ಮೊಬೈಲ್ ನೋಡುತ್ತಾ ಊಟ ಮಾಡಬೇಡಿ, ಶಿಸ್ತಿನ ಜೀವನವೇ ಆರೋಗ್ಯದ ರಹಸ್ಯ – ರಾಘವೇಶ್ವರ ಶ್ರೀ

August 1, 2026
7:39 PM
ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಸಮತೋಲನದಲ್ಲಿದ್ದಾಗ ಮಾತ್ರ ಆರೋಗ್ಯ ಹಾಗೂ ಆಧ್ಯಾತ್ಮಿಕ ಪ್ರಗತಿ ಸಾಧ್ಯ ಎಂದು ರಾಮಚಂದ್ರಾಪುರ ಶ್ರೀ ಹೇಳಿದರು. ಮೊಬೈಲ್ ನೋಡುತ್ತಾ ಊಟ ಮಾಡುವ ಅಭ್ಯಾಸ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ನೀಡಿದರು.

ಮನುಷ್ಯನ ಆರೋಗ್ಯಕರ ಹಾಗೂ ಶಾಂತಿಯುತ ಜೀವನಕ್ಕೆ ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಎಂಬ ಮೂರು ಅಂಶಗಳು ಅತ್ಯಂತ ಪ್ರಮುಖವಾಗಿದ್ದು, ಇವುಗಳನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳುವುದೇ ಆರೋಗ್ಯ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಮೂಲಾಧಾರ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಧರ್ಮಸಭೆಯಲ್ಲಿ ಶನಿವಾರ ಪ್ರವಚನ ನೀಡಿದ ಅವರು, ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಸರಿಯಾದ ರೀತಿಯಲ್ಲಿ ಪಾಲನೆಯಾದಾಗ ದೇಹ ಆರೋಗ್ಯಕರವಾಗಿರುವುದರ ಜೊತೆಗೆ ಮನಸ್ಸು ಶಾಂತವಾಗಿರುತ್ತದೆ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯೂ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ದೇಹವನ್ನು ಸುಸ್ಥಿತಿಯಲ್ಲಿಡುವ ಪ್ರಮುಖ ಆಧಾರ ಕರ್ಮವಾಗಿದ್ದು, ಜೀವಿತಾವಧಿಯನ್ನು ಕರ್ಮವೇ ನಿರ್ಧರಿಸುತ್ತದೆ. ಆದರೆ ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯದಲ್ಲಿ ಅಸಮತೋಲನ ಉಂಟಾದರೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಅನಿವಾರ್ಯವಾಗುತ್ತವೆ ಎಂದು ಹೇಳಿದರು.

ಆಹಾರವೇ ಮನಸ್ಸಿನ ಸ್ವಭಾವ ರೂಪಿಸುತ್ತದೆ :  ಪ್ರತಿಯೊಬ್ಬ ಜೀವಿಗೂ ದೊರೆಯುವ ಅನ್ನವು ಅನ್ನಪೂರ್ಣೇಶ್ವರಿಯ ಕೃಪೆಯ ಫಲವಾಗಿದೆ. ಮನುಷ್ಯನ ದೇಹ ಅನ್ನದಿಂದಲೇ ರೂಪುಗೊಳ್ಳುತ್ತದೆ. ತಂದೆ-ತಾಯಿ ಸೇವಿಸುವ ಆಹಾರದಿಂದಲೇ ಶಿಶುವಿನ ಜನನವಾಗುತ್ತದೆ. ಹುಟ್ಟಿದ ಬಳಿಕವೂ ದೇಹದ ಜೀವಕೋಶಗಳು ನಿರಂತರವಾಗಿ ನವೀಕರಣಗೊಳ್ಳುತ್ತಿದ್ದು, ಅದರ ಮೂಲವೂ ಆಹಾರವೇ ಎಂದು ಶ್ರೀಗಳು ವಿವರಿಸಿದರು.

ಯಾವ ರೀತಿಯ ಆಹಾರ ಸೇವಿಸುತ್ತೇವೆಯೋ ಅದೇ ರೀತಿಯ ಮನೋಭಾವವೂ ರೂಪುಗೊಳ್ಳುತ್ತದೆ. ಸಾತ್ವಿಕ ಆಹಾರ ಶಾಂತ ಮನಸ್ಸನ್ನು ಬೆಳೆಸಿದರೆ, ಅತಿಯಾದ ಖಾರ, ಹುಳಿ ಹಾಗೂ ಅಸಮತೋಲನ ಆಹಾರ ಮನಸ್ಸಿನ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಮೊಬೈಲ್ ನೋಡುತ್ತಾ ಊಟ ಮಾಡಬೇಡಿ : ಊಟ ಮಾಡುವಾಗ ಕೇವಲ ಆಹಾರವೇ ಮುಖ್ಯವಲ್ಲ, ಆಗಿನ ಮನಸ್ಥಿತಿಯೂ ಅಷ್ಟೇ ಮುಖ್ಯವಾಗಿದೆ. ದೇವರ ಸ್ಮರಣೆ, ಶಾಂತ ಮನಸ್ಸು ಮತ್ತು ಕೃತಜ್ಞತೆಯ ಭಾವದೊಂದಿಗೆ ಆಹಾರ ಸೇವಿಸಬೇಕು. ದೂರದರ್ಶನ ವೀಕ್ಷಿಸುತ್ತಾ ಅಥವಾ ಮೊಬೈಲ್ ನೋಡುತ್ತಾ ಊಟ ಮಾಡುವುದರಿಂದ ಆಹಾರದ ಪಾವಿತ್ರ್ಯ ಕುಗ್ಗುವುದಲ್ಲದೆ, ಮನಸ್ಸಿನ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ ಎಂದು ಶ್ರೀಗಳು ಎಚ್ಚರಿಕೆ ನೀಡಿದರು.

ನಿದ್ರೆ ದೇವಿಯ ಸ್ವರೂಪ : ಆಯುರ್ವೇದದಲ್ಲಿ ನಿದ್ರೆಯನ್ನು ‘ಭೂತಧಾತ್ರಿ’ ಎಂದು ಕರೆಯಲಾಗುತ್ತದೆ. ಅಂದರೆ ಎಲ್ಲಾ ಜೀವಿಗಳನ್ನು ಪೋಷಿಸುವ ತಾಯಿ ಎಂದರ್ಥ. ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುವುದರಿಂದ ದೇಹ ಪುನಶ್ಚೇತನಗೊಂಡು ಆರೋಗ್ಯ ವೃದ್ಧಿಯಾಗುತ್ತದೆ.

ರಾತ್ರಿ ತಡವಾಗಿ ಮಲಗುವುದು, ಹಗಲಿನಲ್ಲಿ ನಿದ್ರೆ ಮಾಡುವ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇಂತಹ ಅಸಮಯದ ನಿದ್ರೆಯನ್ನು ಆಯುರ್ವೇದದಲ್ಲಿ ‘ಕಾಲರಾತ್ರಿ’ಗೆ ಹೋಲಿಸಲಾಗಿದ್ದು, ಇದು ವಾತ, ಪಿತ್ತ ಮತ್ತು ಕಫದ ಸಮತೋಲನವನ್ನು ಹಾಳುಮಾಡಿ ಜೀರ್ಣಕ್ರಿಯೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

ಅನ್ನವನ್ನು ದೇವರ ಪ್ರಸಾದವೆಂದು ಗೌರವಿಸುವುದು, ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ಶಾಂತ ಮನಸ್ಸಿನಿಂದ ಆಹಾರ ಸೇವಿಸುವುದು, ನಿಯಮಿತ ನಿದ್ರೆ ಹಾಗೂ ಶಿಸ್ತಿನ ಜೀವನಶೈಲಿಯೇ ಆರೋಗ್ಯಕರ ಬದುಕಿನ ನಿಜವಾದ ರಹಸ್ಯ ಎಂದು ಅಭಿಪ್ರಾಯಪಟ್ಟರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Jagadguru Sri Raghaveshwara Bharathi Mahaswamiji of Sri Ramachandrapura Math said that a disciplined life based on proper food, adequate sleep, and brahmacharya is the foundation for good health and spiritual progress. Speaking during the Annabrahma Chaturmasya discourse at Gokarna, he advised people to avoid using mobile phones while eating, consume sattvic food, maintain regular sleep habits, and treat food as a divine blessing.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?
September 10, 2026
10:45 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?
September 10, 2026
11:29 AM
by: ಸಾಯಿಶೇಖರ್ ಕರಿಕಳ
ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ
September 10, 2026
10:59 AM
by: ದ ರೂರಲ್ ಮಿರರ್.ಕಾಂ
ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ : ಮಂಗಳೂರು ಮಹಾನಗರಪಾಲಿಕೆ ಸೂಚನೆ
September 9, 2026
9:26 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror