ನಮ್ಮ ರಾಜ್ಯದಲ್ಲಿ ದಕ್ಷಿಣ ಕರ್ನಾಟಕವನ್ನು ಹೋಲಿಸಿದರೆ ಉತ್ತರ ಕರ್ನಾಟಕ ಜಿಲ್ಲೆಗಳು ಬಹಳಷ್ಟು ವಿಷಯದಲ್ಲಿ ಬಹಳ ಹಿಂದೆ ಇವೆ. ಅಭಿವೃದ್ಧಿಯಾಗಲಿ, ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಸೇರಿದಂತೆ ಇನ್ನು ಹಲವು. ಸುಡು ಬಿಸಿಲು, ಬರಗಾಲದ ಜಿಲ್ಲೆಗಳು, ಜನ ಜೀವನ ಕಷ್ಟ ಎಂಬ ಭಾವನೆಯಿದೆ. ಆದರೆ ಅಲ್ಲಿ ಮಳೆ ಬೆಳೆ ಆದರೆ ನಮ್ಮ ರಾಜ್ಯ ಸುಭಿಕ್ಷವಾಗಿರುತ್ತದೆ. ಆದರೆ ಬರಗಾಲದ ನಾಡು ರಾಯಚೂರು ಜಿಲ್ಲೆ ಇಡೀ ದೇಶದಲ್ಲಿ ಈಗ ನಂಬರ್ ಒನ್ ಆಗಿದೆ.
ಅಖಿಲ ಭಾರತ ಮಹತ್ವಾಕಾಂಕ್ಷೆಯ ಜಿಲ್ಲಾ ಡೆಲ್ಟಾ ಶ್ರೇಯಾಂಕ ಪ್ರಕಟವಾಗಿದ್ದು, ಕೇಂದ್ರದ ನೀತಿ ಆಯೋಗದ ಸಮೀಕ್ಷೆಯಲ್ಲಿ ಜಿಲ್ಲೆಗೆ ಫಸ್ಟ್ ರ‍್ಯಾಂಕ್ ನೀಡಲಾಗಿದೆ. ಸಮಗ್ರ ಸಾಧನೆಯಲ್ಲಿ ಜಿಲ್ಲೆಗೆ 1ನೇ ರ‍್ಯಾಂಕ್ ಬಂದಿದೆ. 10 ಕೋಟಿ ರೂ. ವಿಶೇಷ ಬಹುಮಾನಕ್ಕೂ ರಾಯಚೂರು ಜಿಲ್ಲೆ ಅರ್ಹತೆ ಪಡೆದಿದೆ. ಕೃಷಿ, ಶಿಕ್ಷಣ, ಮೂಲ ಸೌಕರ್ಯ, ಆರೋಗ್ಯ, ಆರ್ಥಿಕ ಸೇರ್ಪಡೆ ಹಾಗೂ ಕೌಶಲ್ಯ ಅಭಿವೃದ್ಧಿ ಸೇರಿ ಜಿಲ್ಲೆಯ ಸ್ಥಿತಿಗತಿಗಳ ವಾಸ್ತವ ವರದಿಗಳ ಪರಿಶೀಲನೆ ನಡೆಸಿ ನೀತಿ ಆಯೋಗ ರ‍್ಯಾಂಕ್ ನೀಡಿದೆ. ದೇಶದ ಒಟ್ಟು 115 ಮಹತ್ವಾಕಾಂಕ್ಷೆ ಜಿಲ್ಲೆಗಳಲ್ಲಿ ರಾಯಚೂರಿಗೆ ಮೊದಲ ಸ್ಥಾನ ಬಂದಿದೆ.
ಶಿಕ್ಷಣ ಹಾಗೂ ಕೃಷಿಯಲ್ಲಿ ಈ ಮೊದಲು ಮೊದಲ ರ‍್ಯಾಂಕ್ ಪಡೆದಿದ್ದ ಜಿಲ್ಲೆ ಜೂನ್ ತಿಂಗಳ ಸಮೀಕ್ಷೆಯಲ್ಲಿ ಸಮಗ್ರ ಸಾಧನೆಯಲ್ಲಿ 1ನೇ ರ್ಯಾಂಕ್ ಪಡೆದಿದೆ. ಕೇಂದ್ರ ಸರ್ಕಾರ ಹಾಗೂ ನೀತಿ ಆಯೋಗದಿಂದ ಹೆಚ್ಚುವರಿ ಅನುದಾನ ಪಡೆಯಲಿದೆ. ಜಿಲ್ಲೆ ಮೊದಲ ರ್ಯಾಂಕ್ ಪಡೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಸಿಬ್ಬಂದಿ ಕಾರ್ಯವೈಖರಿ ಶ್ಲಾಘಿಸಿದ್ದಾರೆ.