ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಲ್ಲಿರುವ ಪದವಿಪೂರ್ವ ಕಾಲೇಜಿನಲ್ಲಿ ಹೈಸ್ಕೂಲ್ ವಿಭಾಗದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಗುರುರಾಜ್ ವಿರುದ್ಧ ಕಾಲೇಜು ವಠಾರದಲ್ಲಿ ಸಾರ್ವಜನಿಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅತ್ಯಾಚಾರ ಆರೋಪದ ಶಿಕ್ಷಕನ ವಜಾ ಮಾಡಬೇಕು ಹಾಗೂ ಆತನ ಮೊದಲನೇ ಮದುವೆಯಾದಲ್ಲಿಂದಲೇ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಶಿಕ್ಷಕ ಗುರುರಾಜ್ ವಿದ್ಯಾರ್ಥಿನಿಯೊಬ್ಬಳನ್ನು ಪ್ರಾಜೆಕ್ಟ್ ಕೆಲಸ ಹಾಗೂ ಟ್ಯೂಷನ್ ನೆಪದಲ್ಲಿ ಮನೆಗೆ ಕರೆಯಿಸಿ ಲೈಂಗಿಕ ಕಿರುಕುಳ ನೀಡುತ್ತಿರುವ ಹಾಗೂ ಅತ್ಯಾಚಾರ ಮಾಡಿದ ಬಗ್ಗೆ ವಿದ್ಯಾರ್ಥನಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಗುರುರಾಜ್ ವಿಕೃತಕಾಮಿ ಎಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿತ್ತು. ಹೀಗಾಗಿ ಫೋಕ್ಸೋ ಕಾಯಿದೆಯನ್ವಯ ಅಪ್ತಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ನಡೆಸಿದ ಬಗ್ಗೆ ಕೇಸು ದಾಖಲಾಗಿತ್ತು. ಆರೋಪಿ ಶಿಕ್ಷಕ ಗುರುರಾಜ್ ಮೊದಲ ಪತ್ನಿ ಮೃತಪಟ್ಟಿದ್ದು ಎರಡನೇ ಮದುವೆಯಾಗಿದೆ. ಹೀಗಾಗಿ ಮೊದಲನೇ ಪತ್ನಿ ಮೃತಪಟ್ಟಲ್ಲಿಂದಲೇ ತನಿಖೆಯಾಗಬೇಕು, ಈ ಶಿಕ್ಷಕನಿಗೆ ಇಂತಹದ್ದೇ ಕೃತ್ಯ ಇರುವ ಶಂಕೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅದಲ್ಲದೆ ಈತನಿಗೆ ಬೆಂಬಲ ನೀಡುವ ಇನ್ನೂ ಕೆಲವರು ಇರುವ ಅನುಮಾನವೂ ಇದ್ದು ಈ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.