ಸಿಟ್ಟು ಎಂಬ ಬೆಂಕಿ ಮೊದಲು ನಮ್ಮನ್ನು ಸುಡುತ್ತದೆ; ಆ ಬಳಿಕ ಇತರರನ್ನು ಸುಡುತ್ತದೆ. ಕ್ರೋಧವೆಂಬ ಬೆಂಕಿ ನಮ್ಮ ಮನಸ್ಸು, ಬದುಕು, ಸಂಬಂಧ ಹೀಗೆ ಎಲ್ಲವನ್ನೂ ಸುಡುತ್ತದೆ. ಆದ್ದರಿಂದ ಜೀವನದಲ್ಲಿ ಸಂಯಮ ಎಲ್ಲಕ್ಕಿಂತ ಮುಖ್ಯ. ಸಿಟ್ಟನ್ನು ಗೆಲ್ಲುವ ಶಕ್ತಿಯನ್ನು ಶ್ರೀರಾಮ ನಮಗೆಲ್ಲ ಕರುಣಿಸಲಿ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಗೋಕರ್ಣದ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಸೋಮವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಸಿಟ್ಟಿನ ಪರಿಣಾಮ ಎಂದೂ ಒಳ್ಳೆಯದಾಗುವುದಿಲ್ಲ. ಸಿಟ್ಟು ಬಂದಾಗ ಆದ ಕೆಟ್ಟ ಕೆಲಸದ ಕಲೆ ಎಂದಿಗೂ ಮಾಸುವುದಿಲ್ಲ. ಸಿಟ್ಟು ಎಷ್ಟೋ ಬಾರಿ ಅನಾಹುತಕ್ಕೆ ಕಾರಣವಾಗುತ್ತದೆ ಎಂದು ಉದಾಹರಣೆ ಸಹಿತ ವಿವರಿಸಿದರು.
ಸಿಟ್ಟು ಬಂದಾಗ ಸರಿ ತಪ್ಪು ಯಾವುದು ಎಂದು ಗೊತ್ತಾಗುವುದಿಲ್ಲ. ಬುದ್ಧಿ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ನೀವು ಸಿಟ್ಟನ್ನು ಗುರುತಿಸುವಂತಾದರೆ ಅದು ತಾನಾಗಿಯೇ ನಮ್ಮಿಂದ ದೂರವಾಗುತ್ತದೆ ಎಂದರು. ಮನುಷ್ಯನಿಗೆ ಹಾಗೂ ಜೀವಲೋಕದ ಎಲ್ಲರಿಗೆ ಅತ್ಯಂತ ಕಠಿಣ ಎನಿಸಿದ, ಗೆಲ್ಲಲು ಅತ್ಯಂತ ಕಷ್ಟಸಾಧ್ಯ ಎನಿಸುವ ಶತ್ರು ಯಾರು ಎಂದು ಯಕ್ಷ ಒಮ್ಮೆ ಧರ್ಮರಾಜನನ್ನು ಕೇಳುತ್ತಾನೆ. ಮಹಾಭಾರತದ ದುಷ್ಟ ಚತುಷ್ಟಯರು ಎನಿಸಿದ ಧುರ್ಯೋಧನ, ಕರ್ಣ, ದುಶ್ಯಾಸನ ಮತ್ತು ಶಕುನಿ ಎಂದು ನಾವು ಇಂಥ ಪ್ರಶ್ನೆಗೆ ಉತ್ತರ ನೀಡುತ್ತಿದ್ದೆವು. ಆದರೆ ಕ್ರೋಧ ಎಂದು ಧರ್ಮರಾಜ ಉತ್ತರಿಸುತ್ತಾನೆ. ಇದು ಮಹಾತ್ಮರ ಯೋಚನಾ ಲಹರಿ ಎಂದು ಅಭಿಪ್ರಾಯಪಟ್ಟರು.
ಕ್ರೋಧಕ್ಕೆ ತುತ್ತಾಗದೇ ಇರುವವರು ಯಾರೂ ಇಲ್ಲ. ಇದು ಎಲ್ಲರ ನಿಜವಾದ ಶತ್ರು. ಕ್ರೋಧ ಎಂದರೆ ನಮ್ಮ ಬುದ್ಧಿ ನಮ್ಮ ವಿವೇಕವನ್ನು ತಪ್ಪಿಸುವಂಥದ್ದು. ಸಿಟ್ಟು ಬಂದಾಗ ಎಂಥ ಬುದ್ಧಿವಂತ ಕೂಡಾ ವಿವೇಕ ಕಳೆದುಕೊಳ್ಳುತ್ತಾನೆ. ಸಿಟ್ಟು ಜೀವನಕ್ಕೇ ಮುಳುವಾದ ನಿದರ್ಶನಗಳೂ ಸಾಕಷ್ಟಿವೆ ಎಂದು ಹೇಳಿದರು. ಸಿಟ್ಟಿನಿಂದ ಆಡಿದ ಮಾತು, ಮಾಡಿದ ಕಾರ್ಯದಿಂದ ಆಗುವ ಅನಾಹುತವನ್ನು ತಪ್ಪಿಸಲು ಸಾಧ್ಯವಿಲ್ಲ. ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಮನಸ್ಸನ್ನು ಗೆಲ್ಲುವುದು ಯುದ್ಧ ಅಥವಾ ರಾಜ್ಯವನ್ನು ಗೆದ್ದದ್ದಕ್ಕಿಂತ ಮೇಲು. ರಾವಣ ಇಂದ್ರಿಯಗಳನ್ನು ಗೆದ್ದು ವರಗಳನ್ನು ಪಡೆದ. ಆದರೆ ಬಳಿಕ ಇಂದ್ರಿಯಗಳು ರಾವಣನನ್ನು ಗೆದ್ದವು. ರಾವಣ ಕ್ರೋಧದಿಂದ ಅವಿವೇಕಿಯಾಗಿ ಮಾಡಬಾರದ ಪಾಪ ಕಾರ್ಯಗಳನ್ನು ಮಾಡಿದ. ಅದರ ಫಲ ಆತನ ನಾಶ ಎಂದು ಬಣ್ಣಿಸಿದರು.
ಯುಪಿಎಸ್ಸಿ ಪರೀಕ್ಷೆಯಲ್ಲಿ 62 ರ್ಯಾಂಕ್ ಗಳಿಸಿ ಐಎಫ್‍ಎಸ್‍ಗೆ ಆಯ್ಕೆಯಾದ ಕುಮಟಾ ಮಂಡಲ ಅಚವೆಯ ಲಲಿತಾ- ಸೀತಾರಾಮ ಹೆಗಡೆಯವರ ಪುತ್ರ ಎಸ್.ನವೀನ್‍ಕುಮಾರ್ ಅಚವೆ ಅವರನ್ನು ಶ್ರೀಗಳು ಸನ್ಮಾನಿಸಿದರು. ಚಾತುರ್ಮಾಸ್ಯ ಅಂಗವಾಗಿ ಸೋಮವಾರ ಎಂ.ಎಂ.ಗಣೇಶ್ ಮತ್ತು ತಂಡದಿಂದ ಭಜನೆ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ರುದ್ರಹವನ, ರಾಮತಾರಕ ಹವನ, ಚಂಡೀಪಾರಾಯಣ ನಡೆಯಿತು.
ಕೋವಿಡ್-19 ಈಗ ನಮ್ಮ ಜೀವನದ ಭಾಗ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್…
ದಕ್ಷಿಣಕನ್ನಡ, ಉಡುಪಿ, ಮಡಿಕೇರಿ ಸೇರಿದಂತೆ ಕೊಡಗು ಜಿಲ್ಲೆಯ ಬಹುತೇಕ ಕಡೆ ಧಾರಾಕಾರ ಮಳೆಯಾಗುತ್ತಿದೆ.…
ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಂದಿನ 2 ಅಥವಾ 3…
ಕಳೆದ 16 ವರ್ಷಗಳ ದಾಖಲೆಗಳ ಪ್ರಕಾರ ನಿಗದಿತ ದಿನಕ್ಕಿಂತ ಮೊದಲೇ ಈ ಬಾರಿ…
ಉತ್ತಮ ಮಳೆಗೆ ಅರಣ್ಯ ಪ್ರದೇಶವೆಲ್ಲ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ, ಮಳೆ ಹನಿಗಳಿಗೆ ಮೈಯೊಡ್ಡಿದ…
ರಾಜ್ಯದ ಅಡಿಕೆ ಬೆಳೆ ಅತ್ಯಂತ ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕ ಇಲ್ಲ.…