ಜನ ಅಥವಾ ಧನ ಶಕ್ತಿಯಿಂದ ದೇಶ ಬದಲಿಸಲಾಗದು; ಸೈನ್ಯ, ಕೋಶ ಅಥವಾ ಜನಸ್ತೋಮ ಇಲ್ಲದೇ ಶಂಕರಾಚಾರ್ಯರು ತಮ್ಮ ಜ್ಞಾನಪ್ರಭೆಯಿಂದ ಅಖಂಡ ಭಾರತದ ಪುನರುತ್ಥಾನ ಮಾಡಿದಂತೆ, ವಿಷ್ಣುಗುಪ್ತ ವಿಶ್ವವಿದ್ಯಾಪೀಠಪ್ರಾಚೀನ ಜ್ಞಾನಪರಂಪರೆಯ ತಳಹದಿಯಲ್ಲಿ ದೇಶದ ಪುನರ್ ನಿರ್ಮಾಣಕ್ಕೆ ಹೊರಟಿದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅವರು ಬೆಂಗಳೂರಿನ ಗಿರಿನಗರ ಶ್ರೀರಾಮಾಶ್ರಮದಲ್ಲಿ 28ನೇ ಚಾತುರ್ಮಾಸ್ಯ ವ್ರತಾರಂಭದಲ್ಲಿ ಧರ್ಮಸಂದೇಶ ನೀಡಿದರು, “ಇಡೀ ವಿಶ್ವಕ್ಕೆ ಕೋವಿಡ್-19 ಎಂಬ ಗಾಡಾಂಧಕಾರ ಕವಿದ ಸಂಕಷ್ಟದ ಸನ್ನಿವೇಶದಲ್ಲಿ ಈ ಅದ್ಭುತ ಸಂಸ್ಥೆ ಅನಾವರಣಗೊಳ್ಳುತ್ತಿದೆ. ಇದು ದೈವಪ್ರೇರಣೆ. ವಾಸ್ತು, ಆಯುರ್ವೇದ, ವೃಕ್ಷಾಯುರ್ವೇದ, ಸಾಮವೇದದಂಥ ಅಳಿವಿನ ಅಂಚಿನಲ್ಲಿರುವ ಹಲವು ವಿದ್ಯೆಗಳ ಪುನರುತ್ಥಾನ ಇಲ್ಲಿ ನಡೆಯುತ್ತಿದೆ ಎಂದು ಬಣ್ಣಿಸಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಮನುಷ್ಯತ್ವ, ಮುಮುಕ್ಷುತ್ವ ಬರುವುದು ದೈವಾನುಗ್ರಹದಿಂದ. ಹಿಂದೂ ಧರ್ಮ ಯಾವುದೇ ಪುಸ್ತಕದ ಅಡಿಪಾಯದಲ್ಲಿ ನಿಂತ ಧರ್ಮವಲ್ಲ; ಅವಿಚ್ಛಿನ ಪರಂಪರೆಯಲ್ಲಿ ನಿಂತಿರುವ ಧರ್ಮ. ದೇಶದ ಭೂಭಾಗದ ಮೇಲೆ ಅತಿಕ್ರಮಣಗಳು ನಡೆದರೂ, ಜ್ಞಾನಭಂಡಾರಗಳನ್ನು ನಾಶಪಡಿಸಿದರೂ, ಸನಾತನ ಧರ್ಮ ಉಳಿದುಕೊಂಡಿರುವುದು ಗುರುಪರಂಪರೆಯಿಂದ. ಅಂಥ ಗುರುಪರಂಪರೆಯನ್ನು ಪೂಜಿಸುವ ಪುಣ್ಯ ಸಂದರ್ಭ ಗುರುಪೂರ್ಣಿಮೆ ಎಂದು ಬಣ್ಣಿಸಿದರು. ಶಂಕರ ಪರಂಪರೆಯ ಸೂರ್ಯನಂತೆ ಪ್ರಜ್ವಲಿಸುತ್ತಿರುವ ರಾಘವೇಶ್ವರ ಶ್ರೀಗಳ ವಿಶ್ವವಿದ್ಯಾಪೀಠದ ಕಾರ್ಯಕ್ಕೆ ಕೇಂದ್ರ ಸರ್ಕಾರ ಎಲ್ಲ ಅಗತ್ಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು.
ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಮಾತನಾಡಿ, ಭಾರತದ ಭವ್ಯ ಪರಂಪರೆಯನ್ನು ಮರಳಿ ಪಡೆಯುವ ಮಹಾಭಾಗ್ಯವನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮೂಲಕ ಶ್ರೀರಾಘವೇಶ್ವರ ಭಾರತೀಸ್ವಾಮೀಜಿ ಲೋಕಕ್ಕೆ ಕರುಣಿಸಿದ್ದಾರೆ ಎಂದು ಹೇಳಿದರು.
ಶ್ರೀಮಠದ ಸಿಇಓ ಕೆ.ಜಿ.ಭಟ್, ಚಾತುರ್ಮಾಸ್ಯ ಮಹಾಸಮಿತಿ ಗೌರವಾಧ್ಯಕ್ಷ ದಿವಾಣ ಕೇಶವ ಕುಮಾರ್, ಕ್ರಿಯಾಸಮಿತಿ ಗೌರವಾಧ್ಯಕ್ಷ ಜಿ.ಎಂ.ಹೆಗಡೆ ಹುಕ್ಲಮಕ್ಕಿ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಎಸ್.ಜಿ.ಭಟ್, ಪ್ರಧಾನ ಕಾರ್ಯದರ್ಶಿ ವಾದಿರಾಜ ಸಾಮಗ, ಸಂಚಾಲಕ ಹರಿಪ್ರಸಾದ್ ಪೆರಿಯಾಪು, ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಉಪಾಧ್ಯಕ್ಷೆ ಕೆ.ಟಿ.ಶೈಲಜಾ ಭಟ್, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ಮತ್ತಿತರರು ಉಪಸ್ಥಿತರಿದ್ದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.