ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಪುತ್ತೂರಿನ ಯಂತ್ರಮೇಳ ಜನಾಕರ್ಷಣೀಯವಾಗಿ, ಯಶಸ್ವಿಯಾಗಿ ಸಂಪನ್ನಗೊಂಡಿತು. ಹೊಸತೇನಾದರೂ ಇದೆಯೇ ಎಂದು ಹುಡುಕಿ ಬಂದವರಿಗೆ ಹೆಚ್ಚೇನೂ ದೊರೆತಿರಲಾರದು. ಬಹುಶಃ ಇನ್ನು ಮುಂದೆ ಯಾವುದೇ ಮೇಳಗಳಲ್ಲಿ ಹೊಸತೇನನ್ನೂ ನಿರೀಕ್ಷಿಸಲಾಗದು. ಯಾವುದೇ ಹೊಸತು ಬಂದರೂ ನೂರಾರು ಯೂಟ್ಯೂಬ್ ಚಾನೆಲ್ ಗಳಲ್ಲಿ, ಫೇಸ್ಬುಕ್ ಗಳಲ್ಲಿ, ವಾಟ್ಸಪ್ ಗುಂಪುಗಳಲ್ಲಿ ಹರಿದು ಹಂಚಿ ಹೋಗಿಬಿಡುತ್ತದೆ. ಮೇಳಗಳಿಗೆ ಬರುವಾಗ ಸುದ್ದಿ ಹಳತಾಗಿಬಿಡುತ್ತದೆ.
ಅದೂ ಅಲ್ಲದೆ ಊರೂರುಗಳಲ್ಲಿ ಅಲ್ಲಲ್ಲಿ ಆಗಾಗ ಕೃಷಿ ಮೇಳಗಳು ನಡೆಯುತ್ತಲೇ ಇರುತ್ತದೆ. ಇಷ್ಟೆಲ್ಲಗಳ ಮಧ್ಯೆಯೂ ಸಾಮಾಜಿಕ ಜಾಲತಾಣಗಳಲ್ಲಿ ಕಂಡ ಆದರೂ ಕಣ್ಣಲ್ಲಿ ನೋಡದ ಅನೇಕ ವಸ್ತುಗಳನ್ನು ಕಾಣುವಂತಾಯಿತು. ಸ್ಕೂಟರಿಗೆ ಜೋಡಿಸಿದ ಡಂಪರ್, ಎಚ್ ಡಿ ಪಿ ಪೈಪನ್ನು ಜೋಡಿಸುವ ಸುಲಭ ಕನೆಕ್ಟರ್, ಎಚ್ ಡಿ ಪಿ ಕಮ್ ಪಿವಿಸಿ ಜೋಡಣೆ , ಮಣ್ಣಾಳದಲ್ಲಿ ಪಿವಿಸಿ ಪೈಪ್ ಅನ್ನು ಜೋಡಿಸುವ ಗಮ್ಲೆಸ್ ಕಪ್ಲಿಂಗ್ ಮುಂತಾದವು. ಹೋಲಿಸಿ ಪರಾಮರ್ಶಿಸಿ ತೆಗೆಯುದಿದ್ದರೆ ಒಂದೇ ತರದ ಯಂತ್ರಗಳ ಹಲವು ಕಂಪನಿಗಳು ಒಂದೇ ಜಾಗದಲ್ಲಿ ನೋಡುವಂತಾದುದು ಇಂತಹ ದೊಡ್ಡ ಮೇಳದ ವಿಶೇಷ.
ಹೆಚ್ಚು ಕಮ್ಮಿ ಎಲ್ಲಾ ಮೇಳಗಳಲ್ಲಿ ಗೋಷ್ಠಿಗಳು ಜನಾಕರ್ಷಣೆಯಲ್ಲಿ ವಿಫಲವಾಗುತ್ತದೆ. ತಿರುತಿರುಗಿ ಸುಸ್ತಾದಾಗ ಒಂದರೆ ಗಳಿಗೆಯ ವಿಶ್ರಾಂತಿಗಾಗಿ ಗೋಷ್ಠಿಯ ಸಭಾಭವನಕ್ಕೆ ಜನ ಬರುತ್ತಾರೆಯೇ ವಿನಹ : ವಿಷಯ ಸಂಗ್ರಹಕ್ಕಾಗಿ ಬರುವವರ ಸಂಖ್ಯೆ ಬಲು ವಿರಳ. ಇಂತಹ ವಿರಳಗಳ ಮಧ್ಯೆ ಆರಂಭದಲ್ಲಿ ಕಳೆ ಕಟ್ಟದಿದ್ದರೂ, ನಿಧಾನಕ್ಕೆ ಕಳೆಯೇರಿಸಿಕೊಂಡದ್ದು ಕೃಷಿ ರಸಪ್ರಶ್ನೆಗಳು. ಪಾಂಚಜನ್ಯ ರೇಡಿಯೋ ತಂಡ ಅನೇಕ ಕೃಷಿಕರನ್ನು ಕುಟ್ಟಿ ತಟ್ಟಿ ಎಬ್ಬಿಸಿ ಕೃಷಿ ಸಂಬಂಧಿ ವೈವಿಧ್ಯಮಯವಾದ ಪ್ರಶ್ನೆಗಳನ್ನು ಬಲು ಶ್ರಮದಿಂದ ತಯಾರಿಸಿಟ್ಟಿದ್ದರು. ಆ ಮೂಲಕ ಹಲವಾರು ಹೊಸ ವಿಷಯಗಳನ್ನು ತಿಳಿಯುವುದು ಅನೇಕರಿಗೆ ಸಾಧ್ಯವಾಗಿತ್ತು. ವಿದ್ಯಾರ್ಥಿ ಬಂಧುಗಳಲ್ಲಿ ಕೆಲವರಿಗೆ ನಮ್ಮ ಮನೆಯಲ್ಲೇ ನಡೆಯುವ ಕೃಷಿ ಪ್ರಕ್ರಿಯೆಗಳ ಬಗ್ಗೆ ಘೋರ ನಿರಾಸಕ್ತಿ ಆಶ್ಚರ್ಯ ತರುವಂತಿತ್ತು.
ಉದಾ : ಕುಸುಲಕ್ಕಿ ಮಾಡುವ ಬಗೆಎಂತು? ಅಡಿಕೆ ಕೊಯ್ಲಿನ ಸಮಯ ಯಾವಾಗ? ದನವೊಂದರ ಉದ್ದದ ಬಗ್ಗೆ ಕಲ್ಪನೆ ಬಾರದಿರುವುದು ಇವುಗಳೆಲ್ಲ ಕೆಲವು ನಿದರ್ಶನಗಳು. ಶಾಲಾ ವಿದ್ಯೆಯನ್ನು ಕಲಿಸಲು ಪ್ರೋತ್ಸಾಹಿಸುವ ಆತುರದಲ್ಲಿ ನಾವುಣ್ಣುವ ನೆಲದ ವಿದ್ಯೆಯನ್ನು ಬೋಧಿಸುವಲ್ಲಿ ನಮ್ಮಂತಹ ತಂದೆ ತಾಯಿಗಳ ವಿಫಲತೆಯೇ ಇದಕ್ಕೆ ಕಾರಣ.
ಪರಕೀಯ,ಸ್ವಕೀಯ,ಉಭಯ ರೀತಿಯಲ್ಲೂ ಪರಾಗಸ್ಪರ್ಶಿಸುವ ಸಸ್ಯ ವೈವಿಧ್ಯಗಳ ಕುರಿತಿನ ಅರಿವು ಕೆಲವಾರು ಪ್ರಶ್ನೆಗಳ ಮೂಲಕ ಹೊಸತನವನ್ನು ಸೃಷ್ಟಿಸಿತ್ತು. 1978 ನೇ ಇಸವಿಯಲ್ಲಿ ಹಾಳೆ ತಟ್ಟೆಯನ್ನು ಪ್ರಥಮವಾಗಿ ಸಂಶೋಧಿಸಿದವರು ಸುಳ್ಯದ ಗೌರಿಶಂಕರ್ ಎಂಬವರೆಂದು ಹೆಚ್ಚು ಕಮ್ಮಿ ಯಾರಿಗೂ ಗೊತ್ತಿರಲಾರದು. ಅವರು ಸಂಶೋಧಿಸಿದ ಈ ತಟ್ಟೆ ಈ ಮಟ್ಟಿಗೆ ವಿದೇಶಕ್ಕೆ ಪ್ರಯಾಣಿಸಬಲ್ಲುದೆಂದು ಆ ಕಾಲಕ್ಕೆ ಅರಿವೇ ಇದ್ದಿರಲಾರದು. ತೆರೆಯ ಮರೆಯಲ್ಲಿ ಕಳೆದು ಹೋಗುತ್ತಿದ್ದ ಇವರ ಹೆಸರು ಈ ಕಾರ್ಯಕ್ರಮದ ಮೂಲಕ ಮುನ್ನೆಲೆಗೆ ಬಂತು. ಇಂದಿನ ಬಲು ಸಣ್ಣ ಕಿಡಿಯೆ ಮುಂದಿನ ಬಲು ದೊಡ್ಡ ಉದ್ದಿಮೆ ಯಾಗಬಹುದು ಎಂಬುದಕ್ಕೆ ಇದು ಸಾಕ್ಷಿ. ಇಂತಹ ಹಲವು ವಿಷಯಗಳನ್ನು ರಸಪ್ರಶ್ನೆಯ ಮೂಲಕ ಸಂಗ್ರಹಿಸಿದ ರೇಡಿಯೋ ಪಾಂಚಜನ್ಯ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಲೇಬೇಕು.
ಒಟ್ಟಿನಲ್ಲಿ ಸಂಪೂರ್ಣ ಯಂತ್ರ ಮೇಳ ವ್ಯವಸ್ಥಿತವಾದ ಅಚ್ಚುಕಟ್ಟಾದ ಕಾರ್ಯಕ್ರಮವಾಗಿ ಮೂಡಿ ಬಂದಿದೆ.