….ನಮ್ಮ ಅಸೆಗಳಿಗೆ ಮಿತಿ ಇದೆಯಾ… ನಿರೀಕ್ಷೆಗಳಿಗೆ ಮಿತಿ ಇದೆಯೋ… ಆಸೆಗಳ ಹಿಂದೆ ಓಡೋಡುತ್ತಾ ಪ್ರಕೃತಿಯನ್ನೂ ನಮ್ಮ ತಾಳಕ್ಕೆ ತಕ್ಕಂತೆ ಕುಣಿಸೋ ಪ್ರಯತ್ನ ಮಾಡ್ತೇವಲ್ಲಾ….. ತನ್ನ ಕಾರ್ಯ ಆದರೆ ಸಾಕು,ತನ್ನ ಕಾರ್ಯಕ್ಕೆ ಪ್ರಕೃತಿ ಒಲಿಯಬೇಕೂ ಎಂಬ ನಿರೀಕ್ಷೆ ಸದಾ ಹುಚ್ಚು ಕುದುರೆಯಂತೆ ಕಾಡುತ್ತಲ್ಲಾ……. ಹೌದು…,
ಬಿಸಿಲು ಬಂದಾಗ ಛಳಿಯ ಆಸೆ..
ಚಳಿ ಬಂದಾಗ ಮಳೆಯ ಆಸೆ…… ಎಲ್ಲೆಲ್ಲಿಯೋ ನೆರೆ ಬಂದು ಮುಳುಗಡೆಯಾದ ವಿಡಿಯೋ ಥ್ರಿಲ್ ಕೊಡುತ್ತದೆ, ಎಲ್ಲೋ ಅಣೆಕಟ್ಟು ತುಂಬಿ ಊರು ಕೇರಿಗಳು ಮುಳುಗಿ ಬಂದ ವಿದ್ಯುತ್ ಮುದ ನೀಡುತ್ತದೆ, ಯಾವುದೋ ಗುಡ್ಡ ಕುಸಿಯುವ ಚಿತ್ರ, ಯಾವುದೊ ಮನೆಗೆ ನುಗ್ಗುವ ನೀರು ಕುತೂಹಲ ಮೂಡಿಸುತ್ತದೆ.
ಪ್ರಕೃತಿ ಮಾತೆ ಒಂದು ಇಂಚೂ ಬದಲಾಗಳು… ತನ್ನ ನಿರ್ಧಾರದಿಂದ ಹಿಂದೆ ಸರಿಯಳು…. ನಮಗಾಗಿ ಪ್ರಕೃತಿಯನ್ನು ಬದಲಿಸಲು ಹೊರಟು ಗೆದ್ದ ಪ್ರಸಂಗ ಕಂಡದ್ದಿದೆಯಾ…ಇಲ್ಲ….ಬದಲಿಸ ಹೊರಟರೆ ಅದರ ನಾಲ್ಕು ಪಾಲು ವೇಗದಲ್ಲಿ ಮುನ್ನುಗ್ಗಿ ಬಂದಾಳು…. ಮುನ್ನುಗ್ಗಿ ಬಂದಾಗ ಒಪ್ಪಲೇ ಬೇಕಷ್ಟೆ.. ಹಾಗೆಯೇ ಈ ವರ್ಷದ ಮಳೆ ಕೂಡಾ… ಜೂನ್ ತಿಂಗಳಲ್ಲಿ ಅಷ್ಟಕ್ಕಷ್ಟೇ ಇದ್ದ ಮಳೆ ಜುಲೈ ತಿಂಗಳ ಪ್ರಾರಂಭಕ್ಕೇ ವೇಗ ವರ್ಧಿಸುತ್ತಾ ದಾಖಲೆಗಳತ್ತ ಒಡುತ್ತಾ ಮನುಜನನ್ನು ಗಣನೆಗೇ ತೆಗೆದುಕೊಳ್ಳಲಿಲ್ಲ.
2020 ರಲ್ಲಿ ಜುಲೈ ಆರನೇ ತಾರೀಕಿನ ತನಕ 57 ದಿನಗಳಲ್ಲಿ ಸುರಿದ ಒಟ್ಟು ವಾರ್ಷಿಕ ಮಳೆ 1190 ಮಿಮೀ.
2021 ರಲ್ಲಿ ಜುಲೈ ಆರನೇ ತಾರೀಕಿನ ತನಕ 67 ದಿನಗಳಲ್ಲಿ ಸುರಿದ ಒಟ್ಟು ವಾರ್ಷಿಕ ಮಳೆ 1644 ಮಿಮೀ.
2022 ರಲ್ಲಿ ಜುಲೈ ಆರನೇ ತಾರೀಕಿನ ತನಕ 66 ದಿನಗಳಲ್ಲಿ ಸುರಿದ ಒಟ್ಟು ವಾರ್ಷಿಕ ಮಳೆ 2293 ಮಿಮೀ.
ಅಂದರೆ ಕಳೆದ ವರ್ಷಕ್ಕಿಂತ ಈ ವರ್ಷ ಸುಮಾರು 650 ಮಿಮೀ ಮಳೆ ಹೆಚ್ಚು ಸುರಿದಿದೆ….
ಪ್ರಕೃತಿಯ ನಡೆ ನಿಗೂಢ ……ದಾಖಲಿಸಬಹುದಷ್ಟೇ ಹೊರತು ,ಊಹಿಸಲು ಅಸಾಧ್ಯ…. ಅದಕ್ಕಾಗಿಯೇ ಸನಾತನೀಯರು ಈ ಪ್ರಕೃತಿಯ ನಿಗೂಢತೆಗೆ ಹತ್ತು ಹಲವು ದೇವರೆಂಬ ಹೆಸರು ಕೊಟ್ಟು ಕೊಟ್ಟು..
” ತ್ವಂ ಬ್ರಹ್ಮಾ ತ್ವಂ ವಿಷ್ಣುಸ್ತ್ವಂ ರುದ್ರಸ್ತ್ವಮಿಂದ್ರಸ್ತ್ವಮಗ್ನಿಸ್ತ್ವಂ ವಾಯುಸ್ತ್ವಂ ಸೂರ್ಯಸ್ತ್ವಂ ಚಂದ್ರಮಾಸ್ತ್ವಂ ಬ್ರಹ್ಮ ಭೂರ್ಬವಃ ಸುವರೋಮ್ ” ಎಂದು ಶರಣಾಗತಿಯ ಪಾಠ ಮಾಡಿದರಲ್ಲವೇ….
ಅನುಸರಿಸೋಣ ಹಿರಿಯರ ನಡೆಯ, ಪ್ರಕೃತಿಯ ಮಹತ್ತನ್ನು ನಮಿಸೋಣ .