ಉತ್ತರಾಖಂಡ್ನಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಹಲವೆಡೆ ಭೂ ಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ವಿಪರೀತ ಮಳೆಗೆ ಉತ್ತರ ಭಾರತದಲ್ಲಿ ಜನಜೀವನವೂ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಭಾರತದಲ್ಲಿ ನಿರೀಕ್ಷಿತ ಮಳೆಯಾಗದೆ ಕೃಷಿಕರು ಕಂಗಾಲಾಗಿದ್ದಾರೆ. ಕೆಲವು ಕಡೆ ನೀರಿಲ್ಲಿದೆ ಜನರು ಮಳೆಯನ್ನೇ ನೋಡುವಂತಾಗಿದೆ. ಒಂದು ಕಡೆಯಿಂದ ಮಳೆಯಿಂದ ಜನರು ತತ್ತರವಾದರೆ, ಇನ್ನೊಂದು ಕಡೆ ಮಳೆ ಇಲ್ಲದೆ ತತ್ತರವಾಗಿದ್ದಾರೆ.
ಭಾರೀ ಮಳೆಯಿಂದ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದ್ದು, ಪರಿಣಾಮ ಹೆದ್ದಾರಿಯ ಒಂದು ಭಾಗ ಕೊಚ್ಚಿಹೋಗಿದೆ. ಇದರಿಂದ ಸಾವಿರಾರು ಪ್ರವಾಸಿಗರು ರಸ್ತೆಮಧ್ಯೆಯೇ ಸಿಕ್ಕಿಹಾಕಿಕೊಂಡಿದ್ದಾರೆ. ಪ್ರಸಿದ್ಧ ಯಾತ್ರಾ ಸ್ಥಳ ಬದರಿನಾಥಕ್ಕೆ ತೆರಳುವ ಹೆದ್ದಾರಿ 7 ಕೂಡ ವಿಪರೀತ ಮಳೆಗೆ ಕೊಚ್ಚಿ ಹೋಗಿದ್ದು, ಬೃಹತ್ ಗುಡ್ಡದಿಂದ ಭೂಕುಸಿತ ಉಂಟಾಗಿ ರಸ್ತೆ ಸಂಪೂರ್ಣ ಬಂದ್ ಆಗಿದೆ. ಚಿಂಕಾ ಬಳಿ ಈಗ ಕಲ್ಲು ಮಣ್ಣು ತೆರವು ಮಾಡುವುದೇ ಸವಾಲಾಗಿ ಪರಿಣಮಿಸಿದೆ.
ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ಉಂಟಾದ ಭಾರೀ ಟ್ರಾಫಿಕ್ ಜಾಮ್ ನಡುವೆ ಸಾವಿರಾರು ಪ್ರವಾಸಿಗರು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಔಟ್ ಬಳಿ ಸಿಲುಕಿಕೊಂಡಿದ್ದಾರೆ. ನೂರಾರು ವಾಹನಗಳ ಸಾಲು ಕಿಲೋಮೀಟರ್ಗಟ್ಟಲೆ ಬೆಳೆದಿದೆ. ಮಂಡಿ ಜಿಲ್ಲೆಯಲ್ಲಿ ಉಂಟಾದ ಭಾರೀ ಮಳೆಯಿಂದಾಗಿ ಚಂಡೀಗಢ-ಮನಾಲಿ ಮಧ್ಯದ ಮಂಡಿ ಮತ್ತು ಕುಲುವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ 7 ಮೈಲ್ ಬಳಿ ಭೂಕುಸಿತ ಉಂಟಾಗಿ ರಸ್ತೆ ತಡೆ ಉಂಟಾಯಿತು. ಇದರಿಂದ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
ಚಂಡೀಗಢ-ಮನಾಲಿ ಹೆದ್ದಾರಿಯು ಭೂಕುಸಿತದಿಂದಾಗಿ ಸುಮಾರು 24 ಗಂಟೆಗಳ ಕಾಲ ಮುಚ್ಚಲ್ಪಟ್ಟಿತ್ತು ಮತ್ತು ಡೇರ್ಡ್ ನಾಲಾದಲ್ಲಿ ಪಾಂಗಿ-ಕಿಲ್ಲರ್ ಹೆದ್ದಾರಿ (SH-26) ಸೇರಿದಂತೆ ಹಲವಾರು ಕಡೆ ಭೂಕುಸಿತದಿಂದಾಗಿ ಇತರ ಪ್ರಮುಖ ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಭಾರತದ ಮಾನ್ಸೂನ್ ಋತುವಿನ ಮಳೆಯು ಈ ವಾರಾಂತ್ಯದ ವೇಳೆಗೆ ಇಡೀ ದೇಶವನ್ನು ಆವರಿಸಲಿದ್ದು, ಸಂಪೂರ್ಣ ನಾಲ್ಕು ತಿಂಗಳ ಋತುವಿನಲ್ಲಿ ಸರಾಸರಿ ಪ್ರಮಾಣದ ಮಳೆ ಸುರಿಯಲಿದೆ ಎಂದು IMD ಮುನ್ಸೂಚನೆ ನೀಡಿದೆ.ಮುಂಗಾರು ಮಳೆ ಇನ್ನೂ ಕೆಲ ದಿನಗಳ ಕಾಲ ಮುಂದುವರಿಯಲಿ. ಜನರು ಎಚ್ಚರದಿಂದ ಇರಬೇಕು ಎಂದು IMD ಯ ಹಿರಿಯ ವಿಜ್ಞಾನಿ ಡಾ ನರೇಶ್ ಕುಮಾರ್ ಗುರುವಾರ ಹೇಳಿದ್ದಾರೆ.
ಮುಂಬರುವ ಎರಡು ದಿನಗಳಲ್ಲಿ, ಮಧ್ಯಪ್ರದೇಶದಲ್ಲಿ ಭಾರೀ ಮಳೆ ಸುರಿಯಬಹುದು. ಇಂದು ದಕ್ಷಿಣ ಗುಜರಾತ್ ಮತ್ತು ಕೊಂಕಣ ಗೋವಾದ ಭಾಗಗಳಲ್ಲಿ ಅತಿ ಹೆಚ್ಚು (20 ಸೆಂ.ಮೀ.ಗಿಂತ ಹೆಚ್ಚು) ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಮುಂದಿನ ಐದು ದಿನಗಳಲ್ಲಿ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಭೂಕುಸಿತದಿಂದಾಗಿ ಮಣ್ಣಿನಡಿ ಕಾರುಗಳ ಸಿಲುಕಿಕೊಂಡಿದ್ದು, ರಕ್ಷಣಾ ಪಡೆಗಳು ಮಣ್ಣಿನಲ್ಲಿ ಸಿಲುಕಿಕೊಂಡ ಕಾರುಗಳನ್ನು ತೆಗೆಯಲು ಹರಸಾಹಸ ಪಡುತ್ತಿದ್ದಾರೆ.
ಈ ನಡುವೆ ದಕ್ಷಿಣ ಭಾರತದ ಹಲವು ಕಡೆಗಳಲ್ಲಿ ಮಳೆಯಾಗುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಕರಾವಳಿ ಭಾಗಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಕೃಷಿ ಚಟುವಟಿಕೆಗೆ ಮಳೆ ಸಾಕಾಗುತ್ತಿಲ್ಲ. ಹೀಗಾಗಿ ಮಳೆ ಇಲ್ಲದೆ ದಕ್ಷಿಣ ಭಾರತದ ಕಡೆಯಲ್ಲಿ ಕೃಷಿಕರು ಕಂಗಾಲಾಗಿದ್ದಾರೆ.