ಸಂಘಟನಾ ಚಾತುರ್ಮಾಸ್ಯದ ಸೀಮೋಲ್ಲಂಘನ ಧರ್ಮಸಭೆ | ಕಾರ್ಯಕರ್ತರ ಸಮಾವೇಶ | ಕಾರ್ಯಕರ್ತನಿಗೆ ಮಾನ್ಯತೆಗಿಂತ ಧನ್ಯತೆ ಮುಖ್ಯ – ರಾಘವೇಶ್ವರ ಶ್ರೀ

September 29, 2023
7:43 PM
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ರಾಘವೇಶ್ವರ ಶ್ರೀಗಳು ಕೈಗೊಂಡ ಚಾತುರ್ಮಾಸ್ಯ ವ್ರತದ ಸೀಮೋಲ್ಲಂಘನೆ ನಡೆಯಿತು.

ಕಾರ್ಯಕರ್ತ ಎಂದಿಗೂ ಮಾನ್ಯತೆಗೆ ಹಾತೊರೆಯಬಾರದು. ಜೀವೋದ್ಧಾರಕ್ಕೆ ಸಾಧ್ಯವಾಗುವಂಥ ಸೇವೆಯ ಧನ್ಯತೆ ಎಲ್ಲ ಜೀವಗಳಿಗೆ ಲಭಿಸುವಂತಾಗಬೇಕು. ಸೇವೆ ಎನ್ನುವುದು ಪೂರ್ವಪುಣ್ಯದ ಫಲ. ನಮ್ಮನ್ನು ನಾವು ಸಮರ್ಪಿಸಿಕೊಂಡರೆ ಸೇವೆಯ ಶಕ್ತಿಯನ್ನು ದೇವರು ನಮಗೆ ಕರುಣಿಸುತ್ತಾನೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

Advertisement

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡ ಚಾತುರ್ಮಾಸ್ಯ ವ್ರತದ ಸೀಮೋಲ್ಲಂಘನೆ ಬಳಿಕ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಎಲ್ಲವೂ ರಾಮಮಯ; ನಾವೆಲ್ಲರೂ ರಾಮನ ಕಾರ್ಯಕರ್ತರು. ಆತ ಕಾರಣಕರ್ತ. ನಮ್ಮ ಜೀವನ ಆತನ ಲೀಲೆ ಎಂದು ತಿಳಿದಾಗ ನಮ್ಮ ಜೀವನ ಧನ್ಯ ಎಂದು ಹೇಳಿದರು. ಕಾರ್ಯಕರ್ತರು ಮನ್ನಣೆಯ ಅಪೇಕ್ಷೆ ಇಲ್ಲದೇ ಸೇವೆ ಮಾಡಬೇಕು. ಸಂಘಟನೆ ಇಂಥ ಸೇವೆಯನ್ನು ಗುರುತಿಸಬೇಕು ಎಂದು ಆಶಿಸಿದರು.

ಭಾರತೀಯ ಸಂಸ್ಕೃತಿಯಲ್ಲಿ ಎಲ್ಲವೂ ವಿಶೇಷ. ನಮಗೆ ಸೀಮೆಯನ್ನು ಹಾಕಿಕೊಳ್ಳುವುದೂ ವಿಶೇಷ. ಅದನ್ನು ದಾಟುವುದು ಮತ್ತೂ ವಿಶೇಷ. ಸೀಮೋಲ್ಲಂಘನಕ್ಕೆ ವಿಶೇಷ ಇರುವುದು ನಾವು ಸೀಮೆಯನ್ನು ಮೀರುವುದರಲ್ಲಿ. ಸತ್ವ ಗುಣ, ರಜೋಗುಣ, ತಮೋಗುಣಗಳ ಆಚೆ ಇರುವಂಥದ್ದು ಶಾಶ್ವತವಾದ ಮೋಕ್ಷವೆಂಬ ಗುರಿ. ಅದನ್ನು ಸಾಧಿಸಬೇಕಾದರೆ ಒಂದು ಚೌಕಟ್ಟಿನಲ್ಲಿ ನಾವು ಬದುಕಬೇಕು. ಎಲ್ಲ ಸೀಮೆಗಳನ್ನು ದಾಟಿ ರಾಮನನ್ನು ಸೇರುವ ಗುರಿಯನ್ನು ಹಾಕಿಕೊಳ್ಳಬೇಕು. ಒಳ್ಳೆಯ ಗುರಿಗಳನ್ನು ಹಾಕಿಕೊಂಡು ಅದನ್ನು ಮೀರುವ ಪ್ರಯತ್ನವನ್ನು ಮಾಡಬೇಕು ಎಂದು ಸೂಚಿಸಿದರು.

ಜೀವವನ್ನು ಕೊಟ್ಟಾದರೂ ರಾಮನಿಗೆ ಪ್ರಿಯವಾದ್ದನ್ನು ಮಾಡಬೇಕು. ಬದುಕಿನಲ್ಲಿ ಯಾವುದು ಮಾಡಬೇಕು, ಯಾವುದು ಮಾಡಬಾರದು ಎನ್ನುವುದನ್ನು ನಮಗೆ ತಿಳಿಸುವುದೇ ವಿಧ್ಯಾಭ್ಯಾಸ. ಇಲ್ಲದಿದ್ದರೆ ವಿದ್ಯೆ ಎಂಬ ಹೆಸರಿನ ಆಭಾಸವಾಗುತ್ತದೆ. ನಿಜವಾಗಿ ವಿದ್ಯೆಯನ್ನು ಪೂರ್ಣಗೊಳಿಸಿದವನು ಆ ಸೀಮೆಯನ್ನು ಮೀರಿ ಸ್ನಾತಕನಾಗಿ ಸಮಾಜಕ್ಕೆ ಸಂಪತ್ತಾಗುತ್ತಾನೆ ಎಂದು ವಿಶ್ಲೇಷಿಸಿದರು.

ಆನಂದದಲ್ಲಿ ಇದ್ದಾಗ ಯುಗ ಕೂಡಾ ಕ್ಷಣವಾಗುತ್ತದೆ. ಬೇಗ ಮುಗಿದಂತೆ ಭಾಸವಾಗುತ್ತದೆ. ದುಃಖವಾದಾಗ ಕ್ಷಣಗಳೂ ಯುಗಗಳಾಗುತ್ತವೆ. ಚಾತುರ್ಮಾಸ್ಯದ ಅವಧಿ ಅತ್ಯಂತ ಆನಂದಮಯವಾಗಿತ್ತು. ಅದೆಷ್ಟೋ ಶುಭಗಳು ಈ ಅವಧಿಯಲ್ಲಿ ನಡೆದು ಹೋಗಿವೆ ಎಂದು ಮೆಲುಕು ಹಾಕಿಕೊಂಡರು. ಸಾವಿರಾರು ಹೃದಯಗಳಿಗೆ ತಂಪೆರೆಯುವ ಕಾರ್ಯ ಆಗಬೇಕು. ನಮ್ಮ ಶಿಷ್ಯರು ಶುಭದಲ್ಲಿ ಮಿಂದೇಳುವಂತೆ ಆಗಬೇಕು, ಬಹಳಷ್ಟು ಶಿಷ್ಯರು ಅಂಶಾಂಶ ಚಾತುರ್ಮಾಸ್ಯ ಆಚರಿಸಿದ್ದಾರೆ. ಆದರೆ ಇದೆಲ್ಲವನ್ನೂ ಸಾಧ್ಯವಾಗಿಸಿದ್ದು, ದೈವಿಕ ಶಕ್ತಿ. ರಾಮದೇವರು ಇದನ್ನು ಇಷ್ಟು ಸುಖಪ್ರದವಾಗಿ ನಡೆಸಿಕೊಟ್ಟಿದ್ದಾನೆ ಎಂದು ಬಣ್ಣಿಸಿದರು.
ಸಮಾಜದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಮಿತವ್ಯಯ ಸಾಧಿಸಿ. ಅನಿವಾರ್ಯ, ಆವಶ್ಯಕವಾದ್ದನ್ನು ಮಾತ್ರ ಖರ್ಚು ಮಾಡಿ ಉಳಿದದ್ದನ್ನು ಧರ್ಮಕಾರ್ಯಗಳಿಗೆ ವಿನಿಯೋಗಿಸಬೇಕು ಎಂದು ಸಲಹೆ ಮಾಡಿದರು. ಇಂಥ ಧರ್ಮಕಾರ್ಯಗಳಿಂದ ವಿವಿವಿಯಂಥ ನಂದಾದೀಪ ಶಾಶ್ವತವಾಗಿ ಬೆಳಗುತ್ತಿರುತ್ತದೆ ಎಂದರು. ಜಾಢ್ಯಗಳನ್ನು ತೊರೆದು ಇಡೀ ಸಮಾಜ ಜಾಗರಣಗೊಳ್ಳುತ್ತಿದ್ದು, ಇದು ಮತ್ತಷ್ಟು ವಿಕಾಸವಾಗಲಿ ಎಂದು ಆಶಿಸಿದರು.

ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಕಾರ್ಯಕರ್ತರ ದಕ್ಷತೆ- ಧನ್ಯತೆ ಎಂಬ ವಿಷಯದ ಬಗ್ಗೆ ಮಾತನಾಡಿ, ಯೋಗ ಮತ್ತು ಯೋಗ್ಯತೆಯಿಂದ ಸೇವೆಯ ಅವಕಾಶ ಸಿಗುತ್ತದೆ. ಕಾರ್ಯಕರ್ತರ ದಕ್ಷತೆ ಇರುವುದು ಶ್ರೀಗುರುಗಳಿಗೆ ಸಂತೋಷವಾಗುವಂತೆ ಕಾರ್ಯ ನಿರ್ವಹಿಸುವುದರಲ್ಲಿ; ಧನ್ಯತೆಯ ಭಾವ ಬರುವುದು ಶ್ರೀಸಂಸ್ಥಾನದವರು ನಮ್ಮ ಸೇವೆಯಿಂದ ಸಂತಸಪಟ್ಟಾಗ ಎಂದರು. ನಿಜವಾದ ಕಾರ್ಯಕರ್ತ ನಿಂದನೆಯನ್ನು ಮರೆಯಬೇಕು ಮತ್ತು ಮೆರೆಯುವುದನ್ನು ಬಿಡಬೇಕು ಎಂದು ಸೂಚ್ಯವಾಗಿ ತಿಳಿಸಿದರು.

ರಾವಣನ ಸಂಹಾರಕ್ಕೆ ರಾಮ ಮಾತ್ರ ಸಾಕಾಗಿತ್ತು. ಆದರೆ 47 ಕೋಟಿ ದೇವತೆಗಳು ವಾನರ ರೂಪವನ್ನು ತಾಳಿ ಈ ಸೇವಾಕಾರ್ಯದಲ್ಲಿ ಧನ್ಯತೆ ಪಡೆದರು. ಅಂತೆಯೇ ರಾಮಕಾರ್ಯದಲ್ಲಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುವ ಭಾಗ್ಯ ನಮ್ಮೆಲ್ಲರದು ಎಂದು ಹೇಳಿದರು.

ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ನೀಲಕಂಠ ಯಾಜಿ ಅವಲೋಕನ ನೆರವೇರಿಸಿದರು. ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧಿಕಾರಿ ಜಿ.ಎಲ್.ಗಣೇಶ್, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಗಣಪತಿ ಭಟ್, ಕಾರ್ಯಾಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಗೌರವಾಧ್ಯಕ್ಷ ದೇವಶ್ರವ ಶರ್ಮಾ, ಪಾರಂಪರಿಕ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮ, ಆಡಳಿತಾಧಿಕಾರಿ ಪ್ರಸನ್ನ ಕುಮಾರ್ ಟಿ.ಜಿ, ಹವ್ಯಕ ಮಹಾಮಂಡಲ ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪಿದಮಲೆ, ನಿಕಟಪೂರ್ವ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಸಲಹೆಗಾರರಾದ ಡಾ.ವೈ.ವಿ.ಕೃಷ್ಣಮೂರ್ತಿ, ಹಾರಕೆರೆ ನಾರಾಯಣ ಭಟ್, ಈಶ್ವರಿ ಬೇರ್ಕಡವು, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಉಪಾಧ್ಯಕ್ಷರಾದ ಜಿ.ಎಸ್.ಹೆಗಡೆ, ವೆಂಕಟೇಶ ಹಾರೆಬೈಲ್, ಕಾರ್ಯದರ್ಶಿಗಳಾದ ರುಕ್ಮಾವತಿ ಸಾಗರ, ಮುಷ್ಟಿ ಭಿಕ್ಷೆ ಪ್ರಧಾನ ಹೇರಂಬ ಶಾಸ್ತ್ರಿ, ಸೇವಾ ಪ್ರಧಾನ ಪ್ರಸನ್ನ ಉಡುಚೆ, ಶಿಷ್ಯಮಾಧ್ಯಮ ಪ್ರಧಾನ ಗಣೇಶ ಜೋಶಿ ಯುವಪ್ರಧಾನ ಕೇಶವ ಪ್ರಕಾಶ್ ಎಂ, ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಶ್ರೀಗಳು ಗಂಗಾವಳಿ ನದಿಯನ್ನು ದಾಟುವ ಮೂಲಕ ಸೀಮೋಲ್ಲಂಘನ ನಡೆಸಿ ಮೂರು ತಿಂಗಳ ಅವಧಿಯ ಚಾತುರ್ಮಾಸ್ಯ ಕೊನೆಗೊಳಿಸಿದರು. ಚಾತುರ್ಮಾಸ್ಯದ ಕೊನೆಯ ದಿನವಾದ ಶುಕ್ರವಾರ ಸುವರ್ಣ ಮಂಟಪದಲ್ಲಿ ಶ್ರೀಕರಾರ್ಚಿತ ದೇವರ ಪೂಜೆ ನೆರವೇರಿತು. ರಾಘವೇಂದ್ರ ಮಧ್ಯಸ್ಥ, ಲೋಹಿತ್ ಇಡವಾಣಿ, ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಹೊಸತನ | ವಜ್ರಗಳ LGD ಟೆಸ್ಟಿಂಗ್ ಮಿಷನ್
April 15, 2025
3:15 PM
by: The Rural Mirror ಸುದ್ದಿಜಾಲ
ಹವಾಮಾನ ಬದಲಾವಣೆಯ ಪರಿಣಾಮ | ಬಾಂಗ್ಲಾದಲ್ಲಿ ಹೆಚ್ಚಾಗಲಿರುವ ಚಂಡಮಾರುತ |
April 15, 2025
2:16 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-04-2025 | ಕೆಲವು ಕಡೆ ತುಂತುರು ಮಳೆ | ಎ.19 ರಿಂದ ಕೆಲವು ಕಡೆ ಉತ್ತಮ ಮಳೆ ಸಾಧ್ಯತೆ |
April 15, 2025
11:54 AM
by: ಸಾಯಿಶೇಖರ್ ಕರಿಕಳ
ಬುಧನ ಚಲನೆ | 3 ರಾಶಿಗೆ ಸಂಪತ್ತಿನ ಮಳೆ, ಯಶಸ್ಸು
April 15, 2025
7:43 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group