Advertisement
ಅನುಕ್ರಮ

ಅಂಕಗಳಾಚೆಗೆ ಶಿಕ್ಷಣದ ಉದ್ದೇಶ

Share

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವು ಬಹುಪಾಲು ಅಂಕಗಳು, ಶ್ರೇಣಿಗಳು, ರಾಂಕ್ ಗಳು  ಮತ್ತು ಪ್ರಮಾಣಪತ್ರಗಳ ಸುತ್ತಲೇ ಸೀಮಿತವಾಗುತ್ತಿರುವುದು ಸ್ಪಷ್ಟವಾಗಿದೆ. ಶಾಲೆ ,ಕಾಲೇಜುಗಳ ಯಶಸ್ಸನ್ನೂ ವಿದ್ಯಾರ್ಥಿಯ ಸಾಮರ್ಥ್ಯವನ್ನೂ ಅಂಕಪಟ್ಟಿಯ ಒಂದೇ ಕಾಗದ ನಿರ್ಧರಿಸುವಂತೆ ಸಮಾಜ ವರ್ತಿಸುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣದ ನಿಜವಾದ ಉದ್ದೇಶ ಅಂಕ ಗಳಿಸುವುದೇ? ಅಥವಾ ಜೀವನವನ್ನು ರೂಪಿಸುವುದೇ? ಎಂಬ ಒಂದು ಗಂಭೀರ ಪ್ರಶ್ನೆ ಉದ್ಭವಿಸುತ್ತದೆ.

“ವಿದ್ಯಾ ದದಾತಿ ವಿನಯಂ, ವಿನಯಾದ್ ಯಾತಿ ಪಾತ್ರತಾಂ

ಪಾತ್ರತ್ವಾತ್ ಧನಮಾಪ್ನೋತಿ, ಧನಾತ್ ಧರ್ಮಂ ತತಃ ಸುಖಂ”

ಎಂಬ ಸುಭಾಷಿತವು ಶಿಕ್ಷಣದ ಸಂಪೂರ್ಣ ತತ್ತ್ವವನ್ನೇ ಸಾರುತ್ತದೆ. ವಿದ್ಯೆ ವಿನಯವನ್ನು ನೀಡಬೇಕು; ವಿನಯದಿಂದ ಪಾತ್ರತೆ, ಪಾತ್ರತೆಯಿಂದ ಸಂಪತ್ತು, ಸಂಪತ್ತಿನಿಂದ ಧರ್ಮ ಮತ್ತು ಅಂತಿಮವಾಗಿ ಸುಖ ದೊರೆಯುತ್ತದೆ. ಇಲ್ಲಿ ಅಂಕಗಳ ಪ್ರಸ್ತಾಪವಿಲ್ಲ , ವ್ಯಕ್ತಿತ್ವದ ಬೆಳವಣಿಗೆಯೇ ಕೇಂದ್ರಬಿಂದು.

ಅಂಕಗಳು ಮತ್ತು ಜೀವನದ ನಡುವೆ ಇರುವ ಅಂತರ :  ಅಂಕಗಳು ವಿದ್ಯಾರ್ಥಿಯ ಸ್ಮರಣೆ, ಪರೀಕ್ಷಾ ಕೌಶಲ್ಯ ಮತ್ತು ನಿರ್ದಿಷ್ಟ ಸಮಯದಲ್ಲಿ ಉತ್ತರಿಸುವ ಸಾಮರ್ಥ್ಯವನ್ನು ಮಾತ್ರ ಅಳೆಯುತ್ತವೆ. ಆದರೆ ಜೀವನಕ್ಕೆ ಅಗತ್ಯವಿರುವ ಧೈರ್ಯ, ತಾಳ್ಮೆ, ಸೃಜನಶೀಲತೆ, ಸಹಾನುಭೂತಿ, ನೈತಿಕತೆ ಮತ್ತು ಹೊಣೆಗಾರಿಕೆಗಳನ್ನು ಅಂಕಗಳು ಅಳೆಯಲಾರವು. ಅಂಕಗಳಲ್ಲಿ ಶ್ರೇಷ್ಠರಾದ ಎಲ್ಲರೂ ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂಬ ಭರವಸೆ ಇಲ್ಲ; ಹಾಗೆಯೇ ಅಂಕಗಳಲ್ಲಿ ಸಾಧಾರಣರಾದವರು ಜೀವನದಲ್ಲಿ ವಿಫಲರಾಗುತ್ತಾರೆಂಬುದೂ ಸತ್ಯವಲ್ಲ.

ಅಂಕಗಳ ಹಿಂದೆ ಬಿದ್ದ ವಿದ್ಯಾರ್ಥಿ , ಅಥವಾ ಪೋಷಕರು ಮಕ್ಕಳನ್ನು ಸಹಜತೆಯಿಂದ ದೂರ ಮಾಡುತ್ತಾರೆ. ಇತ್ತೀಚೆಗಿನ ದಿನಮಾನಗಳಲ್ಲಿ ಗಮನಿಸಿದಾಗ  ಮಕ್ಕಳು ನೆಂಟರ ಮನೆಗಳಿಗೆ ಹೋಗುವುದು ಕಡಿಮೆಯಾಗಿದೆ, ರಜಾದಿನಗಲ್ಲಿ ವಿಶೇಷ ತರಬೇತಿ ಶಿಬಿರಗಳು , ನಿತ್ಯ ದಿನಗಳಲ್ಲಿ ಶಾಲಾ ಸಮಯದ ನಂತರ ಟ್ಯೂಷನ್ ಗಳು , ಹೀಗೆ ಪುಸ್ತಕದ ಹುಳುವಾಗುತ್ತಾರೆಯೇ ಹೊರತು ಸಾಮಾಜಿಕವಾಗಿ ಬೆರೆಯುವ ,ಪ್ರಪಂಚವನ್ನು ಸಹಜತೆಯಿಂದ ನೋಡುವ ಅವಕಾಶವೇ ಸಿಗದಂತಾಗಿದೆ . ಜಾತ್ರೆ , ಸಂತೆ, ಕಂಬಳ, ಯಕ್ಷಗಾನ ಇತ್ಯಾದಿ ಗಳಿಗೆ  ಕರೆದುಕೊಂಡು ಹೋಗುವ ನಮ್ಮ ಊರಿನ ಸೊಗಡನ್ನು ತೋರಿಸುವ ಜಾಯಮಾನವೇ ಇಲ್ಲದಂತಾಗಿದೆ .ಇದರಿಂದ ಮಕ್ಕಳು ರೋಬೋಟ್ ಗಳಾಗುತ್ತಾರೆ .ಮಾನವೀಯ ಸಂಬಂಧಗಳು ನಶಿಸುತ್ತದೆ .ಸಹಜ ಪ್ರೀತಿ ಮರೆಯಾಗುತ್ತದೆ. ಪರಸ್ಪರ ಬಂಧಗಳು ಬೆಳೆಯುವುದೇ ಇಲ್ಲ, ನಿಜವಾಗಿ ಶಿಕ್ಷಣವೆಂಬುದು ವ್ಯಕ್ತಿತ್ವ ರೂಪಿಸುವ ಮಾದರಿಯಾಗಬೇಕು. ಸಹಜತೆಯ ಉಸಿರಾಗಬೇಕು .ಬದುಕಲು ಕಲಿಸುವ ತಾಣಗಳಾಗಬೇಕು

ಒಂದು ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿ. ಪರೀಕ್ಷೆಗಳಲ್ಲಿ ಸದಾ ಮಧ್ಯಮ ಅಂಕಗಳು. ಪೋಷಕರಿಗೂ ಶಿಕ್ಷಕರಿಗೂ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಆದರೆ ಆ ವಿದ್ಯಾರ್ಥಿಗೆ ಒಂದು ವಿಶೇಷ ಗುಣವಿತ್ತು.ಪ್ರಾಯೋಗಿಕ ಚಿಂತನೆ. ಕಾಲೇಜಿನ ದಿನಗಳಲ್ಲಿ ಸಣ್ಣ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವ ಯೋಚನೆ ಮಾಡುತ್ತಿದ್ದ. ಓದಿನ ಜೊತೆಗೂಡಿ ಸ್ಥಳೀಯ ರೈತರಿಂದ ಕಲಿತು, ಪ್ರಯೋಗ ಮಾಡಿ, ನಂತರ ಸ್ವಂತ ಉದ್ಯಮ ಆರಂಭಿಸಿದ. ಇಂದು ಆತನ ಸಂಸ್ಥೆ ಹಲವರಿಗೆ ಉದ್ಯೋಗ ನೀಡುತ್ತಿದೆ. ಸಾದಾರಣ ಕಲಿತ ಹುಡುಗನ ಬಳಿ ಉನ್ನತ ಪದವಿಗಳನ್ನು ಗಳಿಸಿದವರು ಕೆಲಸ ಮಾಡುತ್ತಾರೆ.

ಇಲ್ಲಿ ಅವನ ಯಶಸ್ಸಿಗೆ ಕಾರಣ ಅಂಕಗಳಲ್ಲ, ಕಲಿತದ್ದನ್ನು ಜೀವನಕ್ಕೆ ಅನ್ವಯಿಸುವ ಬುದ್ಧಿ. “ಶಿಕ್ಷಣವು ಉದ್ಯೋಗಕ್ಕೆ ಮಾತ್ರವಲ್ಲ, ಉದ್ಯಮಶೀಲತೆಗೆ ದಾರಿ ತೋರಬೇಕು” ಎಂಬ ಮಾತಿಗೆ ಇದು ಜೀವಂತ ಉದಾಹರಣೆ.

ಒಬ್ಬ ವಿದ್ಯಾರ್ಥಿನಿ ಶಾಲಾ ದಿನಗಳಲ್ಲಿ ಗಣಿತದಲ್ಲಿ ಬಹಳ ದುರ್ಬಲಳು. ಅಂಕಪಟ್ಟಿಯಲ್ಲಿ ಅವಳ ಸ್ಥಾನ ಹಿಂದುಳಿದದ್ದೇ. ಆದರೆ ಆಕೆಗೆ ಮಕ್ಕಳನ್ನು ಅರ್ಥಮಾಡಿಕೊಳ್ಳುವ ಅಪಾರ ಸಹಾನುಭೂತಿ ಇತ್ತು. ಮುಂದೆ ಶಿಕ್ಷಕಿಯಾಗಿ ಸೇವೆ ಆರಂಭಿಸಿದಾಗ, ಅಂಕಗಳಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಗಮನ ನೀಡಿ, ಅವರ ಆತ್ಮವಿಶ್ವಾಸವನ್ನು ಬೆಳೆಸಿದಳು. ಇಂದು ಆಕೆಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದಾರೆ ಮತ್ತು “ನಮ್ಮ ಜೀವನಕ್ಕೆ ದಿಕ್ಕು ಕೊಟ್ಟ ಶಿಕ್ಷಕಿ” ಎಂದು ಗೌರವದಿಂದ ನೆನಪಿಸುತ್ತಾರೆ.ಇದು ಅಂಕಗಳಾಚೆಯ ಶಿಕ್ಷಣದ ಮಹತ್ವವನ್ನು ತೋರಿಸುವ ಮತ್ತೊಂದು ಉದಾಹರಣೆ. “ಗುರುವೇ ಗುರಿಯ ದಾರಿ” ಎಂಬ ಮಾತು ಇಲ್ಲಿ ಸಾರ್ಥಕವಾಗುತ್ತದೆ.

ಶಿಕ್ಷಣ ಮತ್ತು ಮೌಲ್ಯಬೋಧನೆ :  ಶಿಕ್ಷಣವು ಕೇವಲ ಮಾಹಿತಿಯ ಸಂಗ್ರಹವಲ್ಲ; ಅದು ಮೌಲ್ಯಗಳ ಬೆಳೆಸುವ ಪ್ರಕ್ರಿಯೆ. ಸತ್ಯ, ಧರ್ಮ, ಶಿಸ್ತು, ಸಾಮಾಜಿಕ ಜವಾಬ್ದಾರಿ  ಇವೆಲ್ಲವೂ ಶಿಕ್ಷಣದ ಅವಿಭಾಜ್ಯ ಅಂಗಗಳು.

“ಸತ್ಯಂ ವದ, ಧರ್ಮಂ ಚರ”ಎಂಬ ಉಪನಿಷತ್ತಿನ ಸಂದೇಶವನ್ನು ವಿದ್ಯಾರ್ಥಿ ಜೀವನದಲ್ಲೇ ಅಳವಡಿಸಿಕೊಂಡರೆ, ಅಂಕಗಳಿಗಿಂತ ಮೌಲ್ಯಗಳು ಮುಖ್ಯವಾಗುತ್ತವೆ. ಪರೀಕ್ಷೆಯಲ್ಲಿ ನಕಲು ಮಾಡದೆ ಕಡಿಮೆ ಅಂಕ ಪಡೆದರೂ, ಸತ್ಯನಿಷ್ಠೆಯಿಂದ ಬದುಕುವ ವ್ಯಕ್ತಿಯೇ ಸಮಾಜಕ್ಕೆ ಹೆಚ್ಚು ಉಪಯುಕ್ತ.

ಶಿಕ್ಷಕರು ಮತ್ತು ಪೋಷಕರ ಪಾತ್ರ :  ಅಂಕಗಳಾಚೆಗೆ ನೋಡುವ ದೃಷ್ಟಿ ಬೆಳೆಯಬೇಕಾದರೆ ಶಿಕ್ಷಕರು ಮತ್ತು ಪೋಷಕರು ಪ್ರಮುಖ ಪಾತ್ರ ವಹಿಸಬೇಕು. ಪ್ರತೀ ಮಗುವನ್ನೂ ಒಂದೇ ಅಳತೆಯಲ್ಲಿ ಅಳೆಯದೆ, ಅವನ/ಅವಳ ವೈಯಕ್ತಿಕ ಸಾಮರ್ಥ್ಯವನ್ನು ಗುರುತಿಸಿ ಬೆಳೆಸಬೇಕು. ಸಂಗೀತ, ಕ್ರೀಡೆ, ಸಾಹಿತ್ಯ, ಕೈಚಾಣಾಕ್ಷತೆ ಪ್ರತಿಯೊಬ್ಬನಲ್ಲೂ ಯಾವುದೋ ಒಂದು ವಿಶಿಷ್ಟ ಪ್ರತಿಭೆ ಇರುತ್ತದೆ.

“ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ”ಎಂಬ ಸುಭಾಷಿತವು ಪರಿಶ್ರಮ ಮತ್ತು ಜಾಗೃತಿಯ ಮಹತ್ವವನ್ನು ಹೇಳುತ್ತದೆ. ಶಿಕ್ಷಣವು ಮಕ್ಕಳನ್ನು ಜಾಗೃತರನ್ನಾಗಿ, ಆತ್ಮವಿಶ್ವಾಸಿಗಳನ್ನಾಗಿ ಮಾಡಬೇಕು; ಅಂಕಗಳಿಗಾಗಿ ಭಯಪಡುವ ಯಂತ್ರಗಳನ್ನಾಗಿ ಅಲ್ಲ.

ಅಂಕಗಳು ಶಿಕ್ಷಣದ ಫಲಿತಾಂಶದ ಒಂದು ಭಾಗ ಮಾತ್ರ; ಸಂಪೂರ್ಣ ಚಿತ್ರವಲ್ಲ. ಶಿಕ್ಷಣವು ವ್ಯಕ್ತಿಯನ್ನು ಉತ್ತಮ ಉದ್ಯೋಗಕ್ಕೆ ಮಾತ್ರವಲ್ಲ, ಉತ್ತಮ ಜೀವನಕ್ಕೆ ಸಿದ್ಧಪಡಿಸಬೇಕು. ಅಂಕಗಳಾಚೆಗೆ ಚಿಂತಿಸುವ ಶಿಕ್ಷಣವೇ ಸಮಾಜವನ್ನು ಮಾನವೀಯ, ನೈತಿಕ ಮತ್ತು ಸೃಜನಶೀಲವಾಗಿಸುತ್ತದೆ.

“ವಿದ್ಯೆ ಜೀವನದ ಸಾಧನ; ಜೀವನವೇ ಅಂತಿಮ ಪರೀಕ್ಷೆ” ಎಂಬ ಸತ್ಯವನ್ನು ಅರಿತಾಗ, ಅಂಕಗಳಾಚೆಗೆ ಶಿಕ್ಷಣದ ಉದ್ದೇಶ ನಮ್ಮ ಮುಂದೆ ಸ್ಪಷ್ಟವಾಗುತ್ತದೆ. ಉತ್ತಮ ವಿದ್ಯಾರ್ಥಿಯನ್ನು ಅಲ್ಲ, ಉತ್ತಮ ಮಾನವನನ್ನು ರೂಪಿಸುವುದೇ ಶಿಕ್ಷಣದ ಪರಮ ಗುರಿ.

Education today is often measured through marks, ranks, and certificates. However, the real purpose of education is not merely scoring high marks but shaping character, values, creativity, and responsibility. True education prepares individuals for life, not just for examinations.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

Published by
ಕುಮಾರಸುಬ್ರಹ್ಮಣ್ಯ ಮುಳಿಯಾಲ

Recent Posts

ಹವಾಮಾನ ವರದಿ | 29-03-2026 | ಕರ್ನಾಟಕದಲ್ಲಿ ಮತ್ತೆ ಮಳೆ…! ನಿಮ್ಮ ಜಿಲ್ಲೆಯಲ್ಲಿ ಮಳೆ ಇದೆಯಾ..?

ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯ ಚಟುವಟಿಕೆ ಮತ್ತೆ ಆರಂಭವಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ…

13 hours ago

ಹವಾಮಾನ ವರದಿ | 28-03-2026 | ಎಪ್ರಿಲ್ 4 ರವರೆಗೆ ಕರಾವಳಿ–ಮಲೆನಾಡು ಪ್ರದೇಶಗಳಿಗೆ ಭಾರಿ ಮಳೆ ಸೂಚನೆ..!

ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ ಮುಂದುವರಿಯಲಿದೆ, ಕರಾವಳಿ ಮತ್ತು ಮಲೆನಾಡಿನಲ್ಲಿ ಏಪ್ರಿಲ್ 4ರವರೆಗೆ…

2 days ago

ಬೀದಿ ನಾಯಿಗಳ ಸಮಸ್ಯೆ | 27,481 ನಾಯಿ ಕಡಿತ ಪ್ರಕರಣಗಳು ವರದಿ..!

ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದೆ. ಈ ಹಿನ್ನೆಲೆ ಪ್ರತಿಯೊಂದು ತಾಲೂಕಿನಲ್ಲಿ…

2 days ago

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲು ಪೊಲೀಸ್…

2 days ago

ಹವಾಮಾನ ವರದಿ | 27-03-2026 | ಮಾರ್ಚ್ 28 ರಿಂದ ಮಳೆ ಹೆಚ್ಚಳ ಸೂಚನೆ | ರಾಜ್ಯಾದ್ಯಂತ ಗುಡುಗು ಸಹಿತ ಮಳೆಯ ಮುನ್ಸೂಚನೆ

ಮಾರ್ಚ್ 28ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಮತ್ತು…

3 days ago

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…

3 days ago