ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಪುತ್ತೂರು ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಒಂದು. ಪುತ್ತೂರು ಸೀಮೆಯ ಪ್ರಮುಖ ದೇವಸ್ಥಾನವೂ ಇದು. ಇಲ್ಲಿನ ವಾರ್ಷಿಕ ಜಾತ್ರೆ, ಉತ್ಸವ ಎಂದರೆ ಸೀಮೆಯ ಎಲ್ಲರಿಗೂ ಅದೊಂದು ಮನೆಯ ಕಾರ್ಯಕ್ರಮದ ಹಾಗೆ. ಸಂಭ್ರಮಕ್ಕಿಂತಲೂ ತಾನು ಅಲ್ಲಿ ಇರಬೇಕು ಎನ್ನುವುದೇ ಅಲ್ಲಿನ ಭಾವ.…..ಮುಂದೆ ಓದಿ….

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೀಮೆಯ ದೇವಸ್ಥಾನ ಆಗಿರುವುರಿಂದ ಪುತ್ತೂರು ಸೀಮೆಯ ಪ್ರಮುಖ ದೇವಸ್ಥಾನ, ಈ ಸೀಮೆಯ ಜನರ ಆರಾಧ್ಯ ದೇವರು. ಎಲ್ಲಾ ಕಡೆಯೂ ಇರುವಂತೆಯೇ ಪುತ್ತೂರಿನ ಈ ದೇವಸ್ಥಾನವೂ ಸೀಮೆಯ ದೇವಸ್ಥಾನ. ನೂರಾರು, ಸಾವಿರಾರು ಜನರು ಬರುತ್ತಾರೆ ಪೂಜೆ ಮಾಡುತ್ತಾರೆ, ಭಗವಂತ ನೀನೇ ಎಲ್ಲವೂ ಎನ್ನುತ್ತಾರೆ. ಸೀಮೆಯ ಜನರು ಮಾತ್ರವಲ್ಲ ಪುತ್ತೂರಿನ ಒಡೆಯನಿಗೆ ಹತ್ತೂರಿನಲ್ಲೂ ಭಕ್ತರಿದ್ದಾರೆ. ಇಷ್ಟಪಟ್ಟು ಬರುವವರಿದ್ದಾರೆ. ಎಲ್ಲಾ ಕಾರ್ಯಗಳಲ್ಲೂ ಶ್ರೀ ಮಹಾಲಿಂಗೇಶ್ವರ ದೇವರೇ ಅಂತಿಮ ಎನ್ನುವುದೇ ಇಲ್ಲಿರುವ ಭಾವ.
ಪುತ್ತೂರು ಜಾತ್ರೆ ಬಂದರೆ ಸಾಕು ಅನೇಕ ಮನೆಗಳಲ್ಲಿ ತಯಾರಿಗಳು ನಡೆಯುತ್ತವೆ. ಮನೆಯಿಂದ ಒಂದು ದಿನವಾದರೂ ಇಡೀ ಮನೆಮಂದಿ ಭಾಗವಹಿಸುತ್ತಾರೆ. ಕೆಲವು ಜನರಂತೂ ಮನೆಯ ಕಾರ್ಯಕ್ರಮಗಳಲ್ಲಿಅಷ್ಟೊಂದು ಸಕ್ರಿಯವಾಗಿರಲಿಕ್ಕಿಲ್ಲ, ದೇವಸ್ಥಾನದ ಎಲ್ಲಾ ಉತ್ಸವಗಳಲ್ಲಿ ಅವರು ಸಕ್ರಿಯ. ಈಗಂತೂ ದೇವರು ಕಟ್ಟೆ ಪೂಜೆಗಾಗಿ ವಿವಿಧ ಕಡೆ ಸಂಚರಿಸುತ್ತಾರೆ, ಉತ್ಸವ ನಡೆಯುತ್ತದೆ. ಈ ಸಂದರ್ಭ ಪ್ರಕೃತಿ ಸಹಜವಾಗಿ ಮಳೆ ಬಂದರೆ ಸಾಕು, ಆಗಂತೂ, “ಎಂತ ಮಳೆ ಮಾರಾಯ್ರೆ, ದೇವರ ಸವಾರಿ ಹೇಗೆ ಹೋಗುವುದು, ಎಂತ ವ್ಯವಸ್ಥೆ ಆಗಿದೆ..” “ಛೆ.. ಛೆ..” ಹೀಗೆಲ್ಲಾ ಹೇಳುವುದು ಕೇಳುತ್ತೇವೆ. ಅಂದರೆ ಒಂದು ಉತ್ಸವ ಮನೆಯ ಕಾರ್ಯಕ್ರಮದಷ್ಟೇ ಪ್ರಾಧಾನ್ಯತೆಯಿಂದ ಮಾಡುವುದು , ಮಾಡಿಸುವುದು ಮಹಾಲಿಂಗೇಶ್ವರ ದೇವರ ಮಹಿಮೆ, ಆ ದೇವರ ಸೆಳೆತ ಎನ್ನುವುದು ಹಲವರ ಅಭಿಪ್ರಾಯ.

ಅನೇಕ ವರ್ಷಗಳಿಂದ ಇಡೀ ದಿನ ಉತ್ಸವ, ಕಟ್ಟೆಪೂಜೆಗಳಲ್ಲಿ ಭಾಗವಹಿಸಿ ಕೊನೆಯ ದಿನ ವೀರಮಂಗಲದವರೆಗೂ ಪಾದಯಾತ್ರೆಯ ಮೂಲಕ ಸಾಗಿ ಮತ್ತೆ ಪಾದಯಾತ್ರೆಯ ಮೂಲಕ ದೇವರ ಜೊತೆಗೇ ಬರುವ ಕೆಲವು ಮಂದಿ ಇದ್ದಾರೆ. ಇಷ್ಟೂ ಸಮಯ ಯಾವ ಸುಸ್ತು ಕೂಡಾ ಗೊತ್ತಾಗಲಿಲ್ಲ ಎನ್ನುವುದು ಅವರ ಅನುಭವ. ಮಹಾಲಿಂಗೇಶ್ವರ ಜೊತೆಗಿದ್ದರೆ ಸುಸ್ತು ಇಲ್ಲ ಎನ್ನುವುದು ಅಲ್ಲಿರುವ ಪಾಸಿಟಿವ್ ಶಕ್ತಿ.

ಪುತ್ತೂರು ಜಾತ್ರೆ ಆರಂಭವಾದ ಕೂಡಲೇ ಈ ಆಸುಪಾಸಿನ ಹಾಗೂ ಬಹುತೇಕ ಸೀಮೆಯ ಎಲ್ಲರೂ ದೂರದ ಪ್ರವಾಸ ಹೋಗುವುದು ಕಡಿಮೆ, ಹೋದರೂ ರಾತ್ರಿ ವೇಳೆಗೆ ಮನೆಗೆ ಬರುವುದು ಇದೆ. ಅದರ ಜೊತೆಗೆ ಮರ ಏರುವುದು ಸೇರಿದಂತೆ ಮನೆಯಲ್ಲಿ ಶುಭಕಾರ್ಯಕ್ರಮ ಹಮ್ಮಿಕೊಳ್ಳುವುದು ಕಡಿಮೆಯೇ. ಏಕೆಂದರೆ ನಮ್ಮ ಮನೆಯ ಅಂದರೆ ಸೀಮೆಯ ಒಡೆಯನ ಕಾರ್ಯಕ್ರಮ ನಡೆಯುತ್ತಿದೆ ಅಂದರೆ ನಮ್ಮದೇ ಮನೆಯ ಕಾರ್ಯಕ್ರಮ ಅದು ಎನ್ನುವ ಭಾವ ಈಗಲೂ ಇದೆ.
ಅನೇಕ ವರ್ಷಗಳಿಂದ ಪುತ್ತೂರು ಜಾತ್ರೆಯ ಧ್ವಜಾರೋಹಣದ ಬಳಿಕ ಪ್ರತೀ ದಿನ ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ , ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಪುತ್ತೂರಿನ ಬೊಳುವಾರಿನ ಪ್ರವೀಣ ಬೊಳುವಾರು ಅವರ ಅನುಭವವೇ ಅದ್ಭುತ. ತಡರಾತ್ರಿ 2 – 3 ಗಂಟೆಯವರೆಗೆ ದೇವರ ಜೊತೆಗೆ ಉತ್ಸವದಲ್ಲಿದ್ದು, ವಿಡಿಯೋ, ಫೋಟೊ ಇತ್ಯಾದಿಗಳಲ್ಲೂ ತೊಡಗಿಸಿಕೊಂಡು ಮರುದಿನ ಮತ್ತೆ ದೇವಸ್ಥಾನದ ಉತ್ಸವಗಳಲ್ಲಿ ಭಾಗಿಯಾತ್ತಾರೆ. ಅವರ ಅನುಭವದ ಪ್ರಕಾರ ಇಷ್ಟೂ ವರ್ಷದ ಅನುಭವದ ಪ್ರಕಾರ ಪುತ್ತೂರು ಮಹಾಲಿಂಗೇಶ್ವರ ದೇವರು ಹಾಗೂ ದೇವಸ್ಥಾನದ ಉತ್ಸವ ವಿಶೇಷ ಶಕ್ತಿ ನೀಡುತ್ತದೆ ಎನ್ನುತ್ತಾರೆ.