ಗ್ರಾಮೀಣ ಜನರು ತಮ್ಮ ಊರಿನ ಬೇಡಿಕೆ ಈಡೇರಿಕೆಗೆ ಹೋರಾಟ ಮಾಡಬೇಕಾದ ಸಂದರ್ಭ ಬಂದಿದೆ. ದೇಶವು ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುತ್ತಿರುವ ವೇಳೆ ಗ್ರಾಮೀಣ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಿರುವುದು ಹಾಗೂ ನಡೆಸಬೇಕಾಗಿ ಬಂದಿರುವುದು ಇನ್ನಷ್ಟು ಅಭಿವೃದ್ಧಿಯ ಸೂಚಕವಾಗಿದೆ. ಇದೀಗ ಇದೇ ಮಾದರಿಯ ಹೋರಾಟವೊಂದು ಸುಳ್ಯದಲ್ಲಿ ರೂಪುಗೊಂಡಿದೆ. ಸುಳ್ಯ – ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆ ಅಭಿವೃದ್ಧಿಗಾಗಿ ಕಳೆದ ಕೆಲವು ಸಮಯಗಳಿಂದ ಆರಂಭಗೊಂಡ ಹೋರಾಟ ಇದೀಗ ತೀವ್ರಗೊಂಡಿದೆ.
ಮಾ.14 ರಂದು ಸುಳ್ಯ ನಗರ ಪಂಚಾಯತ್ ಎದುರಿನಲ್ಲಿ ನಿಧಿ ಸಂಗ್ರಹ ಅಭಿಯಾನ ನಡೆಸುವ ಮೂಲಕ ಪ್ರತಿಭಟನೆ ನಡೆಸಲು ರಸ್ತೆ ಅಭಿವೃದ್ಧಿಗೆ ಹೋರಾಟ ನಡೆಸುತ್ತಿರುವ ಆ ಭಾಗದ ನಾಗರಿಕರು ನಿರ್ಧರಿಸಿದ್ದಾರೆ. ಆರಂಭದಲ್ಲಿ ಭಿಕ್ಷಾಟನೆ ಮೂಲಕ ಹೋರಾಟ ನಡೆಸಿ ಸಾಂಕೇತಿಕವಾಗಿ ರಸ್ತೆ ದುರಸ್ತಿ ನಡೆಸಲು ನಿರ್ಧರಿಸಿದ್ದರು, ಇದೀಗ ನಿಧಿ ಸಂಗ್ರಹದ ಮೂಲಕ ಹೋರಾಟಕ್ಕೆ ಚಾಲನೆ ನೀಡಿ ಆ ಬಳಿಕವೂ ಅಭಿವೃದ್ಧಿಯ ಯಾವ ಹೆಜ್ಜೆಗಳೂ ಕಾಣಿಸದೇ ಇದ್ದರೆ ಸಾಂಕೇತಿಕವಾಗಿ ರಸ್ತೆ ದುರಸ್ತಿ ಮಾಡುವ ಮೂಲಕ ಇನ್ನೊಂದು ಹೋರಾಟ ನಡೆಸಲು ಸಜ್ಜಾಗಿದ್ದಾರೆ ಇಲ್ಲಿನ ಫಲಾನುಭವಿಗಳು.
ರಸ್ತೆ ದುರಸ್ತಿ ಬೇಡಿಕೆಗೆ ಸಂಬಂಧಿಸಿ ಕಮಿಲಡ್ಕದಲ್ಲಿ ನಡೆದ ಸಭೆಯಲ್ಲಿ ಹೋರಾಟ ತೀವ್ರಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಸುಳ್ಯ -ಕೊಡಿಯಾಲಬೈಲ್ -ದುಗ್ಗಲಡ್ಕ ಏಳು ಕಿಲೋಮೀಟರ್ ಉದ್ದವಿರುವ ಮತ್ತು ಬೆಳೆಯುತ್ತಿರುವ ಸುಳ್ಯಕ್ಕೆ ಅತ್ಯಂತ ಅವಶ್ಯಕವಾದ ರಸ್ತೆ. ಈ ರಸ್ತೆಯ ಅಭಿವೃದ್ಧಿಗೆ 25 ವರ್ಷಗಳಿಂದ ಬೇಡಿಕೆ ಇದೆ. ಆದರೆ ಜನಪ್ರತಿನಿಧಿಗಳು, ಸರಕಾರ ನೀಡಿದ ಭರವಸೆಗಳು ಸುಳ್ಳಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಪ್ರಮುಖರು ಹೇಳಿದ್ದಾರೆ. ಕಳೆದ ಬಾರಿ ಭರವಸೆ ನೀಡಿ ಫೆಬ್ರವರಿ ಅಂತ್ಯದೊಳಗೆ ರಸ್ತೆ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದರು , ಆದರೆ ಯಾವುದೇ ಪ್ರಗತಿ ಆಗಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದರು.ಕೇವಲ ಅನುದಾನದ ಭರವಸೆ ನೀಡುತ್ತಾರೆ, ಆದರೆ ಕಾಮಗಾರಿ ನಡೆಯುವುದಿಲ್ಲ, ಕಳೆದ ಹಲವು ಸಮಯಗಳಿಂದಲೂ ಹಾಗೂ ಈಗಲೂ ಅದೇ ಮಾದರಿ ಆಗುತ್ತಿದೆ ಎಂದು ಸಭೆಯಲ್ಲಿ ಜನರು ಹೇಳಿದರು.
ಸಭೆಯಲ್ಲಿ ಬಾಲಕೃಷ್ಣ ನಾಯರ್ ನೀರಬಿದಿರೆ, ಸುರೇಶ್ಚಂದ್ರ ಕಮಿಲ, ಕುಶ ನೀರಬಿದಿರೆ, ಡಾ. ಗಣೇಶ್ ಶರ್ಮ. ಶಂಭಯ್ಯ ಪಾರೆ, ಸೀತಾನಂದ ಬೇರ್ಪಡ್ಕ,ಗಿರೀಶ ಪಾಲಡ್ಕ, ಮನೋಜ್ ಪಾನತ್ತಿಲ, ಲೋಹಿತ್ ಮಾಣಿಬೆಟ್ಟು, ಇಬ್ರಾಹಿಂ ನೀರಬಿದಿರೆ, ಮೋಹನ್ ಬೇರ್ಪಡ್ಕ, ರವಿಚಂದ್ರ ಈಶ್ವರಡ್ಕ, ಡಾ.ಅಶೋಕ್ ಭಟ್, ಶಿವರಾಮ ಎಂ.ಪಿ. ಮತ್ತಿತರರು ಇದ್ದರು.