ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಿರೇನಗನೂರು ಗ್ರಾಮದ ರೈತ ಪ್ರದೀಪ್ ಗೌಡ ಟರ್ಕಿ ದೇಶದ ತಳಿಯ ಸಜ್ಜೆ ಬಿತ್ತನೆ ಮಾಡಿ, ಉತ್ತಮ ಇಳುವರಿ ಬಂದಿದ್ದು ಲಾಭದ ನಿರೀಕ್ಷೆಯಲ್ಲಿದ್ದಾರೆ. ಸ್ಥಳೀಯವಾಗಿ ದೊರೆಯುವ ಸಜ್ಜೆಯನ್ನು ಬಿತ್ತನೆ ಮಾಡದೇ ಹೊಸದಾಗಿ ಟರ್ಕಿ ದೇಶದ ಸಜ್ಜೆಯನ್ನು ಬಿತ್ತನೆ ಮಾಡಿದ್ದಾರೆ.
ಟರ್ಕಿ ದೇಶದ ಸಜ್ಜೆಯು ಅಧಿಕ ಇಳುವರಿಯೊಂದಿಗೆ 12 ಅಡಿ ಎತ್ತರ ಹಾಗೂ 3.5 ಅಡಿ ತೆನೆ ಬೆಳೆಯುತ್ತದೆ. ತೆನೆಯಲ್ಲಿ ಸಜ್ಜೆ ಕಾಳು ಜಾಸ್ತಿ ಇರಲಿದ್ದು, ಪ್ರತಿ ಎಕರೆಗೆ 10 ರಿಂದ 15 ಕ್ವಿಂಟಾಲ್ ನಷ್ಟು ಫಸಲು ನೀಡಲಿದೆ. ಯಾವುದೇ ರಾಸಾಯನಿಕ ಗೊಬ್ಬರ, ಔಷಧಿಗಳನ್ನು ಸಿಂಪಡಿಸದೇ ಕೊಟ್ಟಿಗೆ ಗೊಬ್ಬರದಿಂದ ಸಾಮಾನ್ಯವಾಗಿ ಬೆಳೆಯುವ ಸಜ್ಜೆಯ ರೀತಿ ಈ ಬೆಳೆಯನ್ನು ಬೆಳೆಯಬಹುದಾಗಿದೆ.

ಸುಮಾರು ನಾಲ್ಕು ತಿಂಗಳ ನಂತರ ಕಟಾವಿಗೆ ಬರುವ ಬೆಳೆ ಇದಾಗಿದ್ದು, ಸ್ಥಳೀಯವಾಗಿ ಬೆಳೆಯುವ ಸಜ್ಜೆಗಿಂತ ಟರ್ಕಿ ಸಜ್ಜೆ ಹೆಚ್ಚುವ ಇಳುವರಿ ನೀಡಲಿದೆ. ಜೊತೆಗೆ ಯಾವುದೇ ಕೀಟಬಾಧೆ ಇರುವುದಿಲ್ಲ. ರೈತರಿಗೆ ಕೃಷಿ ಅಧಿಕಾರಿಗಳು ಸರಿಯಾದ ಮಾಹಿತಿ ಒದಗಿಸಿ, ಈ ತಳಿಯನ್ನು ಹೆಚ್ಚು ಬೆಳೆಯುವಂತೆ ಪ್ರೋತ್ಸಾಹಿಸುವ ಅಗತ್ಯವಿದೆ ಎನ್ನುತ್ತಾರೆ ರೈತರು.

ಈ ಬಗ್ಗೆ ಮಾತನಾಡಿದ ಪ್ರದೀಪ್ ಗೌಡ, ಟರ್ಕಿ ಸಜ್ಜೆಯನ್ನು ಒಂದು ಎಕರೆಯಲ್ಲಿ ಬಿತ್ತನೆ ಮಾಡಲಾಗಿದ್ದು, ಉತ್ತಮ ಇಳುವರಿ ಬರುವ ನಿರೀಕ್ಷೆಯಿದೆ. ಸಜ್ಜೆ ತೆನೆ ಕನಿಷ್ಠ ಮೂರೂವರೆ ಅಡಿ ಇರಲಿದ್ದು, ಇಳುವರಿಯೂ ಹೆಚ್ಚಾಗಲಿದೆ. ಸಾಮಾನ್ಯ ಸಜ್ಜೆ ಪ್ರತಿ ಎಕರೆಗೆ 5ರಿಂದ 8 ಕ್ವಿಂಟಾಲ್ ಇಳುವರಿ ನೀಡಿದರೆ, ಟರ್ಕಿ ಸಜ್ಜೆ 10ರಿಂದ 15 ಕ್ವಿಂಟಾಲ್ ನೀಡಲಿದೆ.ಇದರಿಂದ ಹೆಚ್ಚು ಅನುಕೂಲವಾಗಲಿದೆ ಎನ್ನುತ್ತಾರೆ.
ಟರ್ಕಿ ಸಜ್ಜೆ ಒಂದು ಕೆ ಜಿಗೆ 2 ಸಾವಿರ ರೂಪಾಯಿ ಬೆಲೆಯಿದ್ದು, ಸಾಮಾನ್ಯ ಸಜ್ಜೆಗಿಂತ ಉತ್ತಮ ಇಳುವರಿ ಬರಲಿದ್ದು, ರೈತರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ರೈತ ಅಂಬರೀಶ್. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.


