ಒಳಿತು ಒಳಿತನ್ನು ಆಕರ್ಷಿಸುತ್ತದೆ. ಕೆಡುಕು, ಕೆಡುಕನ್ನು ಆಕರ್ಷಿಸುತ್ತದೆ. ಒಂದು ಒಳ್ಳೆಯ ಕೆಲಸ ಮಾಡಿದವನು ಹೆಚ್ಚು ಹೆಚ್ಚು ಒಳ್ಳೆಯ ಕೆಲಸದಲ್ಲಿ ನಿರತನಾಗುತ್ತಾನೆ. ಅಂತೆಯೇ ಒಂದು ಕೆಟ್ಟ ಕೆಲಸ ಮಾಡಿದವನು ಅದೇ ಪರಂಪರೆ ಮುಂದುವರಿಸುತ್ತಾನೆ ಎಂದು ಶ್ರೀರಾಘವೇಶ್ವರಭಾರತೀಸ್ವಾಮೀಜಿ ನುಡಿದರು.
ಮಾಣಿ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನವರಾತ್ರ ನಮಸ್ಯಾ ಅಂಗವಾಗಿ ‘ಶ್ರೀ ಲಲಿತೋಪಾಖ್ಯಾನ’ ಪ್ರವಚನ ಮಾಲಿಕೆಯ ಐದನೇ ದಿನದ ಪ್ರವಚನವನ್ನು ಶ್ರೀಗಳು ಅನುಗ್ರಹಿಸಿದರು.
ಹರಿ-ಹರ ಶಕ್ತಿಗಳ ರೂಪದಿಂದ ಮನ್ಮಥ ಜನಿಸಿದರೆ, ಶಿವನ ಕ್ರೋಧಾಗ್ನಿಯಿಂದ ಭಸ್ಮವಾದ ಮನ್ಮಥನ ಚಿತಾಭಸ್ಮದಿಂದ ಬಂಡಾಸುರನ ಜನನವಾಗುತ್ತದೆ. ಬಂಡಾಸುರ ಜನಿಸಿದ್ದು ಶಿವನ ದೃಷ್ಟಿಯಿಂದ. ಆತ ಮನ್ಮಥ ರೂಪ ಹೊಂದಿದ್ದರೂ, ಗುಣಸ್ವಭಾವ ಮಾತ್ರ ದೈತ್ಯರದ್ದಾಯಿತು ಎಂದು ವಿಶ್ಲೇಷಿಸಿದರು.
ಪ್ರಕೃತಿ, ಮೋಹಿನಿಯ ಬಳಿಕ ಲಲಿತಾ ಪರಮೇಶ್ವರಿ, ರಾಜರಾಜೇಶ್ವರಿ, ತ್ರಿಪುರಸುಂದರಿಯ ರೂಪದಲ್ಲಿ ಆದಿಶಕ್ತಿ ಪ್ರಕಟವಾಗುತ್ತಾಳೆ. ಯಾವುದೇ ದೊಡ್ಡ ಕೆಡುಕು ಸಂಭವಿಸಿದಾಗ ಅದು ಮುಂದೆ ದೊಡ್ಡ ಒಳಿತಾಗುತ್ತದೆ ಎನ್ನುವುದರ ಸೂಚನೆ. ಬಂಡಾಸುರನ ಉಪಟಳವು ಮುಂದೆ ಲಲಿತಾ ಪರಮೇಶ್ವರಿಯ ಆವೀರ್ಭಾವಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.
ಈಶ್ವರನ ಮೂರನೇ ಕಣ್ಣಿನ ಕ್ರೋಧಾಗ್ನಿಗೆ ಕಾಮದಹನವಾಗುತ್ತದೆ. ಚಿತ್ರಕರ್ಮನೆಂಬ ಗಣಮುಖ್ಯನು ಕಾಮನ ಬೂದಿಯಲ್ಲಿ ಅಸಾಮಾನ್ಯ ಪುರುಷಾಕೃತಿಯ ಬೊಂಬೆಯನ್ನು ನಿರ್ಮಿಸುತ್ತಾನೆ. ಇದರ ಮೇಲೆ ಶಿವನ ದೃಷ್ಟಿ ಬೀಳುತ್ತದೆ. ಆಗ ಆ ಮನ್ಮಥನ ರೂಪದಲ್ಲಿರುವ ಆಕೃತಿಗೆ ಜೀವ ಬರುತ್ತದೆ. ಆದರೆ ಗುಣ ಮಾತ್ರ ಭಿನ್ನ. ಕ್ರೋಧಭಸ್ಮದಿಂದ ಹುಟ್ಟಿದ ಆತನಿಗೆ ಶ್ರೇಯಸ್ಸಿನ ಮಾರ್ಗವನ್ನು ಬೋಧಿಸುತ್ತಾನೆ. ರುದ್ರಬೋಧನೆ ಮಾಡುತ್ತಾನೆ. ಶಿವಸೇವೆಗೆ ನಿಯೋಜಿಸುತ್ತಾನೆ ಸಂತುಷ್ಟನಾದ ಶಿವ, ಬಾಲಕನಿಗೆ ವರ ನೀಡುತ್ತಾನೆ. ಎದುರು ಹೋರಾಡುವವನ ಅರ್ಧ ಬಲ ತನಗೆ ಬರಬೇಕು, ಅಸ್ತ್ರಶಸ್ತ್ರಗಳಿಂದ ಯಾವ ಕೆಡುಕೂ ಆಗಬಾರದು ಎಂಬ ವರ ಪಡೆಯುತ್ತಾನೆ. 60 ಸಾವಿರ ವರ್ಷ ರಾಜ್ಯವಾಳುವಂತೆ ಅನುಗ್ರಹಿಸುತ್ತಾನೆ ಹೇಳಿದರು.
ಬ್ರಹ್ಮನಿಂದ ಭಂಡಾಸುರ ಎಂದು ಕರೆಸಿಕೊಂಡ ಈತನ ನಿರ್ಲಜ್ಜನಾಗಿ ಬೆಳೆಯುತ್ತಾನೆ. ಕಾಮ ಕ್ರೋಧಗಳ ಸಂಗಮವಾಗಿ, ದಾನವಾಗಿ, ದೈತ್ಯನಾಗಿ ಬೆಳೆಯುತ್ತಾನೆ. ಈತ ಬೆಳೆಯುತ್ತಿದ್ದಂತೆ ಎಲ್ಲ ರಾಕ್ಷಸರು ಈತನತ್ತ ಶುಕ್ರಾಚಾರ್ಯರ ನೇತೃತ್ವದಲ್ಲಿ ಆಕರ್ಷಿತರಾಗುತ್ತಾರೆ. ಶೋಣಿತಾಪುರ ಎಂಬ ರಕ್ತದ ಊರಿನಲ್ಲಿ ವಾಸಿಸುತ್ತಾನೆ. ಅಕ್ಷಯ ಸಿಂಹಾಸನ, ಅಮೂಲ್ಯ ಕಿರೀಟ, ವಿಶೇಷ ಛತ್ರ, ವಿಜಯ ಧನಸ್ಸಿನಂಥ ವಿಶೇಷ ಸಾಧನಗಳನ್ನು ಶುಕ್ರಾಚಾರ್ಯರು ಆತನಿಗೆ ಕರುಣಿಸುತ್ತಾರೆ. ಇಂದ್ರಾದಿ ದೇವತೆಗಳು ಆತನ ಆಳುಗಳಾಗುತ್ತಾರೆ ಎಂದು ವಿವರಿಸಿದರು.
ಆದರೆ ಬಂಡಾಸುರನ ಗುರುನಿಷ್ಠೆ ಅಪಾರ. ಯಜ್ಞ-ಯಾಗಾದಿಗಳು ಅಸುರರ ಮನೆಯಲ್ಲೂ ನಡೆಯುತ್ತಿದ್ದವು. ಇದರಿಂದಾಗಿ ಈತನನ್ನು ಯಾರೂ ಎದುರಿಸಲಾಗದಷ್ಟು ಬಲಿಷ್ಠನಾಗಿ 60 ಸಾವಿರ ವರ್ಷ ಕಾಲ ಆಳ್ವಿಕೆ ನಡೆಸಿದ. ಇಂದ್ರಾದಿ ದೇವತೆಗಳು ಕ್ಷೀಣವಾಗುತ್ತಾ ಬಂದರು.
ಕೆಡುಕನ್ನು ಕೆಡಿಸುವ ಉದ್ದೇಶದಿಂದ ಅವರ ಬಲವನ್ನು ಕುಂದಿಸಲು ಚಿತಗ್ನಿಯಲ್ಲಿ ರಾಜರಾಜೇಶ್ವರಿಯ ಆವೀರ್ಭಾವವಾಗುತ್ತದೆ ಎಂದು ಕಥಾಭಾಗವನ್ನು ಮಂಗಲಗೊಳಿಸಿದರು.
ಉಂಡೆಮನೆ ವಿಶ್ವೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಣಿಮಠ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್, ಗಣೇಶ್ ಭಟ್ ಮೈಕೆ, ಹವ್ಯಕ ಮಹಾಮಂಡಲ ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ಪ್ರಾಂತ ಕಾರ್ಯದರ್ಶಿ ವೇಣುಗೋಪಾಲ್ ಕೆದ್ಲ, ವಿದ್ಯಾರ್ಥಿ ಪ್ರಧಾನರಾದ ಈಶ್ವರ ಪ್ರಸಾದ್ ಕನ್ಯಾನ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮಾತೃವಿಭಾಗದ ಪ್ರಮುಖರಾದ ವೀಣಾ ಗೋಪಾಲಕೃಷ್ಣ ಪುಳು, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ್ ಕುದುಪುಲ ಮತ್ತಿತರರು ಉಪಸ್ಥಿತರಿದ್ದರು.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…