ಮಾನವ-ಆನೆ ಸಂಘರ್ಷ ತಡೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು, ಸ್ವಯಂ ಪ್ರೇರಿತವಾಗಿ ಮುಂದೆ ಬರುವ ಅರಣ್ಯವಾಸಿಗಳ ಸ್ಥಳಾಂತರಕ್ಕೆ ಕಾಂಪಾ ನಿಧಿಯಿಂದ 800 ಕೋಟಿ ರೂಪಾಯಿ ಮಂಜೂರು ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.……..ಮುಂದೆ ಓದಿ…..
ದೆಹಲಿಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ, ಪರಿಹಾರಾತ್ಮಕ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (ಕಾಂಪಾ)ದಡಿ ರಾಜ್ಯಕ್ಕೆ ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದಾರೆ. ರಾಜ್ಯದಲ್ಲಿ 6395 ಆನೆಗಳಿದ್ದು, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ನೂರಾರು ಆನೆಗಳಿವೆ. ಇವುಗಳ ದಾಳಿಯಿಂದ ಸಾವು ನೋವು ಸಂಭವಿಸುತ್ತಿದೆ. ಹೀಗಾಗಿ ಕಾಡಿನಿಂದ ನಾಡಿಗೆ ಆನೆಗಳು ಬಾರದಂತೆ ನಿಯಂತ್ರಿಸಲು ಈಗಾಗಲೇ 393 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಿದ್ದು, ಪ್ರಸ್ತುತ 200 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪ್ರಗತಿಯಲ್ಲಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ 2005ರಿಂದ ಇಲ್ಲಿವರೆಗೆ 356 ಕುಟುಂಬಗಳು ಸ್ಥಳಾಂತರಗೊಂಡಿವೆ. ರಾಜ್ಯ ಸರ್ಕಾರ ಇವರಿಗೆ ವಿಶೇಷ ಪ್ಯಾಕೇಜ್ ನೀಡಿ 142 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಇದರಿಂದ 688.57 ಎಕರೆ ಭೂಮಿ ಅರಣ್ಯ ಇಲಾಖೆಗೆ ದೊರೆತಿದೆ ಎಂದು ತಿಳಿಸಿದರು.