ತಮ್ಮ ಹಿತವನ್ನೇ ಬಲಿಕೊಟ್ಟು ಪರೋಪಕಾರ ಮಾಡುವುದು ಸತ್ಪುರುಷರ ಲಕ್ಷಣ. ಪರೋಪಕಾರ, ಕರುಣೆಯನ್ನು ಬದುಕಿನಲ್ಲಿ ತುಂಬಿಕೊಂಡು ಬದುಕಿನ ಸಾರ್ಥಕತೆ ಗಳಿಸಿಕೊಳ್ಳೋಣ ಎಂದು ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.
ಮಾನವರಿಗೆ ಸಾಮಾನ್ಯವಾಗಿ ತನ್ನ ಬಗ್ಗೆ ಹಾಗೂ ತನ್ನವರ ಬಗ್ಗೆ ಕರುಣೆ ಇರುವುದು ಸಹಜ. ಅಂತೆಯೇ ಮಾನವೋತ್ತಮರೂ ಇಂದಿನ ಸಮಾಜದಲ್ಲಿ ವಿರಳವಾಗಿ ಕಾಣಸಿಗುತ್ತಾರೆ. ತನ್ನದವರಲ್ಲದವರಿಗೂ ಸಹಾಯ ಮಾಡುವುದು ದೈವೀಗುಣ. ಪ್ರಾಣಿ ಪಕ್ಷಿಗಳು, ಆರ್ತರ ಮೇಲೆ ಇವರಿಗೆ ದಯೆ ಇರುತ್ತದೆ. ಇದು ಮಾನವೋತ್ತಮರ ಗುಣ ಎಂದು ವಿವರಿಸಿದರು. ಕೊನೆಯ ವರ್ಗ ಶತ್ರುವತ್ಸಲರು. ಇವರು ತಮ್ಮ ಶತ್ರುಗಳನ್ನೂ ಪ್ರೀತಿ ಮಾಡುವವರು; ಅವರ ಬಗ್ಗೆ ಕಾರುಣ್ಯ ಹೊಂದಿರುವವರು. ಇಂಥವರು ಕೋಟಿಗೊಬ್ಬರು. ರಾಮನಲ್ಲಿ ಈ ಗುಣವನ್ನು ಹೆಜ್ಜೆ ಹೆಜ್ಜೆಗೂ ಕಾಣುತ್ತೇವೆ. ಅಪಕಾರ ಮಾಡಿದವರ ಬಗ್ಗೆಯೂ ಕನಿಕರ ತೋರಿದ ಹಲವು ನಿದರ್ಶನಗಳು ರಾಮಾಯಣದಲ್ಲಿ ಬರುತ್ತದೆ. ಉದಾಹರಣೆಗೆ ತನ್ನನ್ನು ಕಾಡಿಗೆ ಅಟ್ಟಲು ಕಾರಣವಾದ ಕೈಕೇಯಿಯ ಬಗ್ಗೆಯೂ ರಾಮ ಅಪಾರ ಕರುಣೆ ಹೊಂದಿದ್ದ. ಆಕೆಯ ಬಗ್ಗೆಯೂ ರಾಮ ಹಗೆ ಸಾಧಿಸಲಿಲ್ಲ ಎಂದು ಬಣ್ಣಿಸಿದರು.
ಪಾದುಕೆಯನ್ನು ಭರತ ಒಯ್ಯುವ ವೇಳೆ ಭರತನಿಗೆ ಆದೇಶ ನೀಡಿದ ರಾಮ, ಕೈಕೇಯಿಯನ್ನು ನೋಯಿಸಬಾರದು; ನನ್ನ ಪಾದದ ಮೇಲೆ, ಸೀತೆಯ ಮೇಲೆ ಆಣೆ ಎನ್ನುತ್ತಾನೆ. ಇದು ರಾಮ ಕಾರುಣ್ಯಮೂರ್ತಿ ಎನ್ನುವುದಕ್ಕೆ ಸಾಕ್ಷಿ. ಅಣ್ಣನ ಕಾರಣದಿಂದಾಗಿ ತಾಯಿಯನ್ನು ಭರತ ಹತ್ಯೆ ಮಾಡುವುದಿಲ್ಲ. ಇಲ್ಲದಿದ್ದರೆ ಕೊಲ್ಲುತ್ತಿದ್ದೆ ಎಂದು ಭರತ ಹೇಳಿದ ಉಲ್ಲೇಖವಿದೆ ಎಂದರು. ಇಂದ್ರನ ಪುತ್ರನಾದ ಕಾಗೆಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದು ಇನ್ನೊಂದು ಸಂದರ್ಭ. ಬ್ರಹ್ಮಾಸ್ತ್ರದಿಂದ ರಕ್ಷಣೆಗಾಗಿ ಮೊರೆ ಹೋದಾಗ ಕಾಗೆಯ ಜೀವದ ಬದಲು ಒಂದು ಕಣ್ಣನ್ನು ಮಾತ್ರ ಕೀಳುತ್ತದೆ. ಇದು ಇನ್ನೊಂದು ನಿದರ್ಶನವಾದರೆ, ಯುದ್ಧದಲ್ಲಿ ಗಾಯಾಳುವಾಗಿದ್ದ ರಾವಣನಿಗೆ ವಿಶ್ರಾಂತಿ ಪಡೆದು ಮುಂದಿನ ದಿನ ಬಂದು ಯುದ್ಧ ಎದುರಿಸುವಂತೆ ಸೂಚಿಸುತ್ತಾನೆ. ಇದು ರಾಮನ ಶ್ರೇಷ್ಠಗುಣ ಎಂದು ವಿವರಿಸಿದರು. ಧಾರ್ಮಿಕ ಕಾರ್ಯಕ್ರಮ ಅಂಗವಾಗಿ ಶ್ರೀಗಳಿಗೆ ತುಲಾಭಾರ ಸೇವೆ ನೆರವೇರಿತು. ರುದ್ರಹವನ, ರಾಮತಾರಕ ಹವನ, ಚಂಡೀಪಾರಾಯಣ, ಗಣಪತಿ ಹೋಮ, ಪವಮಾನ ಹೋಮಗಳು ನಡೆದವು. ಸುಳ್ಯದ ಕಾಂಚಿಕಾಮಕೋಟಿ ವೇದಪಾಠ ಶಾಲೆ ಮತ್ತು ಕಾರವಾರದ ಪದ್ಮಪುಷ್ಪ ಗುರುಕುಲ ಮಕ್ಕಳಿಂದ ಸಪ್ತಶತಿ ಪಾರಾಯಣ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಗರದ ಗೋಮಾತಾ ತಾಳಮದ್ದಳೆ ಬಳಗದಿಂದ ಸೀತಾಕಲ್ಯಾಣ ತಾಳಮದ್ದಳೆ ನಡೆಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

