ಕೇಂದ್ರ ಸರ್ಕಾರ ಭೂತಾನ್ ದೇಶದಿಂದ ಅಡಿಕೆ ಆಮದು ಮಾಡಿಕೊಳ್ಳಲು ಹೊರಟಿರುವ ಕ್ರಮವನ್ನು ಖಂಡಿಸಿ ಹಿರಿಯೂರು ತಾಲೂಕಿನ ಕಸವನಹಳ್ಳಿಯಲ್ಲಿ ಅಡಿಕೆ ಬೆಳೆಗಾರರು ಅಡಿಕೆ ಗೊಂಚಲುಗಳನ್ನು ರಾಶಿ ಹಾಕಿ ಕೇಂದ್ರದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಭೂತಾನ್‌ನಿಂದ ತೆರಿಗೆ ವಿಧಿಸದೆ 17 ಸಾವಿರ ಮೆಟ್ರಿಕ್ ಟನ್ ಅಡಿಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರ ದುರದೃಷ್ಟಕರ. ಕೊಳವೆಬಾವಿಯಲ್ಲಿ ಸಿಗುತ್ತಿದ್ದ ಅಲ್ಪಸ್ವಲ್ಪ ನೀರು ಬಳಸಿ ಕಷ್ಟಪಟ್ಟು ಅಡಿಕೆ ತೋಟ ಬೆಳೆಸಿದ್ದೇವೆ.
ತೋಟಗಳ ನಿರ್ವಹಣಾ ವೆಚ್ಚ ಐದಾರು ಪಟ್ಟು ಹೆಚ್ಚಿದೆ. ಧಾರಣೆ ಹೆಚ್ಚಿರುವ ಕಾರಣ ಅಡಿಕೆ ಬೆಳೆಗಾರರು ನೆಮ್ಮದಿಯಿಂದ ಇದ್ದಾರೆ. ಇಂತಹ ಸ್ಥಿತಿಯಲ್ಲಿ ಹೊರ ದೇಶಗಳಿಂದ ಅಡಿಕೆ ತರಿಸಿಕೊಂಡಲ್ಲಿ ಧಾರಣೆ ಕುಸಿದು ಬೆಳೆಗಾರರು ಬೀದಿಗೆ ಬೀಳಬೇಕಾಗುತ್ತದೆ’ ಎಂದು ಕೆ.ರಮೇಶ್ ಆತಂಕ ವ್ಯಕ್ತಪಡಿಸಿದರು.
‘ಒಮ್ಮೆ ಅಡಿಕೆ ಸಸಿ ನಾಟಿ ಮಾಡಿದರೆ ಫಸಲು ಪಡೆಯಲು ಎಂಟು ವರ್ಷ ಕಾಯಬೇಕು. ನಂತರವೂ ಕೊಳೆರೋಗ ಕಾಣಿಸಿಕೊಂಡರೆ ಬೆಳೆ ಕೈಗೆ ಬರುವ ಖಚಿತತೆ ಇಲ್ಲ. ಅಡಿಕೆಗೆ ನೀರು ಕಡಿಮೆಯಾದರೂ ಕಷ್ಟ. ಹೆಚ್ಚಾದರೂ ಕಷ್ಟ. ಕೇಂದ್ರ ಸರ್ಕಾರ ಆಮದು ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು’ ಎಂದು ಅವರು ಎಚ್ಚರಿಸಿದರು.