ದೇಶದ ಕೃಷಿಗಾಗಿ ಕೇಂದ್ರ ಸರ್ಕಾರದ ಯೋಜನೆಗಳೇನು..? | ಕೇಂದ್ರ ಕೃಷಿ ಸಚಿವರು ಶಿವರಾಜ್ ಸಿಂಗ್ ಚೌಹಾಣ್ ಉತ್ತರಿಸಿದ್ದಾರೆ…

August 21, 2024
12:02 PM

ಕೃಷಿ ಅಭಿವೃದ್ಧಿ(Agricultural development) ಹಾಗೂ ರೈತರ(Farmer) ಕಲ್ಯಾಣವೇ ನಮ್ಮ ಸರ್ಕಾರದ ಪ್ರಮುಖ ಆದ್ಯತೆ. ನಮ್ಮ ಜೀವನಾಧಾರದ ವಾಸ್ತುಶಿಲ್ಪಿಗಳಾದ ಅನ್ನದಾತರ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿಯನ್ನು ತರುವುದು ನಮ್ಮ ಸಂಕಲ್ಪ. ಅದನ್ನು ಸಾಕಾರಗೊಳಿಸಲು ನಾವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಕೈಗೊಳ್ಳುತ್ತೇವೆ. ರೈತರ ಆದಾಯ(Income) ಹೆಚ್ಚಿಸಲು ನಾವು ಆರು ಅಂಶಗಳ ಕಾರ್ಯವಿಧಾನಗಳನ್ನು ರೂಪಿಸಿದ್ದೇವೆ. ಉತ್ಪಾದನೆಯನ್ನು ಹೆಚ್ಚಿಸುವುದು, ಕೃಷಿ ಉತ್ಪನ್ನಗಳ ವೆಚ್ಚ ತಗ್ಗಿಸುವುದು, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಒದಗಿಸುವುದು, ಪ್ರಕೃತಿ ವಿಕೋಪಗಳು ತಲೆದೋರಿದ ಸಂದರ್ಭದಲ್ಲಿ ಸೂಕ್ತ ಆರ್ಥಿಕ ನೆರವು ಕಲ್ಪಿಸುವುದು, ವೈವಿಧ್ಯದ ಕೃಷಿ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸುವ ಮಹತ್ವದ ಚಿಂತನೆಯನ್ನು ರೂಪಿಸಲಾಗಿದೆ.

Advertisement

ಉತ್ಪಾದನೆಯನ್ನು ಹೆಚ್ಚಿಸಲು ಹಾಗೂ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಪ್ರಮುಖ ಅಂಶವೆAದರೆ ಅದು ಗುಣಮಟ್ಟದ ಉತ್ತಮ ಬಿತ್ತನೆ ಬೀಜಗಳು. ಗುಣಮಟ್ಟದ ಬೀಜಗಳನ್ನು ಬಳಸಿದರೆ ನೀರಿನ ಕೊರತೆಯಿರುವ ಪ್ರದೇಶಗಳು ಹಾಗೂ ಪ್ರತಿಕೂಲ ಹವಾಮಾನದ ಪರಿಸ್ಥಿತಿಯಲ್ಲೂ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 109 ಹೊಸ ತಳಿಯ ಬೀಜಗಳನ್ನು ರೈತರಿಗೆ ಮತ್ತು ದೇಶಕ್ಕೆ ಸಮರ್ಪಿಸಿದ್ದಾರೆ. ಕಳೆದ ದಶಕದಲ್ಲಿ ಕೃಷಿ ಭೂರಚನೆಯು ಬಹಳ ವೇಗವಾಗಿ ಬದಲಾಗಿದೆ. ಹಾಗಾಗಿ ಸದ್ಯದ ಜಾಗತಿಕ ತಾಪಮಾನ ಮತ್ತು ಪರಿಸರ ಅಸಮತೋಲನಗಳು ಸೃಷ್ಟಿಸುವ ಸಮಸ್ಯೆಗಳನ್ನು ನಿವಾರಿಸಿಕೊಂಡು ಹೆಚ್ಚು ಉತ್ಪಾದನೆ ಮಾಡಬೇಕಾದುದು ಸವಾಲೆನಿಸಿದೆ. ಈ ಸವಾಲನ್ನು ಎದುರಿಸುವ ನಿಟ್ಟಿನಲ್ಲಿ ಮುಂದಿನ 5 ವರ್ಷಗಳಲ್ಲಿ ನಾವು 1500 ಹೊಸ ಬಗೆಯ ಹವಾಮಾನ ಸ್ನೇಹಿ ತಳಿಯ ಬೆಳೆಗಳನ್ನು ಅಭಿವೃದ್ಧಿಪಡಿಸುತ್ತೇವೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರ ಹಿತ ರಕ್ಷಿಸಲು ವಿಜ್ಞಾನವಷ್ಟೇ ಪರಿಣಾಮಕಾರಿ ಪರಿಹಾರವೆನಿಸಿದೆ. ಹವಾಮಾನ ಸ್ನೇಹಿ ಕೃಷಿ ಉತ್ಪನ್ನ ತಳಿಗಳನ್ನು ಅಭಿವೃದ್ಧಿಪಡಿಸುತ್ತಿರುವ ನಮ್ಮ ಕೃಷಿ ವಿಜ್ಞಾನಿಗಳ ಬಗ್ಗೆ ನನಗೆ ಬಹಳ ಹೆಮ್ಮೆ ಎನಿಸುತ್ತದೆ. ಹಾಗೆಯೇ ಕೃಷಿ ಕ್ಷೇತ್ರದಲ್ಲಿ ಸೃಷ್ಟಿಯಾಗುತ್ತಿರುವ ಆವಿಷ್ಕಾರಗಳು ಕೃಷಿ ಚಟುವಟಿಕೆ ಹಾಗೂ ಕೃಷಿಕರ ಕಲ್ಯಾಣಕ್ಕೆ ಖಾತರಿ ನೀಡಲಿವೆ ಎಂದು ನಾನು ದೃಢವಾಗಿ ನಂಬಿದ್ದೇನೆ. ಸ್ವತಃ ಒಬ್ಬ ರೈತನಾಗಿರುವ ನನಗೆ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಉತ್ಪಾದನೆ ಪಡೆಯಲು ಉತ್ತಮ ಬೀಜಗಳು ಎಷ್ಟು ಮುಖ್ಯ ಎಂಬುದನ್ನು ಚೆನ್ನಾಗಿ ಅರಿತಿದ್ದೇನೆ. ಒಂದು ನಿರ್ದಿಷ್ಟ ಪ್ರದೇಶದ ಮಣ್ಣು ಹಾಗೂ ಹವಾಮಾನಕ್ಕೆ ಪೂರಕವಾದ ಗುಣಮಟ್ಟದ ಬೀಜಗಳನ್ನು ಬಿತ್ತನೆ ಮಾಡಿದರೆ ಖಂಡಿತವಾಗಿಯೂ ಉತ್ಪಾದನೆಯಲ್ಲಿ ಗಣನೀಯ ಏರಿಕೆಯಾಗುವುದು ಕಂಡುಬರುತ್ತದೆ. ಈ ವಾಸ್ತವವನ್ನು ಅರಿತಿರುವ ಮೋದಿ ಅವರು ಈ ನಿಟ್ಟಿನಲ್ಲಿ ಇನ್ನಷ್ಟು ವಿಶಾಲ ಹಾಗೂ ಪರಿಣಾಮಕಾರಿ ದೃಷ್ಟಿಕೋನದಿಂದ ಕಾರ್ಯನಿರ್ವಹಿಸುವಂತೆ ನಮಗೆ ಮಾರ್ಗದರ್ಶನ ನೀಡಿದ್ದಾರೆ.

ವೈವಿಧ್ಯತೆಯು ಭಾರತದ ಕೃಷಿ ಜಾಯಮಾನದ ವಿಶೇಷ ಗುಣಲಕ್ಷಣವೆನಿಸಿದೆ. ಹಾಗಾಗಿ ಅತಿ ಕಡಿಮೆ ವಿಸ್ತೀರ್ಣದ ಅಂತರಕ್ಕೂ  ಕೃಷಿ ಭಿನ್ನ ರೀತಿಯಲ್ಲಿ ವಿಕಸನಗೊಂಡಿರುತ್ತದೆ. ಅದಕ್ಕೆ ಉದಾಹರಣೆ ರೂಪದಲ್ಲಿ ಹೇಳುವುದಾದರೆ, ಬಯಲು ಸೀಮೆ ಪ್ರದೇಶದಲ್ಲಿನ ಕೃಷಿಗೆ ಹೋಲಿಸಿದರೆ ಬೆಟ್ಟ-ಗುಡ್ಡ ಹಾಗೂ ಪರ್ವತ ಪ್ರದೇಶಗಳಲ್ಲಿನ ಕೃಷಿ ಬಹಳ ಭಿನ್ನವಾಗಿರುತ್ತದೆ. ಈ ಎಲ್ಲ ರೀತಿಯ ವೈವಿಧ್ಯ ಹಾಗೂ ವೈರುಧ್ಯಗಳನ್ನು ಗಮನದಲ್ಲಿಟ್ಟುಕೊಂಡೇ 109 ಹೊಸ ತಳಿಯ ಬೀಜಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದ್ದೇವೆ. ಈ 109 ಹೊಸ ತಳಿಗಳಲ್ಲಿ 69 ತಳಿಗಳು ಸಾಮಾನ್ಯ ಕೃಷಿಗೆ ಹಾಗೂ 40 ತಳಿಗಳು ತೋಟಗಾರಿಕೆ ಬಳಕೆಗೆ ಸೇರಿದ್ದಾಗಿವೆ. ಮೋದಿ ಅವರ ಸರ್ಕಾರವು ಆರೋಗ್ಯಕರ ಗುಣಮಟ್ಟದ ಆಹಾರವನ್ನು ಉತ್ತೇಜಿಸಲು ಮತ್ತು ಭಾರತವನ್ನು ಜಾಗತಿಕ ಪೋಷಣೆಯ ಕೇಂದ್ರವನ್ನಾಗಿ ಮಾಡಲು ನಿರ್ಧರಿಸಿರುವ ಜತೆಗೆ ಆ ನಿಟ್ಟಿನಲ್ಲಿ ಬದ್ಧತೆಯನ್ನೂ ತೋರಿಸುತ್ತಿದೆ.

ರೈತರ ಶ್ರಮದ ಮೌಲ್ಯಮಾಪನ ಸರಿಯಾಗಿ ನಡೆಯುವಂತೆ ಮಾಡುವುದು ಹಾಗೂ ಅವರ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡುವುದು ನಮ್ಮ ದೃಢ ಸಂಕಲ್ಪವಾಗಿದೆ. ಆ ಹಿನ್ನೆಲೆಯಲ್ಲೇ ನಾವು ರೈತರ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿದ್ದೇವೆ. ನಮ್ಮ ರೈತರ ಆದಾಯವನ್ನು ಹೆಚ್ಚಿಸುವುದು ಹಾಗೂ ಉತ್ಪಾದನೆಯನ್ನು ವೃದ್ಧಿಸುವುದು ನಮ್ಮ ಆದ್ಯತೆಯಾಗಿದೆ. ಹಾಗೆಯೇ ನಮ್ಮ ಕೃಷಿ ಉತ್ಪನ್ನಗಳು ಬಳಕೆಗೆ ಸುರಕ್ಷಿತವಾಗಿವೆ ಹಾಗೂ ನಮ್ಮ ಮಣ್ಣಿ ಆರೋಗ್ಯ ರಕ್ಷಣೆಗೂ ಸಹಕಾರಿಯಾಗಿದೆ  ಎಂಬುದನ್ನು ಖಾತರಿಪಡಿಸಿಕೊಳ್ಳುವ ಕಾಳಜಿಯನ್ನೂ ದೇಶ ವಹಿಸುತ್ತಿದೆ. ಭಾರತ ಇಂದು ಹೊಸ ಹಸಿರು ಕ್ರಾಂತಿಗೆ ಸಾಕ್ಷಿಯಾಗಿದೆ. ಆ ಮೂಲಕ ನಮ್ಮ ಆಹಾರ ಪೂರೈಕೆದಾರರು ಕ್ರಮೇಣ ಇಂಧನ ಪೂರೈಕೆದಾರರು ಮತ್ತು ತೈಲ ಪೂರೈಕೆದಾರರಾಗಿ ಹೊರಹೊಮ್ಮುತ್ತಿದ್ದಾರೆ. ಮೋದಿ ಅವರ ಅವಿರತ ಪ್ರಯತ್ನದ ಫಲವಾಗಿ ಪಶುಸಂಗೋಪನೆ, ಜೇನು ಸಾಕಣೆ, ಔಷಧೀಯ ಬೆಳೆ ಕೃಷಿ, ಹೂವು ಮತ್ತು ಹಣ್ಣು ಇತರೆ ಕೃಷಿಗಳು ಸಾಮಾನ್ಯ ಕೃಷಿಯೊಂದಿಗೆ ಬೆಳವಣಿಗೆ ಹೊಂದುತ್ತಾ ಸದೃಢವಾಗುತ್ತಿವೆ.

ಹಿಂದಿನ ಸರ್ಕಾರಗಳು ಎಂದಿಗೂ ಕೃಷಿ ಮತ್ತು ರೈತರಿಗೆ ಆದ್ಯತೆಯನ್ನೇ ನೀಡದೆ ಕಡೆಗಣಿಸಿದ್ದವು. ಆದರೆ ಮೋದಿ ನಾಯಕತ್ವದಲ್ಲಿ ಕೃಷಿ ಕ್ಷೇತ್ರವು ಇಂದು ಅಭೂತಪೂರ್ವ ಪ್ರಗತಿಯನ್ನು ಕಾಣುತ್ತಿದೆ. 2013-14ನೇ ಸಾಲಿನ ಬಜೆಟ್‌ನಲ್ಲಿ ಕೃಷಿ ಸಚಿವಾಲಯಕ್ಕರ ಕಾಯ್ದಿರಿಸಿದ್ದ ಅನುದಾನ 27,663 ಕೋಟಿ ರೂ. ಆಗಿದ್ದರೆ, ಪ್ರಸಕ್ತ 2024-25ನೇ ಸಾಲಿನ ಬಜೆಟ್‌ನಲ್ಲಿ ಕೃಷಿ ಸಚಿವಾಲಯಕ್ಕೆ ಮೀಸಲಿಟ್ಟ ಅನುದಾನ 1,32,470 ಕೋಟಿ ರೂ.ಗೆ ಏರಿಕೆಯಾಗಿದೆ. ಬಜೆಟ್‌ನಲ್ಲಿ ಕಾಯ್ದಿರಿಸುವ ಈ ಅನುದಾನವನ್ನು ಕೃಷಿ ಇಲಾಖೆಗಷ್ಟೇ ಸೀಮಿತವಾಗಿ ನೀಡಲಾಗಿದೆ. ಉಳಿದಂತೆ ಕೃಷಿ ಮತ್ತು ರಸಗೊಬ್ಬರ ಸಬ್ಸಿಡಿ ಸೇರಿದಂತೆ ಇತರೆ ಕ್ಷೇತ್ರಗಳಿಗೆ ಪ್ರತ್ಯೇಕ ಅನುದಾನ ಕಾಯ್ದಿರಿಸಲಾಗಿದೆ. ಮೋದಿ ಸರ್ಕಾರವು ರೈತರಿಗೆ ಕಡಿಮೆ ದರದಲ್ಲಿ ಯೂರಿಯಾ ಮತ್ತು ಡಿಎಪಿ (ಡೈಅಮೋನಿಯಂ ಫಾಸ್ಫೇಟ್) ನೀಡುತ್ತಿದೆ. ಸರ್ಕಾರವು ರೈತರಿಗೆ ಪ್ರತಿ ಚೀಲ ಯೂರಿಯಾ ಮೇಲೆ ಸುಮಾರು 2,100 ರೂ. ಮತ್ತು ಡಿಎಪಿ ಮೇಲೆ 1,083 ರೂ. ಸಹಾಯಧನ ನೀಡುತ್ತಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ರೈತರು ಮತ್ತಷ್ಟು ಸ್ವಾವಲಂಬಿಗಳಾಗುವ ಜತೆಗೆ ಸಬಲರಾಗಿದ್ದಾರೆ. ಹಾಗೆಯೇ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು ಬೆಳೆ ನಷ್ಟದ ಸಂದರ್ಭದಲ್ಲಿ ರೈತರಿಗೆ ದೊಡ್ಡ ವಿಮಾ ರಕ್ಷಣೆ ಯೋಜನೆಯಾಗಿ ನೆರವಾಗುತ್ತಿದೆ. ಬೀಜ ಪೂರೈಕೆಯಿಂದ ಹಿಡಿದು ಮಾರುಕಟ್ಟೆ ಒದಗಿಸುವವರೆಗೆ, ರೈತರನ್ನು ಸಬಲೀಕರಣ ಮತ್ತು ರೈತರಿಗೆ ಕೃಷಿ ಚಟುವಟಿಕೆಯನ್ನು ಸಾಧ್ಯವಾದಷ್ಟು ಸುಗಮ- ಸುಲಭಗೊಳಿಸುವುದು, ಅವರ  ಮಸ್ಯೆಗಳನ್ನು ನಿವಾರಿಸುವ ಜತೆಗೆ ಲಾಭ ಪ್ರಮಾಣ ಹೆಚ್ಚಾಗುವಂತೆ ಮಾಡುವ ನಿಟ್ಟಿನಲ್ಲಿ ಪ್ರತಿ ಹಂತದಲ್ಲೂ ಮೋದಿ ಸರ್ಕಾರವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಆ ದಿಸೆಯಲ್ಲೇ ನಾವು 1 ಲಕ್ಷ ಕೋಟಿ ರೂ. ಗಳ ಕೃಷಿ ಮೂಲಸೌಕರ್ಯ ನಿಧಿ ಸ್ಥಾಪನೆ ಮೂಲಕ ಕೃಷಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಮುಂದಾಗುತ್ತಿದ್ದೇವೆ. ಸುಮಾರು 700ಕ್ಕೂ ಹೆಚ್ಚು ಕೃಷಿ ವಿಜ್ಞಾನ ಕೇಂದ್ರಗಳು ರೈತರನ್ನು ವಿಜ್ಞಾನದೊಂದಿಗೆ ಸಂಯೋಜಿಸಲಿವೆ. “ನಮೋ ಡ್ರೋನ್ ದೀದಿ ಯೋಜನೆ”ಯ ಮೂಲಕ ದೂರ ದೂರದ ಪ್ರದೇಶಗಳಲ್ಲಿರುವ ನಮ್ಮ ತಾಯಂದಿರು ಮತ್ತು ಸಹೋದರಿಯರನ್ನು ತಂತ್ರಜ್ಞಾನದೊಂದಿಗೆ ಸಂಪರ್ಕಿಸಲು ಸಾಧ್ಯವಾಗುತ್ತಿದೆ. ಈ ಅಭಿಯಾನದ ಮೊದಲ ಹಂತವಾಗಿ ಕೃಷಿ ಸಖಿ ಮೂಲಕ 35,000 ಕೃಷಿ ಸಿಬ್ಬಂದಿಗೆ ತರಬೇತಿಯನ್ನೂ ಕಲ್ಪಿಸಿದ್ದೇವೆ.

ಭಾರತವನ್ನು ಕೃಷಿಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ಮೋದಿ ಅವರು ಸಂಕಲ್ಪ ತೊಟ್ಟಿದ್ದಾರೆ. ಅದನ್ನು ಸಾಕಾರಗೊಳಿಸುವ ಸಲುವಾಗಿ ಆ ದಿಸೆಯಲ್ಲಿ ಸೂಕ್ತ ಕಾರ್ಯವಿಧಾನಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ 100 ರಫ್ತು ಆಧಾರಿತ ತೋಟಗಾರಿಕೆ ಕ್ಲಸ್ಟರ್‌ಗಳನ್ನು 18,000 ಕೋಟಿ ರೂ. ವೆಚ್ಚದಲ್ಲಿ ರೂಪಿಸುತ್ತೇವೆ. ಹಾಗೆಯೇ, 1500ಕ್ಕೂ ಹೆಚ್ಚು ಕೃಷಿ ಮಾರುಕಟ್ಟೆಗಳನ್ನು ಸಂಯೋಜಿಸುವ ಮೂಲಕ ರೈತರ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು ಒತ್ತು ನೀಡಲಾಗುವುದು. ಜತೆಗೆ, ನಾವು  6800 ಕೋಟಿ ರೂ. ವೆಚ್ಚದಲ್ಲಿ ಎಣ್ಣೆಬೀಜ ಮಿಷನ್ ಅನ್ನು ಆರಂಭಿಸುತ್ತಿದ್ದೇವೆ. ಸರ್ಕಾರವು ತರಕಾರಿ ಉತ್ಪಾದನಾ  ಕ್ಲಸ್ಟರ್‌ಗಳನ್ನು ರಚಿಸುವ ನಿಟ್ಟಿನಲ್ಲೂ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಸಣ್ಣ ರೈತರು ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸಲು ಮತ್ತು ಅವರ ತರಕಾರಿಗಳು, ಹಣ್ಣುಗಳು, ಇತರ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆಯಲು ನೆರವಾಗಲಿದೆ.

ಸರ್ಕಾರವು ಬೇಳೆಕಾಳುಗಳ ಪೈಕಿ ತೊಗರಿ ಬೇಳೆ, ಉದ್ದಿನಬೇಳೆ ಮತ್ತು ಅವರೆ ಬೇಳೆ (ಮಸೂರ್ ದಾಲ್)ಯನ್ನು ಸಂಪೂರ್ಣವಾಗಿ ಎAಎಸ್‌ಪಿ ದರದಲ್ಲೇ ಖರೀದಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ. ಯಜುರ್ವೇದದಲ್ಲಿ “ಅನ್ನನಾಂ ಪತಯೇ ನಮಃ, ಕ್ಷೇತ್ರಾಣಾಂ ಪತಯೇ ನಮಃ” ಎಂಬ ಒಂದು ಉಕ್ತಿ ಇದೆ. ಅದರ ಅರ್ಥ “ಧಾನ್ಯಗಳನ್ನು ಉತ್ಪಾದಿಸುವವರಿಗೆ ಮತ್ತು ಹೊಲಗಳ ಪಾಲಕರ ಮುಂದೆ ನಾವು ತಲೆಬಾಗಿ ನಮಸ್ಕರಿಸುತ್ತೇವೆ” ಎಂದು. ಹಾಗೆಯೇ ಕೃಷಿ ಪರಾಶರದಲ್ಲೂ “ಆಹಾರವೇ ಜೀವನ, ಆಹಾರವೇ ಶಕ್ತಿ ಮತ್ತು ಆಹಾರವು ಎಲ್ಲಾ ಅಗತ್ಯಗಳನ್ನು ಪಡೆಯುವ ಸಾಧನ” ಎಂದು ಉಲ್ಲೇಖಿಸಲಾಗಿದೆ. ರೈತರಿಲ್ಲ ಎಂದಾದರೆ ನಮ್ಮ ದೇಶದ ಅಸ್ತಿತ್ವವೇ ಅಪೂರ್ಣವೆನಿಸುತ್ತದೆ. ಆ ಕಾರಣಕ್ಕಾಗಿಯೇ ನಮ್ಮ ಪ್ರಾಚೀನ ಗ್ರಂಥಗಳಲ್ಲಿಯೂ ರೈತರನ್ನು ಗೌರವಿಸಿರುವುದನ್ನು ಕಾಣುತ್ತೇವೆ. ಕೃಷಿ ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದ್ದರೆ, ರೈತರು ಅದರ ಆತ್ಮದಂತೆ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ರೈತರ ಸೇವೆ ದೇವರಿಗೆ ಸಲ್ಲಿಸುವ ಪೂಜೆಗೆ ಸಮಾನವಾಗಿದೆ.

ಇಂದು, ಪ್ರಧಾನಿ ಮೋದಿ ಅವರ ದೀರ್ಘಾವಧಿಯ, ಸರ್ವಾಂಗೀಣ, ಸಮಗ್ರ ಮತ್ತು ಸರ್ವರ ಪ್ರಗತಿಯ ದೂರದರ್ಶಿತ್ವದ ಅಭಿವೃದ್ಧಿಯ ಪ್ರಯತ್ನಗಳಿಂದ ಭಾರತ ಮತ್ತು ನಮ್ಮ ಕೃಷಿ ಕ್ಷೇತ್ರವು ಸುಸ್ಥಿರ ಪ್ರಗತಿಯ ಹಾದಿಯತ್ತ ದಾಪುಗಾಲು ಇಡುತ್ತಿದೆ. ಭಾರತದ ಸ್ವಾತಂತ್ರ‍್ಯದ ಸುವರ್ಣ ಯುಗದಲ್ಲಿ (ಆಜಾದಿ ಕಾ ಅಮೃತ್ ಕಾಲ್) ನಮ್ಮ ರೈತ ಸಹೋದರರು ಮತ್ತು  ಸಹೋದರಿಯರು ಸ್ವಾವಲಂಬಿ ಮತ್ತು ಸಮೃದ್ಧಿ ಹೊಂದಲಿದ್ದಾರೆ ಎಂಬ ಪೂರ್ಣ ವಿಶ್ವಾಸ ನನಗಿದೆ. ಹಾಗೆಯೇ ನಮ್ಮ ದೇಶದ ಧಾನ್ಯಗಳು ಶ್ರೀಮಂತಿಕೆ ಮತ್ತು ಸಮೃದ್ಧಿಯಿಂದ ವೃದ್ಧಿಸುತ್ತಲೇ ಇರುತ್ತವೆ.

ಬರಹ :
ಶಿವರಾಜ್ ಸಿಂಗ್ ಚೌಹಾಣ್
,   (ಕೇಂದ್ರ ಕೃಷಿ, ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು)

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 25-04-2025 | ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ |
April 25, 2025
2:04 PM
by: ಸಾಯಿಶೇಖರ್ ಕರಿಕಳ
ಒತ್ತುವರಿಯಾಗಿರುವ  ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿ ಸೂಚನೆ
April 25, 2025
7:47 AM
by: The Rural Mirror ಸುದ್ದಿಜಾಲ
ಭಾರತದಿಂದ ಅಫ್ಘಾನಿಸ್ತಾನಕ್ಕೆ 4.8 ಟನ್ ಜೀವರಕ್ಷಕ ಲಸಿಕೆ ರವಾನೆ
April 25, 2025
7:42 AM
by: The Rural Mirror ಸುದ್ದಿಜಾಲ
ಭ್ರಷ್ಟಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ  | ಉಪಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ
April 25, 2025
7:31 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group