ಒಮ್ಮೆಲೇ ಸುರಿದ ಭಾರೀ ಮಳೆ | ಮಡಪ್ಪಾಡಿಯಲ್ಲಿ ಒಂದು ಗಂಟೆಯಲ್ಲಿ 140 ಮಿಮೀ ಮಳೆ…! |

October 4, 2021
7:35 PM

ಸೋಮವಾರ ಮಧ್ಯಾಹ್ನದ ಬಳಿಕ ಒಮ್ಮೆಲೇ ಗುಡುಗು ಸಹಿತ ಭಾರೀ ಮಳೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಸುರಿಯಿತು. ಅದರಲ್ಲೂ ಸುಳ್ಯ ತಾಲೂಕಿನ ಸಂಪಾಜೆ, ಅರಂತೋಡು ಸೇರಿದಂತೆ ಮಡಪ್ಪಾಡಿ ಮೊದಲಾದ ಕಡೆ ಭಾರೀ ಮಳೆಯಾಗಿದೆ. ಮಡಪ್ಪಾಡಿಯಲ್ಲಿ  ಒಂದು ಗಂಟೆಯಲ್ಲಿ  140 ಮಿಮೀ ಮಳೆಯಾಗಿದೆ.

Advertisement

ಸುಳ್ಯದ ಹಲವು ಕಡೆಗಳಲ್ಲಿ  ಭಾರೀ ಮಳೆಯಾಗಿದೆ. ಮಡಪ್ಪಾಡಿಯಲ್ಲಿ ಇಂದು ಮಧ್ಯಾಹ್ನ ಸುರಿದ ಕುಂಭದ್ರೋಣ ಮಳೆ 140 ಮಿಮೀ ಒಂದು ಗಂಟೆಯಲ್ಲಿ ದಾಖಲಾಗಿದೆ ಎಂದು ಮಡಪ್ಪಾಡಿಯ ಎಂ ಡಿ ವಿಜಯಕುಮಾರ್‌ ಮಾಹಿತಿ ಹಂಚಿಕೊಂಡಿದ್ದಾರೆ. ಮಳೆ ಮಾಹಿತಿ  ವ್ಯಾಟ್ಸಪ್ ಗುಂಪಿನಲ್ಲಿ ಈ ಮಾಹಿತಿ ಹಂಚಿಕೊಂಡಿರುವ ವಿಜಯ ಕುಮಾರ್‌ ಅವರು  ಸುಮಾರು ಎರಡು ದಶಕಗಳಿಂದ ಈ ರೀತಿಯಾಗಿ ಮಳೆ ಬಂದಿರಲಿಲ್ಲ ಎಂದು ಹೇಳಿದ್ದಾರೆ.‌ ಉಳಿದಂತೆ ಹಲವು ಕಡೆಗಳಲ್ಲಿ  ಉತ್ತಮ ಮಳೆಯಾದ ಬಗ್ಗೆ ವರದಿಯಾಗಿದೆ.

Advertisement

ಇಂದಿನ ಮಳೆಯ ಬಗ್ಗೆ ಕೃಷಿಕ ಸುರೇಶ್ಚಂದ್ರ ಕಲ್ಮಡ್ಕ ಹೀಗೆ ಬರೆದಿದ್ದಾರೆ…

ಅಬ್ಬಬ್ಬಾ..
ಈ ಪ್ರಕೃತಿಯೇ.. ಏನು ಶಕ್ತಿ, ಏನು ಯುಕ್ತಿ….ಉಫ್..

ಮೊನ್ನೆ ತಾನೇ ಸಾರ್ವೋದ್ಧಾರ ಸುರಿದ ಮಳೆ ನಿನ್ನೆ ಸಂಪೂರ್ಣ ವಿಶ್ರಾಂತಿ.ನಿನ್ನೆಯಿಡೀ ವರುಣ ದೇವ ತಣ್ಣಗೆ ಗುಡಿಹೊದ್ದು ಮಲಗಿದ್ದ. ರಾತ್ರಿ ದೂರದೂರದಲ್ಲಿ ವರುಣನ ಇರುವಿಕೆಯ ಬೆಳಕಿನ ಕೋಲ್ಮಿಂಚು ಕಾಣಬರುತ್ತಿದ್ದರೂ ನಮ್ಮೂರಲ್ಲಿ ರಾತ್ರಿಯಿಂದ ವಾತಾವರಣ ಬದಲಾದಂತೆ ಶುಷ್ಕ …ಹೊದ್ದು ಮಲಗುವಂತೆ ಸಣ್ಣಗೆ ಚಳಿ ಚಳಿ….ಮುಂಜಾನೆಯ ಸ್ವಾಗತವೇ ಸೂರ್ಯದೇವನ ಬಂಗಾರಮಯ ವರ್ಣದ ಕಿರಣದ ಓಕುಳಿಯಿಂದ…  ಆಹಾ…ಪ್ರಶಾಂತ ವಾತಾವರಣ…. ಮರಗಿಡಗಳೆಲ್ಲಾ….ಚಿನ್ನದ ಲೇಪನವೋ ಎಂಬಂತೆ ಅಲಂಕರಿಸಲ್ಪಟ್ಟಿದ್ದವು.

ವಾವ್… ಹಟ್ಟಿಯಿಂದ ದನ ಕರುಗಳ ಅಂಬಾ ಅಂಬಾ ಎಂಬ ಕರೆಯೋಲೆ, ಹಕ್ಕಿಗಳ ಚಿಲಿಪಿಲಿ, ಗೂಡಿನಿಂದ ಆಹಾರ ಅರಸಿ ಮರಬಳ್ಳಿಗಳೆಡೆಗೆ ನಾಗಾಲೋಟ, ಜೇನು ನೊಣಗಳ ಮಕರಂದ ಅರಸುವಿಕೆಯ ಝೇಂಕಾರ ನಾದ, ಮನೆಯ ಶ್ವಾನಗಳ ಅವಸರದ ಓಟ….ಪುನಃ ಓಡೋಡಿ ಬಂದು ಅಂಗಳದ ಹುಲ್ಲ ಮೇಲೆ ಹೊರಳಿ ಮನೆಯೊಡತಿಯತ್ತ ಹೊಟ್ಟೆ ಹಸಿವಿನ ನೋಟ…..
ರವಿಯೇರಿದಂತೆಯೇ ಲವಲವಿಕೆಯ ಪ್ರಕೃತಿಯ ಸೊಬಗು…..

ಅಂತೆಯೇ…. ಬಾನೆತ್ತರಕ್ಕೇರುತ್ತಾ ಕಠಿಣನಾದ ರವಿ ,ತೀಕ್ಷ್ಣನಾಗುತ್ತಾ ಸಾಗಿದ….ಇವನ ತೀಕ್ಣತೆಗೆ ಮದ್ದು ಅರೆಯುವ ಚಾಕಚಕ್ಯತೆ ಪ್ರಕೃತಿಗೆ ಕೋಟಿ ಕೋಟಿ ವರ್ಷಗಳ ಸಲೀಸು….ರವಿ ತನ್ನ ಕಿರಣಗಳಾಘಾತದಿಂದ ಆಕಾಶದೆತ್ತರಕೆ ಸೆಳೆದ ನೀರಾವಿಯನ್ನು ಪ್ರಕೃತಿ ಮಾತೆ ತನ್ನ ಅಡುಗೆ ಮನೆಯಲ್ಲಿ ಘನೀಕರಿಸಿ ಮುಗಿಲಾಗಿಸಿ ವಾಯುದೇವನ ಒಳಹೊರಗಣ ಒತ್ತಡಕ್ಕೆ ಜರ್ಝರಿತನಾಗಿಸಿ ಪುನಃ ಭೂರಮೆಯ ಒಡಲಾಳಕ್ಕೆ ಸಿಂಚನಗೊಳಿಸಿದಾಗ, ತೊರೆ ನದಿಗಳಾಗಿ ಜೀವಜಲದೂಟೆಯಾಗಿ ಒಂದು ಆವೃತ್ತಿ ಸಂಪೂರ್ಣವಾದಾಗ ರವಿ ತನ್ನ ತೀಕ್ಷ್ಣತೆ ಕಳಕೊಂಡಿದ್ದ…….

Advertisement

ಅಂತೆಯೇ.. ಈ ಜೀವನ ಚಕ್ರವೂ ಅಷ್ಟೇ ಅಲ್ವೇ… ಹುಟ್ಟಿನಿಂದಾರಭ್ಯ ಮೊಳೆತು ಚಿಗಿತು ಪುಟಿದೆದ್ದು…ಕಂಪನ್ನರಸುತ್ತಾ ಜೊತೆಯಾಗಿ ಹಾರಾಡಿ,ತೇಲಾಡಿ, ಒತ್ತಡ …ಮಥನಗಳಾಗಿ..ತೀಕ್ಷ್ಣನಾಗಿ….ಹದವಾಗಿ..ತಂಪಾಗಿ…..ಕೊನೆಗೊಂದು ದಿನ ಭೂತಾಯ ಮಡಿಲೊಳಗೊಂದಾಗಿ ಹರಿದು ಹುಪ್ಪಟೆಯಾಗಿ ಇಲ್ಲದಾಗಿ, ಮರೆಯಾಗಿ, ಇನ್ನೆಲ್ಲೋ ಪುನಶ್ಚೇತನವಾಗಿ ಪ್ರಕೃತಿ ಮಾತೆಯ ಸುಳಿಯೊಳಗೊಂದಾಗುವುದು ಈ ಜಗದ ನಿಯಮ. ಅಷ್ಟೇ. ಕುವೆಂಪು ಅವರೆಂದಂತೆ..

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವ ಭವದಿ ಭವಿಸಿ ಹೇ ಭವವಿದೂರ
ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ..
ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ
ಹೇ ದಿವ್ಯ ಸಚ್ಚಿದಾನಂದ ಶೀಲಾ..
ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ…

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಕ್ಕಿಗಳಿಗೆ ಗೂಡುಕಟ್ಟುವ ಪರಿಸರ ಪ್ರೇಮಿ..
July 8, 2025
10:18 AM
by: The Rural Mirror ಸುದ್ದಿಜಾಲ
ಮಹಾರಾಷ್ಟ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ 25,000 ಕೋಟಿ ರೂ. ಹೂಡಿಕೆ ಮಾಡಲಿದೆ
July 8, 2025
7:11 AM
by: The Rural Mirror ಸುದ್ದಿಜಾಲ
ಆಶ್ಲೇಷ ನಕ್ಷತ್ರದಲ್ಲಿ ಬುಧ: ಈ 4 ರಾಶಿಗೆ ಹೆಜ್ಜೆ ಹೆಜ್ಜೆಗೂ ಕಂಟಕ..!
July 8, 2025
7:04 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದರ್ಶಿತ್‌ ಕೆ ಎಸ್
July 7, 2025
11:04 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group