲ್ಲಿ ಯಾವಾಗಲೂ ಚರ್ಚೆಯ ವಿಷಯ. ಇದೀಗ ಸೇತುವೆ ರಚನೆಯ ಹಂತದಲ್ಲಿದೆ, ಆದರೆ ಸಂಪರ್ಕ ರಸ್ತೆ ಇಲ್ಲದೆ ಶಾಲಾ ಮಕ್ಕಳು ಪರದಾಟದ ಸ್ಥಿತಿಯಲ್ಲಿರುವ ಸಂಗತಿಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗ್ರಾಮೀಣ ಭಾಗವಾದ ಕೊಲ್ಲಮೊಗ್ರದಿಂದ ವರದಿಯಾಗಿದೆ.
ಸುಳ್ಯ ತಾಲೂಕಿನ ಗ್ರಾಮೀಣ ಭಾಗವಾದ ಕೊಲ್ಲಮೊಗ್ರ ಸಂಪರ್ಕ ಹೊಂದಿರುವ ಪುಟ್ಟ ಹಳ್ಳಿ ಕಡಂಬಳ. ಸುಮಾರು 20-30 ಮನೆಗಳು ಇರುವ ಪ್ರದೇಶ ಇದು. ಇಲ್ಲಿ ಹರಿಯುವ ಹೊಳೆಯೊಂದು ಈ ಊರನ್ನು ಸಂಪರ್ಕ ಮಾಡಲು ಅಡ್ಡಿಯಾಗಿತ್ತು. ಸೇತುವೆ ನಿರ್ಮಾಣದ ಬೇಡಿಕೆ ಇತ್ತು. ಆ ಬೇಡಿಕೆ ಪೂರೈಕೆಯಾಗುತ್ತಿದೆ, ಸೇತುವೆ ನಿರ್ಮಾಣ ಹಂತದಲ್ಲಿದೆ. ಆದರೆ ಸದ್ಯ ಸಂಪರ್ಕ ರಸ್ತೆ ಇಲ್ಲದೆ ಶಾಲಾ ಮಕ್ಕಳು ಪರದಾಟ ನಡೆಸುವಂತಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಕೊಲ್ಲಮೊಗ್ರ ಕಡಂಬಳ ರಸ್ತೆಯಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. ಸದ್ಯ ಪಿಲ್ಲರ್ ಮಾತ್ರಾ ರಚನೆಯಾಗಿದೆ. ಈಗ ಮಳೆಯೂ ಆರಂಭವಾಗಿದೆ. ಕಳೆದ ಬಾರಿ ಹಾಗೂ ಅದಕ್ಕಿಂತ ಹಿಂದೆ ರಸ್ತೆ ಸಂಪರ್ಕ ಸರಿಯಾಗಿಲ್ಲದೆ ಹಾಗೂ ಹೊಳೆಯ ಕಾರಣದಿಂದ ಭಾರೀ ಮಳೆಯಾದರೆ 20 ಕುಟುಂಬ ಕೊಲ್ಲಮೊಗ್ರ ಪೇಟೆಯನ್ನು ಸಂಪರ್ಕ ಕಳೆದುಕೊಳ್ಳುತ್ತಿದ್ದರು. ತೀರಾ ಗ್ರಾಮೀಣ ಪ್ರದೇಶವಾದ್ದರಿಂದ ಪರದಾಟ ನಿತ್ಯವೂ ಇತ್ತು. ಇದೀಗ ಮಳೆಯ ಸಂದರ್ಭ ಹೊಸ ಸೇತುವೆ ನಿರ್ಮಾಣ ನಡೆಯುತ್ತಿದೆ. ಈ ಬಾರಿಯೂ ಇಲ್ಲಿನ ಜನರು ಹೊಳೆ ದಾಟಲು ಸಂಕಷ್ಟ ಪಡುವಂತಾಗಿದೆ. ಅದರಲ್ಲೂ ಶಾಲಾ ಮಕ್ಕಳಿಗೆ ನಡೆದಾಡಲು ಸಂಕಷ್ಟವಾಗಿದೆ. ಸುಮಾರು 15 – ಮಕ್ಕಳ ಈ ದಾರಿಯಾಗಿ ಬರುತ್ತಾರೆ. ಪ್ರಾಥಮಿಕ ಶಾಲಾ ಮಕ್ಕಳೂ ಇದ್ದಾರೆ. ಹೀಗಾಗಿ ಪೋಷಕರಿಗೂ ಭಯದ ವಾತಾವರಣ ನಿರ್ಮಾಣವಾಗಿದೆ. ಮಳೆಯಾದಾಗ ಸೇತುವೆ ಇಲ್ಲದ, ಸಂಪರ್ಕ ಸರಿಯಾಗಿಲ್ಲದ ಈ ದಾರಿಯಲ್ಲಿ ಮಕ್ಕಳು ಬರುವುದು ಆತಂಕವೂ ಆಗಿದೆ. ಹೀಗಾಗಿ ಸಂಬಂಧಿತರು ತಕ್ಷಣ ಗಮನಹರಿಸಿ ಸಮಸ್ಯೆ ಬಗೆಹರಿಸಲು ಒತ್ತಾಯ ಕೇಳಿಬಂದಿದೆ.