ಜೇನುಸಾಕಣೆ ಕೇವಲ ಒಂದು ಉಪಕಸುಬು ಮಾತ್ರವಲ್ಲ, ಹಲವಾರು ಕುಟುಂಬಗಳಿಗೆ ಜೇನುಸಾಕಣೆಯೇ ಮುಖ್ಯ ಉದ್ಯೋಗವಾಗಿದೆ. ಜೇನುತುಪ್ಪ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಗುರಿ ಹೊಂದಿರುವ ಕೇಂದ್ರ ಸರ್ಕಾರ ಈ ಈ ನಿಟ್ಟಿನಲ್ಲಿ ವೈಜ್ಞಾನಕ ವಿಧಾನದಲ್ಲಿ ಜೇನುಸಾಕಣೆಗೆ ಉತ್ತೇಜಿಸಲು ನ್ಯಾಷನಲ್ ಬೀಕೀಪಿಂಗ್ ಅಂಡ್ ಹನಿ ಮಿಷನ್ ಅನ್ನು ನಡೆಸುತ್ತಿದೆ.
ರಾಷ್ಟ್ರೀಯ ಜೇನು ಮಂಡಳಿ ಮೂಲಕ 2020-21ರಲ್ಲಿ ರಾಷ್ಟ್ರೀಯ ಜೇನುಸಾಕಣೆ ಮಿಷನ್ ಅನ್ನು 500 ಕೋಟಿ ರೂ ಬಜೆಟ್ ನಲ್ಲಿ ಮೂರು ವರ್ಷಗಳಿಗೆ ಆರಂಭಿಸಲಾಗಿತ್ತು. ನಂತರ ಇನ್ನೂ ಮೂರು ವರ್ಷ ವಿಸ್ತರಿಸಲಾಗಿದೆ. ಈ ಸ್ಕೀಮ್ 2025-26ವರೆಗೂ ಇರುತ್ತದೆ. ಅಂದರೆ 2026ರ ಮಾರ್ಚ್ 31 ರವರೆಗೂ ಜೇನುಸಾಕಣೆ ಯೋಜನೆ ಚಾಲನೆಯಲ್ಲಿ ಇರಲಿದೆ.
ಭಾರತದಲ್ಲಿ ಜೇನುಸಾಕಣೆಗೆ ಅನುಕೂಲವಾಗಿರುವಂತಹ ವೈವಿಧ್ಯಮಯ ಕೃಷಿ ವಾತಾವರಣ ಇದೆ. ಇದು ಗ್ರಾಮೀಣ ಭಾಗದ ಜನರ ಬದುಕಿಗೆ ಆಧಾರವಾಗುವುದರ ಜೊತೆ ಜೇನು ಉತ್ಪನ್ನಗಳಲ್ಲಿ ಸ್ವಾವಲಂಬನೆ ಸಾಧಿಸಲು ಬೇಕಾದ ಸಾಮರ್ಥ್ಯ ಇರುವುದನ್ನು ಸರ್ಕಾರ ಕಂಡುಕೊಂಡಿದೆ. ಈ ಕಾರಣಕ್ಕೆ ರಾಷ್ಟ್ರೀಯ ಜೇನುಸಾಕಾಣೆ ಯೋಜನೆ(ಎನ್ ಬಿಎಚ್ಎಂ) ಅನ್ನು ಸರ್ಕಾರ ಹಮ್ಮಿಕೊಂಡಿದೆ.
ಜೇನುಸಾಕಣೆ ಯೋಜನೆಯನ್ನು ಮೂರು ಮುಖ್ಯ ಉಪಮಿಷನ್ ಗಳಾಗಿ ವಿಂಗಡಿಸಲಾಗಿದೆ. ಮೊದಲನೇ ಮಿಷನ್ ನಲ್ಲಿ ವೈಜ್ಞಾನಿಕವಾಗಿ ಜೇನುಸಾಕಣೆ ಮೂಲಕ ಬೆಳೆಗಳ ಉತ್ಪಾದನೆಗೆ ಪುಷ್ಟ ಕೊಡಲಾಗುತ್ತದೆ. ಎರಡನೇ ಮಿಷನ್ ನಲ್ಲಿ ಜೇನು ಉತ್ಪನ್ನಗಳ ಸಂಗ್ರಹ ಸಂಸ್ಕರಣೆ, ಮಾರಾಟ, ಮೌಲ್ಯ ವರ್ಧನೆ ಇತ್ಯಾದಿ ಕಾರ್ಯಗಳತ್ತ ಗಮನ ನೀಡಲಾಗುತ್ತದೆ. ಮೂರನೇ ಮಿನಿ ಮಿಷನ್ ನಲ್ಲಿ ವಿವಿಧ ಪ್ರದೇಶಗಳ ವಾತಾವರಣ ಮತ್ತು ಸಾಮಾಜಿಕ ಆರ್ಥಿಕ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಸೂಕ್ತ ವಿಧಾನದ ಜೇನುಸಾಕಣೆಗೆ ಬೇಕಾದ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಪಡಿಸಲು ಒತ್ತುಕೊಡಲಾಗುತ್ತದೆ.


