ಕೇರಳದಲ್ಲಿ ಮುಂಗಾರು ತೀವ್ರಗೊಳ್ಳುತ್ತಿದ್ದು, ಹವಾಮಾನ ಇಲಾಖೆ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಹಲವಾರು ನದಿಗಳು ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿವೆ. ದೆಹಲಿಯಲ್ಲಿ ಮೋಡ ಕವಿದ ವಾತಾವರಣವಿದ್ದು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ದೆಹಲಿಯನ್ನು ಮುಂಗಾರು ಆವರಿಸುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ. ಇದೇ ವೇಳೆ ಹಿಮಾಚಲ ಪ್ರದೇಶಕ್ಕೂ ಜೂನ್ 29 ರಿಂದ ಆರೆಂಜ್ ಅಲೆಟ್ ನೀಡಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಮುಂದಿನ ಏಳು ದಿನಗಳಲ್ಲಿ ವಾಯುವ್ಯ, ಮಧ್ಯ, ಪೂರ್ವ ಮತ್ತು ಈಶಾನ್ಯ ಭಾರತದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಸೌರಾಷ್ಟ್ರ ಮತ್ತು ಕಚ್‌ನ ಪ್ರತ್ಯೇಕ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ 20 ಸೆಂ.ಮೀ.ಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ 24 ಗಂಟೆಗಳಲ್ಲಿ ದೆಹಲಿಯನ್ನು ಮುಂಗಾರು ಆವರಿಸುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ ಕೆಲವು ಸ್ಥಳಗಳಲ್ಲಿ ಮಾತ್ರ ಹಗುರವಾದ ಮಳೆಯಾಗಿದೆ. ನೈಋತ್ಯ ಉತ್ತರ ಪ್ರದೇಶ ಮತ್ತು ಪಕ್ಕದ ಹರಿಯಾಣ ಮತ್ತು ರಾಜಸ್ಥಾನದ ಪ್ರದೇಶಗಳಲ್ಲಿಯೂ ಇದೇ ಮಾದರಿ ಕಂಡುಬಂದಿದೆ. ಮುಂದಿನ ಮೂರು ನಾಲ್ಕು ದಿನಗಳಲ್ಲಿ ಈ ಮಾದರಿ ಬದಲಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.
ಹಿಮಾಚಲ ಪ್ರದೇಶದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು ಹಲವಾರು ಜಿಲ್ಲೆಗಳಲ್ಲಿ ಸಂಭಾವ್ಯ ಪ್ರವಾಹ, ನದಿ ಮಟ್ಟ ಏರಿಕೆ ಮತ್ತು ಭೂಕುಸಿತದ ಎಚ್ಚರಿಕೆ ನೀಡಲಾಗಿದೆ. ತೀವ್ರ ಮಳೆಯ ಸಮಯದಲ್ಲಿ ಭೂಕುಸಿತದ ಹೆಚ್ಚಿನ ಸಾಧ್ಯತೆ ಇರುವುದರಿಂದ ನದಿಗಳು, ತೊರೆಗಳು ಮತ್ತು ಕಡಿದಾದ ಇಳಿಜಾರುಗಳಿಗೆ ಹೋಗುವುದನ್ನು ತಪ್ಪಿಸಲು ಐಎಂಡಿ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಸಲಹೆ ನೀಡಿದೆ. ಈಗಾಗಲೇ ರಾಜ್ಯದ ಮೂರು ಸ್ಥಳಗಳಲ್ಲಿ ಮೇಘಸ್ಫೋಟ ಮತ್ತು ಒಂಬತ್ತು ಸ್ಥಳಗಳಲ್ಲಿ ದಿಢೀರ್ ಪ್ರವಾಹ ಸಂಭವಿಸಿದೆ. ಕುಲ್ಲು ಮತ್ತು ಕಾಂಗ್ರಾ ಜಿಲ್ಲೆಗಳು ಸೇರಿದಂತೆ ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆ, ದಿಢೀರ್ ಪ್ರವಾಹ ಮತ್ತು ಮೇಘಸ್ಫೋಟವು ಹಾನಿಯನ್ನುಂಟು ಮಾಡಿದ್ದು, ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಐದು ಜನರು ಕಾಣೆಯಾಗಿದ್ದಾರೆ. ಇದುವರೆಗೆ ಸುಮಾರು 20 ಕ್ಕೂ ಅಧಿಕ ಜೀವಹಾನಿ ಸಂಭವಿಸಿದೆ. ಇಲ್ಲಿಯವರೆಗೆ 250 ಜನರನ್ನು ರಕ್ಷಿಸಲಾಗಿದೆ ಮತ್ತು ಸಾವನ್ನಪ್ಪಿದ ಐವರಲ್ಲಿ ನಾಲ್ವರನ್ನು ಗುರುತಿಸಲಾಗಿದೆ.
ಕೇರಳದ ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ಮಳೆ ತೀವ್ರಗೊಂಡಿದ್ದು, ಮೂರು ಜಿಲ್ಲೆಗಳಲ್ಲಿ ಐಎಂಡಿ ರೆಡ್ ಅಲರ್ಟ್ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ. ಮಳೆಯಿಂದಾಗಿ ಅಪಾಯಕಾರಿಯಾಗಿ ನೀರಿನ ಮಟ್ಟ ಹೆಚ್ಚಿರುವ ವಿವಿಧ ನದಿಗಳ ಬಗ್ಗೆ ರಾಜ್ಯ ನೀರಾವರಿ ಇಲಾಖೆ ಎಚ್ಚರಿಕೆ ನೀಡಿದೆ. ಎರ್ನಾಕುಲಂ ಜಿಲ್ಲೆಯ ಮುವಾಟ್ಟುಪುಳ ನದಿ, ತ್ರಿಶೂರ್ ಮತ್ತು ಮಲಪ್ಪುರಂ ಮೂಲಕ ಹರಿಯುವ ಭಾರತಪುಳ, ಪಥನಂತಿಟ್ಟದಲ್ಲಿ ಅಚಂಕೋವಿಲ್ ಮತ್ತು ಪಂಬಾ ನದಿಗಳು, ಕೊಟ್ಟಾಯಂನ ಮಣಿಮಾಲ, ಇಡುಕ್ಕಿಯ ತೋಡುಪುಳ ನದಿ ಮತ್ತು ವಯನಾಡಿನ ಕಬಾನಿ ಸೇರಿದಂತೆ ಇತರ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.ಭಾರೀ ಮಳೆ ಮತ್ತು ನದಿಗಳ ನೀರಿನ ಮಟ್ಟ ಏರಿಕೆಯಿಂದಾಗಿ ಎರ್ನಾಕುಲಂ, ತ್ರಿಶೂರ್ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನೂರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಿ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರದ ಘಾಟ್ ಪ್ರದೇಶಗಳು ಮತ್ತು ಗುಜರಾತ್ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ವಾರವಿಡೀ ನಿರಂತರವಾಗಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಜೂನ್ 29 ರಂದು ಹಿಮಾಚಲ ಪ್ರದೇಶ ಮತ್ತು ಪಂಜಾಬ್, ಜೂನ್ 29 ಮತ್ತು 30 ರಂದು ಹರಿಯಾಣ, ಜೂನ್ 27 ರಿಂದ ಜುಲೈ 1 ರವರೆಗೆ ಉತ್ತರಾಖಂಡ ಮತ್ತು ಜೂನ್ 27 ರಂದು ಪೂರ್ವ ರಾಜಸ್ಥಾನ ಮತ್ತು ವಿದರ್ಭ ಸೇರಿದಂತೆ ಇತರ ಪ್ರದೇಶಗಳಲ್ಲಿ ತೀವ್ರ ಮಳೆಯಾಗುವ ನಿರೀಕ್ಷೆಯಿದೆ.
ಜೂನ್ 29 ರಿಂದ ಜುಲೈ 2 ರವರೆಗೆ ಉತ್ತರ ಪ್ರದೇಶ, ಜೂನ್ 27 ರಂದು ಮಧ್ಯಪ್ರದೇಶ ಮತ್ತು ಜುಲೈ 1 ರಿಂದ 3 ರವರೆಗೆ, ಜುಲೈ 1 ಮತ್ತು 2 ರಂದು ಛತ್ತೀಸ್‌ಗಢ, ಜೂನ್ 29 ಮತ್ತು 30 ರಂದು ಗಂಗಾನದಿಯ ಪಶ್ಚಿಮ ಬಂಗಾಳ, ಜೂನ್ 30 ಮತ್ತು ಜುಲೈ 1 ರಂದು ಒಡಿಶಾ ಮತ್ತು ಜೂನ್ 29 ರಂದು ಜಾರ್ಖಂಡ್‌ನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಕೇರಳದಲ್ಲಿ ಜೂನ್ 27 ಮತ್ತು 28 ರಂದು ಸಹ ಭಾರೀ ಮಳೆಯಾಗಲಿದೆ.
(ಸುದ್ದಿ ಸಂಸ್ಥೆಗಳ ಮಾಹಿತಿ ಆಧಾರಿತ )