ಉತ್ತರನಾಡು ಹಾಗೂ ಕರಾವಳಿಯ ಹಲವೆಡೆ ವ್ಯಾಪಕ ಮಳೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಅಕ್ಟೋಬರ್ ಮೂರರವರೆಗೆ ವ್ಯಾಪಕ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಇಂದು ಹಾಗೂ ನಾಳೆ ಕೆಲವೆಡೆ ಹಗುರವಾಗಿ ಮಳೆಯಾಗಲಿದೆ. ರಾಜ್ಯದ ಉತ್ತರ ಒಳನಾಡಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಶೇಕಡ 223 ರಷ್ಟು ಹೆಚ್ಚಿನ ಮಳೆ ಬಿದ್ದಿರುವ ಕಾರಣ ನಾಳೆವರೆಗೂ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ. ಮುಂದಿನ 48 ಗಂಟೆಗಳ ಕಾಲ ಭೀಮಾ ನದಿಯಲ್ಲಿ ಒಳ ಹರಿವಿನಿಂದ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹದ ಅಪಾಯ ಕಂಡು ಬರುವ ಸಾಧ್ಯತೆ ಇರಲಿದೆ. ಭೀಮಾನದಿ, ಸನ್ನತಿ ಹಾಗೂ ಯಾದಗಿರಿ ಬ್ರಿಡ್ಜ್ ಕಂ ಬ್ಯಾರೇಜ್ ನ ಒಳ ಹರಿವು 4 ಲಕ್ಷದ 20 ಸಾವಿರ ಕ್ಯೂಸೆಕ್ಸ್ ಹಾಗೂ ಹೊರ ಹರಿವು 4 ಲಕ್ಷದ 20 ಸಾವಿರ ಕ್ಯೂಸೆಕ್ ನೀರು ಹರಿಯತ್ತಿದೆ. ನಿನ್ನೆ ರಾತ್ರಿ ಶಹಾಪುರ ತಾಲ್ಲೂಕಿನ ಹುರಸಗುಂಡಗಿ ಗ್ರಾಮದ 5 ಮನೆಗಳಿಗೆ ನೀರು ನುಗ್ಗಿದ್ದು, 5 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಭೀಮಾ ನದಿ ನೀರಿನ ಪ್ರವಾಹದಿಂದ ರೋಜಾ, ಎಸ್ ಶಿರವಾಳದಿದ ಹೊಸುರ ಗ್ರಾಮದ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಜೋಳದಡಗಿ ಸೇತುವೆ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಸತತ ಮಳೆಯಿಂದ ಹಾಗೂ ನದಿ ನೀರು ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆಗಳು ಹಾನಿಯಾಗಿದ್ದು, ಸುಮಾರು 1 ಲಕ್ಷದ 14 ಸಾವಿರದ ಮುನ್ನೂರು ಹೆಕ್ಟರ್‌ನಷ್ಟು ಬೆಳೆಹಾನಿಯಾಗಿರುವುದಾಗಿ ಅಂದಾಜಿಸಲಾಗಿದ್ದು, ಜಮೀನುಗಳ ಜಂಟಿ ಸಮೀಕ್ಷೆ ಕಾರ್ಯ ಪುಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.

