ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಹಸ್ರಾರು ಸಂಖ್ಯೆಯ ಭಕ್ತರ ಆಗಮನಕ್ಕೆ ಸಾಕ್ಷಿಯಾಗುವ ಜಾತ್ರಾ ಮಹೋತ್ಸವ ಈ ಬಾರಿ ಏಪ್ರಿಲ್ 10 ರಿಂದ 20 ರವರೆಗೆ ನಡೆಯಲಿದೆ. 10 ದಿನದ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಸಾಂಪ್ರದಾಯಿಕ ಉಡುಗೆ ತೊಟ್ಟು ಕ್ಷೇತ್ರಕ್ಕೆ ಬರಬೇಕು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮನವಿ ಮಾಡಿಕೊಂಡಿದೆ.
ದೇವಸ್ಥಾನದ ಜಾತ್ರಾ ಉತ್ಸವದ ಬಗ್ಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾಹಿತಿ ನೀಡಿದರು. ಏಪ್ರಿಲ್ 10 ರಿಂದ 20 ರವರೆಗೆ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವವು ನಡೆಯಲಿದೆ. ಎಪ್ರಿಲ್ 10 ರಂದು ಬೆಳಿಗ್ಗೆ 9.25 ಕ್ಕೆ ಧ್ವಜಾರೋಹಣ ನೆರವೇರಲಿದ್ದು, ಎಪ್ರಿಲ್ 16 ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಭೇಟಿ, ಎಪ್ರಿಲ್ 17 ರಂದು ಸಿಡಿಮದ್ದು ಪ್ರದರ್ಶನ ಹಾಗು ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ನಡೆಯಲಿದೆ ಎಂದರು. ಈ ಬಾರಿ ದೇವರ ಪುಷ್ಕರಣಿಯಲ್ಲಿ ವರುಣ ದೇವರ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಪುಷ್ಕರಣಿಯಲ್ಲಿ ಇಳಿಯುವ ಭಕ್ತಾಧಿಗಳಿಗೆ ಕಡ್ಡಾಯ ವಸ್ತಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಕೇವಲ ಸಾಂಪ್ರದಾಯಿಕ ಉಡುಗೆಯಲ್ಲಿ ಬರುವ ಭಕ್ತಾಧಿಗಳಿಗೆ ಮಾತ್ರ ವರುಣ ದೇವರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದ ಅವರು ದೇವರ ಬ್ರಹ್ಮರಥ ಎಳೆಯುವ ಸೇವಾಕರ್ತರಿಗೂ ವಸ್ತ್ರಸಂಹಿತೆ ಕಡ್ಡಾಯವಾಗಿದೆ. ಜಾತ್ರೆ ನಡೆಯುವ ಹತ್ತು ದಿನವೂ ಭಕ್ತಾಧಿಗಳು ಸಾಂಪ್ರದಾಯಿಕ ಉಡುಗೆಯಲ್ಲೇ ದೇವಸ್ಥಾನಕ್ಕೆ ಬರಬೇಕು ಎನ್ನುವುದು ಸಮಿತಿಯ ಆಗ್ರಹವಾಗಿದೆ ಎಂದು ಅವರು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಕರಾವಳಿಯ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಹಿಂದೂಯೇತರ ಧರ್ಮದವರಿಗೆ ವ್ಯಾಪಾರ ನಿರ್ಬಂಧ ವಿಧಿಸಲಾಗುತ್ತಿದೆ. ಅಂತೆಯೇ ಪುತ್ತೂರು ಜಾತ್ರೆಯಲ್ಲಿ ಈ ಬಾರಿಯೂ ಅನ್ಯಧರ್ಮೀಯರಿಗೆ ವಿಶೇಷವಾಗಿ ಮುಸ್ಲಿಮರಿಗೆ ಸಂತೆ ವ್ಯಾಪಾರಕ್ಕೆ ಧಾರ್ಮಿಕ ದತ್ತಿ ಕಾಯ್ದೆ ಅನ್ವಯ ನಿರ್ಬಂಧ ವಿಧಿಸಲಾಗಿದೆ.