ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರೀ ಮಳೆಯ ಕಾರಣ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಕೆಲವು ತಾಲೂಕುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
ಮಂಗಳೂರು ತಾಲೂಕು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಳ್ಳಾಲ ನೇತ್ರಾವತಿ ಸೇತುವೆಯಿಂದ ಸುರತ್ಕಲ್, ಮುಕ್ಕ, ನಂದಿನಿ ನದಿ ಸೇತುವೆಯವರೆಗೆ ಹಾಗೂ ಪೂರ್ವದಲ್ಲಿ ವಳಚ್ಚಿಲ್, ಅಡ್ಡೂರು ಸೇತುವೆ, ಎಡಪದವು, ಬಜಪೆ ಎಕ್ಕಾರುವರೆಗಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉಳ್ಳಾಲ ಮತ್ತು ಬಂಟ್ವಾಳ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಡಲು ಕೂಡ ಪ್ರಕ್ಷುಬ್ಧ ಗೊಂಡಿದ್ದು, ಉಳ್ಳಾಲ ಸಮುದ್ರದ ಭೋರ್ಗರೆತ ಹೆಚ್ಚಾಗಿದೆ.
ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳಗಳಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭಟ್ಕಳದಲ್ಲಿ ಅತೀ ಹೆಚ್ಚು 119 ಮಿಲಿ ಮೀಟರ್ ಮಳೆ ಸುರಿದಿದೆ ಹವಾಮಾನ ಇಲಾಖೆ ನಾಳೆಯವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.