ಬೆಂಗಳೂರು: ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ 28ನೇ ಚಾತುರ್ಮಾಸ ಆಷಾಢ ಪೂರ್ಣಿಮೆ (ಜುಲೈ 24) ಯಿಂದ ಭಾದ್ರಪದ ಪೂರ್ಣಿಮೆ (ಸೆಪ್ಟೆಂಬರ್ 20) ವರೆಗೆ ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯಲಿದೆ.
ಅರಿವಿನ ಹಣತೆಯ ಹಚ್ಚೋಣ- ವಿದ್ಯಾವಿಶ್ವವ ಕಟ್ಟೋಣ ಎಂಬ ಧ್ಯೇಯವಾಕ್ಯದೊಂದಿಗೆ ಈ ಚಾತುರ್ಮಾಸ್ಯವನ್ನು ವಿಶ್ವವಿದ್ಯಾ ಚಾತುರ್ಮಾಸ್ಯವಾಗಿ ಆಚರಿಸಲಾಗುತ್ತಿದೆ ಎಂದು ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯುಎಸ್‍ಜಿ ಭಟ್ ಮತ್ತು ಪ್ರಧಾನ ಕಾರ್ಯದರ್ಶಿ ವಾದಿರಾಜ ಸಾಮಗ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಚಾತುರ್ಮಾಸ್ಯ ಪೂರ್ವಭಾವಿಯಾಗಿ ಗುರುವಾರ ಮಧ್ಯಾಹ್ನ ಶ್ರೀಗಳ ಪುರಪ್ರವೇಶ ವೈಭವದಿಂದ ನಡೆಯಿತು.
ಪಾರಂಪರಿಕ ಶಿಕ್ಷಣದ ಜತೆಗೆ ನವಯುಗ ಶಿಕ್ಷಣವನ್ನೂ ನೀಡುವ ಮೂಲಕ ಸನಾತನ ಸಂಸ್ಕøತಿ- ಸಂಸ್ಕಾರವನ್ನು ಮಕ್ಕಳಿಗೆ ನೀಡಿ ಅವರಲ್ಲಿ ದೇಶಭಕ್ತಿ- ಧರ್ಮಶ್ರದ್ಧೆಯನ್ನು ಬೆಳೆಸುವ ಮಹಾಸಂಕಲ್ಪದಂತೆ ಉದಯಿಸಿ ಬೆಳಗುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಮೂಲವಾಗಿರುವ ಗುರುಕುಲಗಳು ಈ ಚಾತುರ್ಮಾಸ್ಯದ ಕೇಂದ್ರ ಬಿಂದುವಾಗಿರುತ್ತದೆ.ಗುರುಕುಲಗಳ ಬಗ್ಗೆ ಮಾಹಿತಿ ಪ್ರಸಾರ, ಘನ ಪಾರಾಯಣ, ವೇದ ಪಾರಾಯಣ, ಧನ್ವಂತರಿ ಹವನ, ಶ್ರೀಗಳ ವರ್ಧಂತಿ ಉತ್ಸವ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳು ಚಾತುರ್ಮಾಸ್ಯದ ಅವಧಿಯಲ್ಲಿ ನಡೆಯಲಿವೆ.
24ರಂದು ಮುಂಜಾನೆ 8ಕ್ಕೆ ಶ್ರೀಕರಾರ್ಚಿತ ಪೂಜೆ, ಬಳಿಕ ವ್ಯಾಸಪೂಜೆಯೊಂದಿಗೆ ಆರಂಭವಾಗಲಿರುವ ಚಾತುರ್ಮಾಸ್ಯ ವ್ರತ, ಸೆಪ್ಟೆಂಬರ್ 20ರಂದು ಸೀಮೋಲ್ಲಂಘನದೊಂದಿಗೆ ಸಂಪನ್ನವಾಗಲಿದೆ.
ಇಡೀ ಜಗತ್ತು ಕೋವಿಡ್-19 ಸಾಂಕ್ರಾಮಿಕದಿಂದ ತತ್ತರಿಸುತ್ತಿರುವ ಸನ್ನಿವೇಶದಲ್ಲಿ ಚಾತುರ್ಮಾಸ್ಯ ಅವಧಿಯಲ್ಲಿ ಸರ್ಕಾರ ಸೂಚಿಸುವ ಎಲ್ಲ ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಿದ್ದು, ಭಿಕ್ಷಾಸೇವೆ, ಪಾದುಕಾಪೂಜೆಯಂಥ ಧಾರ್ಮಿಕ ವಿಧಿವಿಧಾನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದ್ದು, ಶಿಷ್ಯರು ಸಹಕರಿಸಬೇಕು ಎಂದು ಪ್ರಕಟಣೆ ಮನವಿ ಮಾಡಿದೆ.
ವಿಶ್ವವಿದ್ಯಾ ಚಾತುರ್ಮಾಸ್ಯದಲ್ಲಿ ಸಂಗ್ರಹವಾಗುವ ಮೊತ್ತದಲ್ಲಿ ದೊಡ್ಡ ನಿಧಿಯೊಂದನ್ನು ವಿಶ್ವವಿದ್ಯಾಪೀಠದ ವಾರ್ಷಿಕ ನಿರ್ವಹಣೆಗಾಗಿ ಸಮರ್ಪಿಸಲು ಉದ್ದೇಶಿಸಿದ್ದು ಶಿಷ್ಯ ಭಕ್ತರು ದೇಶದ ಭವಿಷ್ಯವನ್ನೇ ಬದಲಿಸಬಲ್ಲ ಈ ವಿಶ್ವವಿದ್ಯಾಪೀಠ ಕಟ್ಟುವಲ್ಲಿ ಕೈಜೋಡಿಸಬೇಕು ಎಂದು ಸಂಘಟಕರು ಕೋರಿದ್ದಾರೆ.