ಪುತ್ತೂರಿನ ವಿವೇಕಾನಂದ ಕಾಲೇಜು ಆವರಣದಲ್ಲಿ ಕ್ಯಾಂಪ್ಕೋ ಸಂಸ್ಥೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನ ಆವರಣದಲ್ಲಿ ಕೃಷಿ ಯಂತ್ರ ಮೇಳ ಆರಂಭಗೊಂಡಿದೆ. ಮೂರು ದಿನಗಳ ಕಾಲ ಯಂತ್ರ ಮೇಳ ನಡೆಯಲಿದೆ.
5 ನೇ ಕೃಷಿ ಯಂತ್ರ ಮೇಳವು ಯಶಸ್ವಿಯಾಗಿ ಆಯೋಜನೆಯಾಗಿದೆ, ಕೃಷಿಕರಿಗೆ ಅಗತ್ಯವಿರುವ ಬಹುತೇಕ ಯಂತ್ರಗಳ ಆವಿಷ್ಕಾರಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ, ಆದರೆ ಒಂದೇ ಕಡೆ ಎಲ್ಲಾ ಯಂತ್ರಗಳನ್ನು ನೋಡುವುದು ಹಾಗೂ ತುಲನಾತ್ಮಕ ನಿರ್ಧಾರಗಳು ಹೆಚ್ಚು ಸಾಧ್ಯವಾಗಿದೆ. ಪುತ್ತೂರಿನಲ್ಲಿ ಐದನೇ ಕೃಷಿ ಯಂತ್ರ ಮೇಳದ ಹೊತ್ತಿಗೆ ಬಹುಪಾಲು ಯಂತ್ರಗಳು ಮಾರುಕಟ್ಟೆಗೆ ಬಂದರೂ ಸುಧಾರಣೆಗಾಗಿ ಹಲವು ಯಂತ್ರಗಳು ಕಾಯುತ್ತಿದೆ. ಪುತ್ತೂರಿನಲ್ಲಿ ಕ್ಯಾಂಪ್ಕೋ ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಗಳ ನೇತೃತ್ವದಲ್ಲಿ ಅಡಿಕೆ ಸುಲಿಯುವ ಯಂತ್ರದ ಮೂಲಕ ಆರಂಭಗೊಂಡ ಯಂತ್ರಮೇಳವು ಐದನೇ ಮೇಳದ ಹೊತ್ತಿಗೂ ಸುಧಾರಿತ ಹಾಗೂ ಅಂತಿಮ ಎನ್ನುವ ಅಡಿಕೆ ಸುಲಿಯುವ ಯಂತ್ರ ಇಂದಿಗೂ ಲಭ್ಯವಾಗಿಲ್ಲ. ಈ ಬಾರಿ ಕೇರಳದ ಅಡಿಕೆ ಸುಲಿಯುವ ಯಂತ್ರವೊಂದು ಅಡಿಕೆ ಸುಲಿದು ವಿಂಗಡಣೆ ಮಾಡಿಯೂ ನೀಡುತ್ತದೆ, ಆದರೆ ಅಡಿಕೆಯ ಕಸ ಉಳಿದುಕೊಳ್ಳುತ್ತದೆ, ಇದು ಸುಧಾರಣೆಯಾಗುತ್ತದೆ ಎನ್ನುವುದು ಯಂತ್ರ ತಯಾರಕರ ಅಭಿಪ್ರಾಯ.
ಇದೇ ವೇಳೆ ಯಂತ್ರ ಮೇಳದಲ್ಲಿ ಗಮನಸೆಳೆದದ್ದು ಅಡಿಕೆ ಒಣಗಿಸುವ ಯಂತ್ರ. 72 ಗಂಟೆಯಲ್ಲಿ ಸುಮಾರು 3 ಕ್ವಿಂಟಾಲ್ ಅಡಿಕೆ ಒಣಗಿಸುವ ಡ್ರೈಯರ್ ಮಾರುಕಟ್ಟೆಗೆ ಪರಿಚಯವಾಗಿದೆ. ಶಿರಸಿ ಮೂಲದ ಕೃಷಿಕರು ತಯಾರು ಮಾಡಿರುವ ಈ ಯಂತ್ರದಲ್ಲಿ ಅಡಿಕೆ , ಕಾಳುಮೆಣಸು ಸಹಿತ ಎಲ್ಲಾ ಕೃಷಿ ಉತ್ಪನ್ನಗಳನ್ನು ಒಣಗಿಸಬಹುದಾಗಿದೆ. ಈ ಯಂತ್ರದಲ್ಲೂ ಸುಧಾರಣೆಗಳಿಗೆ ಅವಕಾಶ ಇದೆ, ಗುಂಪಾಗಿ ಈ ಯಂತ್ರ ಖರೀದಿಗೆ ಅವಕಾಶಗಳು ಇವೆ.
ಕೃಷಿಕ, ಗ್ರಾಮೀಣ ಭಾಗದ ಯುವಕ ತಯಾರು ಮಾಡಿರುವ ಡಂಪರ್ ಗಮನ ಸೆಳೆದ ಇನ್ನೊಂದು ಯಂತ್ರ.ದ್ವಿಚಕ್ರ ವಾಹನ ಬಳಸಿ ಕೃಷಿ ವಸ್ತುಗಳ ಸಾಗಾಟಕ್ಕೆ ಮಾಡಿರುವ ಯಂತ್ರವು ಕೃಷಿಕರ ಗಮನ ಸೆಳೆಯಿತು. ಕೃಷಿಕ, ಗ್ರಾಮೀಣ ಭಾಗದ ಯುವಕ ಮಾಡಿರುವ ಈ ಪ್ರಯತ್ನಕ್ಕೆ ಕೃಷಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷಿಕ ಹಾಗೂ ಗ್ರಾಮೀಣ ಭಾಗದ ಯುವಕ ತಯಾರು ಮಾಡಿರುವ ಅಡಿಕೆ ಮರ ಏರುವ ಸೈಕಲ್ ಅಥವಾ ಮರ ಏರುವ ಯಂತ್ರ ಗಮನ ಸೆಳೆದ ಇನ್ನೊಂದು ಯಂತ್ರ. ಕಡಿಮೆ ಖರ್ಚಿನಲ್ಲಿ ಮರ ಏರಲು ಸಾಧ್ಯ ಇರುವ ಈ ಯಂತ್ರವ ಕೃಷಿಕರ ಗಮನ ಸೆಳೆದಿದೆ.
ಕೈ ಮೂಲಕ ಅಡಿಕೆ ಸುಲಿಯಲು ತಯಾರು ಮಾಡಿರುವ ಕೇರಳದ ಕೃಷಿಕನ ಪುಟ್ಟ ಯಂತ್ರವು ಗಮನ ಸೆಳೆದಿರುವ ಇನ್ನೊಂದು ಯಂತ್ರ. ಕಳೆದ ಬಾರಿಯ ಯಂತ್ರ ಮೇಳದಲ್ಲೂ ತನ್ನ ಯಂತ್ರ ಪ್ರದರ್ಶನ ಮಾಡಿದ್ದ ಕೇರಳದ ಮಲಪ್ಪುರದ ಈ ಸಂಶೋಧಕ ಈ ಬಾರಿ ಸರಳ ಸಾಧನದ ಮೂಲಕ ಅಡಿಕೆ ಸುಲಿಯುವ ಯಂತ್ರವನ್ನು ಕೃಷಿಕರ ಮುಂದೆ ತೋರಿಸಿದ್ದಾರೆ, ಈ ಯಂತ್ರವೂ ಕೃಷಿಕರ ಗಮನ ಸೆಳೆಯಿತು.
ವಿದ್ಯಾರ್ಥಿಗಳ ಹಲವು ಸಂಶೋಧನೆಗಳು ಗಮನ ಸೆಳೆದಿದೆ. ಎಲ್ಲವೂ ಅಭಿವೃದ್ಧಿ ಆಗಬೇಕಿರುವ ಮಾದರಿಗಳು. ಬಹಳ ಉತ್ಸಾಹದಿಂದ ವಿದ್ಯಾರ್ಥಿಗಳು ಕೃಷಿಕರ ಮುಂದೆ ತಮ್ಮ ಸಂಶೋಧನೆಯನ್ನು ತೆರೆದಿಟ್ಟಿದ್ದಾರೆ. ಮಳೆ ಬಂದಾಗ ಅಡಿಕೆ ಅಥವಾ ಕೃಷಿ ವಸ್ತುಗಳು ಒದ್ದೆಯಾಗದಂತೆ ಮಾಡಿರುವ ವಿದ್ಯಾರ್ಥಿಯ ಐಡಿಯಾ ಕೃಷಿಕರಿಗೆ ಸಂತಸವಾಗಿದೆ. ಈ ಮಾದರಿ ಅಭಿವೃದ್ಧಿಯಾಗಬೇಕಿದೆ.
ಉಳಿದಂತೆ ಕೃಷಿ ಯಂತ್ರಗಳು, ಡ್ರೋನ್, ಕನಸಿನ ಮನೆಗೆ ಅಗತ್ಯವಾದ ಸಲಕರಣೆಗಳು, ಇಂಟೀರಿಯರ್, ನರ್ಸರಿ, ವಾಹನಗಳ ಪ್ರದರ್ಶನ, ಪಾರಂಪರಿಕ ಮನೆ, ವಸ್ತುಗಳು ಹೀಗೇ ವಿವಿಧ ಮಳಿಗೆಗಳು ಗಮನ ಸೆಳೆದಿದೆ.