ಭಾರತದ ಭವಿಷ್ಯದ ಶೈಕ್ಷಣಿಕ ಕೇಂದ್ರವಾಗಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಶ್ರೀರಾಮಚಂದ್ರಾಪುರ ಮಠ ಅಭಿವೃದ್ಧಿಪಡಿಸುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಪರಂಪರಾ ಗುರುಕುಲ ಆರಂಭಿಸಲು ಹಾಗೂ ಸದ್ಯದಲ್ಲೇ ಪರಂಪರಾ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಯೋಜಿಸಲಾಗಿದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅವರು ಗೋಕರ್ಣದ ಅಶೋಕೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಈಗಾಗಲೇ ಪರಂಪರಾ ಗುರುಕುಲ ಸಣ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ್ದು, ಮುಂದಿನ ವರ್ಷದಿಂದ ಇದು ಬೃಹತ್ ಸ್ವರೂಪ ಪಡೆಯಲಿದೆ. ಆ ಬಳಿಕ ಇದೇ ಆಧಾರದಲ್ಲಿ ಪರಂಪರಾ ವಿಶ್ವವಿದ್ಯಾನಿಲಯ ಆರಂಭಿಸಲು ಅಗತ್ಯ ಚೌಕಟ್ಟು ಸಿದ್ಧಪಡಿಸಲಾಗಿದ್ದು, ಸರ್ಕಾರದ ಹಂತದಲ್ಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಈ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿರುವ ಗುರುಕುಲಗಳು ಕಳೆದ ಎರಡು ವರ್ಷದಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಾಡಿನ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಋಷಿಯುಗ ಮತ್ತು ನವಯುಗ ಶಿಕ್ಷಣದ ಸಮನ್ವಯದೊಂದಿಗೆ ಗುರುಕುಲಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಗುರುಕುಲ ಚಾತುರ್ಮಾಸ್ಯ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ ಎರಡು ತಿಂಗಳಿಂದ ನಡೆಯುತ್ತಿರುವ ಸಹಸ್ರ ಚಂಡಿ ಮಹಾಯಾಗದ ಪೂರ್ಣಾಹುತಿ ಈ ತಿಂಗಳ 9ರಂದು (ಶುಕ್ರವಾರ) ನಡೆಯಲಿದೆ ಎಂದು ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು ಮತ್ತು ವ್ಯವಸ್ಥಾ ಪರಿಷತ್ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ ಹೇಳಿದರು.ಶ್ರೀಗಳಿಂದ ಸಂಕಲ್ಪಿತಗೊಂಡು ಲೋಕಕಲ್ಯಾಣಾರ್ಥವಾಗಿ ಮತ್ತು ದೇಶಕ್ಕೆ ಹಾಗೂ ವಿಶ್ವಕ್ಕೆ ಎದುರಾಗಿರುವ ವಿಕೋಪ ನಿವಾರಣೆಗೆ ಸಂಕಲ್ಪಿಸಿ ಈ ಮಹಾಯಾಗವನ್ನು ಚಾತುರ್ಮಾಸ್ಯ ಸೇವಾಸಮಿತಿ ಕಾರ್ಯಾಧ್ಯಕ್ಷರು ಮತ್ತು ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನದ ಉಪಾಧಿವಂತ ಮಂಡಳಿಯ ಪ್ರಮುಖರಾದ ಪರಮೇಶ್ವರ ಮಾರ್ಕಾಂಡೇಯ, ವೇದಮೂರ್ತಿ ಅಮೃತೇಶ ಹಿರೇ ಭಟ್ ಅಧ್ವರ್ಯದಲ್ಲಿ ನಡೆಯುತ್ತಿರುವ ಮಹಾಯಾಗದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಐನೂರಕ್ಕೂ ಹೆಚ್ಚು ಮಂದಿ ಋತ್ವಿಜರು ಪಾಲ್ಗೊಂಡಿದ್ದಾರೆ ಎಂದರು.
ಕೊರೋನಾ ಮಹಾಮಾರಿಯಂಥ ಹಲವು ಸಾಂಕ್ರಾಮಿಕಗಳು ವಿಶ್ವವ್ಯಾಪಿಯಾಗಿದ್ದು, ಪ್ರಪಂಚದ ವಿವಿಧೆಡೆ ಪ್ರಾಕೃತಿಕ ವಿಕೋಪಗಳು ಜನತೆಯನ್ನು ಸಂಕಷ್ಟಕ್ಕೀಡುಮಾಡಿದ್ದು, ಈ ವಿಪತ್ತು ನಿವಾರಣೆಗೆ ಜಗನ್ಮಾಥೆಯಾದ ದುರ್ಗೆಯನ್ನು ಪ್ರಾರ್ಥಿಸುವ ಉದ್ದೇಶದಿಂದ ಈ ಮಹಾಯಾಗ ನಡೆಯುತ್ತಿದ್ದು, ಸೆಪ್ಟೆಂಬರ್ 9ರಂದು ಸಂಪನ್ನಗೊಳ್ಳುತ್ತಿದೆ.
ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಆಷಾಢ ಹುಣ್ಣಿಮೆಯಂದು 29ನೇ ಚಾತುರ್ಮಾಸ್ಯವನ್ನು ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಗುರುಕುಲ ಚಾತುರ್ಮಾಸ್ಯವಾಗಿ ಆರಂಭಿಸಿದ್ದು, ಇದು ಭಾದ್ರಪದ ಹುಣ್ಣಿಮೆಯಂದು ಅಂದರೆ ಸೆಪ್ಟೆಂಬರ್ 10ರಂದು ಸಂಪನ್ನಗೊಳ್ಳಲಿದೆ. ಗಂಗಾವಳಿ ನದಿಯನ್ನು ದಾಟಿ ಬಳಿಕ ಶ್ರೀ ಮಲ್ಲಿಕಾರ್ಜುನ ದೇವರ ದರ್ಶನ ಪಡೆದು ಸೀಮೋಲ್ಲಂಘನೆ ಕೈಗೊಳ್ಳಲಿದ್ದಾರೆ. ಸೀಮೋಲ್ಲಂಘನದೊಂದಿಗೆ ಚಾತುರ್ಮಾಸ್ಯ ವ್ರತ ಸಂಪನ್ನಗೊಳ್ಳಲಿದೆ.
ಅರುವತ್ತು ದಿನಗಳ ಚಾತುರ್ಮಾಸ್ಯದ ಅವಧಿಯಲ್ಲಿ ರಾಜ್ಯದ ಗೃಹಸಚಿವರಾದಿಯಾಗಿ ಅಸಂಖ್ಯಾತ ಗಣ್ಯರು ಈ ಪುಣ್ಯ ಪರಿಸರಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದಿದ್ದು, ರಾಜ್ಯದ ಹಾಗೂ ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಈ ಪುಣ್ಯಸಂದರ್ಭಕ್ಕೆ ಸಾಕ್ಷಿಯಾಗಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಕುಮಟಾ- ಹೊನ್ನಾವರ ಕ್ಷೇತ್ರದ ಶಾಸಕ ಶ್ರೀ ದಿನಕರ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಐದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಈ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವಿವರ ನೀಡಿದರು.
ಪ್ರತಿ ಚಾತುರ್ಮಾಸ್ಯ ಮಂಗಲದ ದಿನ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಶಿಷ್ಯಭಕ್ತರಿಗೆ ಚಾತುರ್ಮಾಸ್ಯ ಪ್ರಶಸ್ತಿಯನ್ನು ಅನುಗ್ರಹಿಸುತ್ತಿದ್ದು, ಈ ಬಾರಿಯ ಚಾತುರ್ಮಾಸ್ಯ ಪ್ರಶಸ್ತಿಯನ್ನು ನಿವೃತ್ತ ಪೊಲೀಸ್ ಅಧಿಕಾರಿ ಕುಮಟಾ ತಾಲೂಕು ಹೆಗಡೆ ಮೂಲದ ಶ್ರೀ ಕೃಷ್ಣ ಗಣೇಶ ಭಟ್ ಅವರಿಗೆ ನೀಡಲಾಗುತ್ತಿದೆ ಎಂದು ಪ್ರಕಟಿಸಿದರು.ಮಾಧ್ಯಮ ವಿಭಾಗದ ಶ್ರೀ ಸಂಯೋಜಕ ಉದಯಶಂಕರ ಭಟ್ ಮಿತ್ತೂರು, ಮಹಾಮಂಡಲ ಸಂಘಟನಾ ಕಾರ್ಯದರ್ಶಿ ಅರವಿಂದ ದರ್ಬೆ ಉಪಸ್ಥಿರಿದ್ದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…