ಕಳೆದ 5 ವರ್ಷಗಳಿಂದ ಮುಂಗಾರು ಮಳೆಯ ಸ್ಥಿತಿ ಬದಲಾಗುತ್ತಿದೆ. ಇದೀಗ ಈ ವರ್ಷ ಮಳೆಯ ಕೊರತೆ ಇಡೀ ದೇಶದಲ್ಲಿ ಕಾಡುತ್ತಿದೆ. ಈಗಿನ ಪ್ರಕಾರ ಭಾರತದ ಭೂಪ್ರದೇಶದ ಕಾಲುಭಾಗವು ಬರ ಮಾದರಿಯ ಪರಿಣಾಮವನ್ನು ಎದುರಿಸುತ್ತಿದೆ. ಮುಂಗಾರು ತೀರಾ ದುರ್ಬಲವಾಗಿದೆ.
ಭಾರತದಲ್ಲಿ ಏಪ್ರಿಲ್ ತಿಂಗಳಿನಿಂದ ಮಳೆಯ ನಿರೀಕ್ಷೆ ಆರಂಭವಾಗಿದೆ. ಅಂದಿನಿಂದಲೇ ಬರಗಾಲದ ಪರಿಸ್ಥಿತಿ ಎದುರಿಸಬೇಕಾಗಿ ಬಂದಿದೆ. ಕೆಲವು ರಾಜ್ಯಗಳಲ್ಲಿ, ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಆದರೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆಗಸ್ಟ್‌ನಲ್ಲಿ ಕೂಡಾ ವಾಡಿಕೆಗಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ. ದೇಶದ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾದರೂ ಕನಿಷ್ಠ 25.1 ಶೇ ಪ್ರದೇಶವು ಬರಗಾಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಮುಂಬರುವ ವಾರಗಳಲ್ಲಿ ಮತ್ತೆ ದುರ್ಬಲ ಮುಂಗಾರು ಮುಂದುವರಿಯಲಿದ್ದು, ದೇಶದ ಕೃಷಿ ಪರಿಸ್ಥಿತಿ ಸಂಕಷ್ಟಕ್ಕೆ ಬರಲಿದೆ.
ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳದ ಪೂರ್ವ ರಾಜ್ಯಗಳು, ಪೂರ್ವ ಉತ್ತರ ಪ್ರದೇಶ, ಈಶಾನ್ಯ ರಾಜ್ಯಗಳಾದ ಮಣಿಪುರ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂ, ಲಡಾಖ್ ಮತ್ತು ಹಿಮಾಚಲ ಪ್ರದೇಶದ ಮರುಭೂಮಿ ಪ್ರದೇಶಗಳ ಕೆಲವು ಭಾಗಗಳಲ್ಲಿ ಬರಗಾಲವು ಹೆಚ್ಚಾಗಿ ಆವರಿಸಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಹಲವು ಕಡೆ ಮಳೆಯಾಗಿದೆ. ಆದರೆ ನಿರೀಕ್ಷೆಯಷ್ಟು ಮಳೆಯಾಗಿಲ್ಲ.
ಭಾರತದ ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಜುಲೈ 31 ರವರೆಗೆ ಶೇ 22 ರಷ್ಟು ಮಳೆ ಕೊರತೆಯಿದೆ.
ಜುಲೈ 31 ರಂದು, ಹವಾಮಾನ ಇಲಾಖೆಯು ತನ್ನ ಅಧಿಕೃತ ಹೇಳಿಕೆಯಲ್ಲಿ, 2023 ರ ನೈಋತ್ಯ ಮಾನ್ಸೂನ್ ಋತುವಿನ ಆಗಸ್ಟ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟಾರೆಯಾಗಿ ದೇಶದಾದ್ಯಂತ ಮಳೆಯು ಸಾಮಾನ್ಯವಾಗಿರುವ ಸಾಧ್ಯತೆಯಿದೆ ಎಂದು ಹೇಳಿದೆ.