ಈ ಬಾರಿಯ ಮಳೆಗಾಲದ ವಾತಾವರಣ ವಿಚಿತ್ರವಾಗಿದೆ. ಜೂನ್ ತಿಂಗಳಲ್ಲಿ ಮುಂಗಾರು ದುರ್ಬಲವಾಯಿತು. ಜುಲೈ ಅಂತ್ಯವಾಗುತ್ತಾ ಬಂದರೂ ಮಳೆಯ ಪ್ರಮಾಣ ಸುಧಾರಿಸಿಲ್ಲ. ಇದೀಗ ಹಲವು ಕಡೆ ಎಳೆ ಅಡಿಕೆ ವಿಪರೀತ ಬೀಳುತ್ತಿರುವ ಬಗ್ಗೆ ಚರ್ಚೆ ಆರಂಭವಾಗಿದೆ. ಅಡಿಕೆ ಮರದ ಸೋಗೆಗಳು ಎಲೆಚುಕ್ಕಿ ಮಾದರಿಯಲ್ಲಿ ಕಂಡುಬರುತ್ತಿದೆ. ಮಳೆ ಬಿಟ್ಟ ತಕ್ಷಣವೇ ಸೆಖೆಯ ವಾತಾವರಣ ಕಂಡುಬರುತ್ತಿದೆ. ಇದೆಲ್ಲಾ ಅಡಿಕೆ ಕೃಷಿಯ ಮೇಲೆ ಪರಿಣಾಮ ಬೀರುತ್ತಿದೆಯೇ…?
ಅಡಿಕೆ ಬೆಳೆಗಾರರಿಗೆ ಈ ಬಾರಿ ಚಿಂತೆ ಆರಂಭವಾಗಿದೆ. ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಇದುವರೆಗೆ ಇಂತಹ ಚಿಂತೆ ಇರಲಿಲ್ಲ. ಈ ಬಾರಿಯ ಬೇಸಗೆಯಲ್ಲಿ ನೀರಿನ ಕೊರತೆ ಕಾಡಿತ್ತು, ಅಡಿಕೆ ಬೆಳೆಗಾರರಿಗೆ. ಜನವರಿಯಿಂದ ಜೂನ್‌ವರೆಗೂ ಮಳೆ ಕಾಣಲಿಲ್ಲ. ಹೀಗಾಗಿ ಕೊಳವೆಬಾವಿ, ಕೆರೆ ನೀರಿನ ಬಳಕೆ ಹೆಚ್ಚಾಗಿತ್ತು. ಹಲವು ಕೊಳವೆ ಬಾವಿಗಳ ನೀರಿನ ಮಟ್ಟ ಇಳಿಕೆಯಾಗಿತ್ತು. ವಾತಾವರಣದ ಉಷ್ಣತೆ ವಿಪರೀತವಾಗಿ ಏರಿಕೆಯಾಗಿತ್ತು. ಪರಿಣಾಮ ಹಲವು ತೋಟಗಳು ಒಣಗಿದವು. ಮಳೆ ಜೂನ್ ತಿಂಗಳಲಲಿ ವಿಳಂಬವಾಯಿತು. ಜುಲೈ ತಿಂಗಳಿನಿಂದ ಮಳೆಯಾದರೂ ಮುಂಗಾರು ದುರ್ಬಲ.
ಇದೀಗ ಎಳೆ ಅಡಿಕೆ ಬೀಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕೊಳೆರೋಗದ ಮಾದರಿಯಲ್ಲಿ ಅಡಿಕೆ ಬೀಳುತ್ತಿದೆ ಎಂದು ಹಲವು ಕೃಷಿಕರು ಹೇಳುತ್ತಾರೆ. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಪೆಂತಿ ಕೀಟದ ಸಮಸ್ಯೆಯಿಂದ ಎಳೆ ಅಡಿಕೆ ಬೀಳುವುದು ಕಂಡುಬರುತ್ತದೆ. ಆದರೆ ಈಗ ಅಡಿಕೆಯಲ್ಲಿ ಯಾವ ಸಮಸ್ಯೆಯೂ ಕಾಣದೆ ಎಳೆ ಅಡಿಕೆ ಬೀಳುವುದು ವಾತಾವರಣದ ಕಾರಣದಿಂದಲೇ ಎಂಬುದು ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ಕೃಷಿಕರೇ ಹೆಚ್ಚು ಗಮನಿಸಿ ವಿಜ್ಞಾನಿಗಳಿಗೆ ಮಾಹಿತಿ ನೀಡುವುದು ಅವಶ್ಯವಾಗಿದೆ. ಜುಲೈ ಅಂತ್ಯವಾದರೂ ವಾತಾವರಣದ ಉಷ್ಣತೆ ಕಡಿಮೆಯಾದಂತೆ ಕಾಣುತ್ತಿಲ್ಲ. ಈ ಕಾರಣದಿಂದಲೇ ಎಳೆ ಅಡಿಕೆ ಬೀಳುತ್ತಿದೆಯೇ ಎನ್ನುವುದು ಸಂದೇಹವಾಗಿದೆ. ಪ್ರತೀ ಬಾರಿ ಜೂನ್ ತಿಂಗಳಲ್ಲಿ ಬೋರ್ಡೋ ಸಿಂಪಡಣೆಯ ಬಳಿಕ ಎಳೆ ಅಡಿಕೆ ಬೀಳುವ ಸಮಸ್ಯೆ ಕಡಿಮೆಯಾಗುತ್ತಿತ್ತು. ಆದರೆ ಈ ಬಾರಿ ಎರಡು ಬಾರಿ ಸಿಂಪಡಣೆ ಆದ ತೋಟದಲ್ಲೂ ಅಡಿಕೆ ಬೀಳುವುದು ನಿಂತಿಲ್ಲ. ಹೀಗಾಗಿ ಈ ಬಾರಿಯ ಅಡಿಕೆ ಫಸಲಿನ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆ.
ಇದೇ ವೇಳೆ ಅಡಿಕೆ ಮರದ ಸೋಗೆಗಳು ಒಣಗಿದಂತೆ ಕಾಣುತ್ತಿದೆ. ಇದು ಕೂಡಾ ಬೇಸಗೆಯಲ್ಲಿ ನೀರಿನ ಕೊರತೆಯಿಂದ ಒಣಗಿದ ಕಾರಣದಿಂದಲೇ ಎಲೆಚುಕ್ಕಿ ಮಾದರಿಯಲ್ಲಿ ಈಗ ಕಾಣುತ್ತಿದೆ. ಇದೆಲ್ಲವೂ ಕೃಷಿಕರಿಗೆ ಚಿಂತೆಗೆ ಕಾರಣವಾಗಿದೆ.
ಈ ನಡುವೆ ಈ ಬಾರಿ ರಬ್ಬರ್ ಇಳುವರಿಯಲ್ಲೂ ಕೊರತೆ ಇದೆ. ತೆಂಗಿನ ಕೃಷಿಯಲ್ಲೂ ಇಳುವರಿ ಕೊರತೆಯಾಗಿರುವ ಬಗ್ಗೆ ಕೃಷಿಕರು ಮಾಹಿತಿ ನೀಡುತ್ತಾರೆ. ಈ ಬಾರಿಯ ವಾತಾವರಣವು ಹಲವು ಕೃಷಿಗೆ ಸಮಸ್ಯೆಯಾದಂತೆ ಕಂಡುಬಂದಿದೆ.