10.11.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ದಕ್ಷಿಣ ಕನ್ನಡದ ಜಿಲ್ಲೆಯ ಸುಳ್ಯ ಹಾಗೂ ಕಡಬ ತಾಲೂಕುಗಳ ಅಲ್ಲಲ್ಲಿ ನಿನ್ನೆ ಸಂಜೆ ಅನಿರೀಕ್ಷಿತ ಉತ್ತಮ ಮಳೆಯಾಗಿದೆ. ಕೆಲವು ಭಾಗಗಳಲ್ಲಿ 100 ಮಿ. ಮೀ. ಗಿಂತಲೂ ಅಧಿಕ ಮಳೆಯಾದ ವರದಿಯಾಗಿದೆ. ಇವತ್ತು ರಾಜ್ಯದಾದ್ಯಂತ ಒಣ ಹವೆ ಆವರಿಸುವ ಮುನ್ಸೂಚನೆ ಇದೆ. ಅಲ್ಲಲ್ಲಿ ಸಣ್ಣ ಪ್ರಮಾಣದ ಮೋಡದ ಸಾಧ್ಯತೆಯೂ ಇದೆ.
ಫಿಲಿಪ್ಪೀನ್ಸ್ ಪಶ್ಚಿಮ ಕರಾವಳಿಯಲ್ಲಿ ಉಂಟಾಗಿದ್ದ ಪ್ರಭಲ ಚಂಡಮಾರುತದ ಪರಿಣಾಮದಿಂದ ನಮ್ಮ ಹಿಂಗಾರು ಮಾರುತಗಳು ಆ ಕಡೆಗೆ ಸೆಳೆಯಲ್ಪಟ್ಟಿದ್ದವು. ಚಂಡಮಾರುತವು ಸಂಪೂರ್ಣ ಶಿಥಿಲಗೊಳ್ಳುತ್ತಿದ್ದಂತೆಯೆ ಹಿಂಗಾರು ತನ್ನ ಸಾಂಪ್ರದಾಯಿಕ ಹಾದಿಗೆ ಮರಳಿದೆ. ಆದರೆ, ಉತ್ತರ ಭಾರತದ ಕಡೆಯಿಂದ ಶೀತ ಗಾಳಿಯೂ ಬೀಸುತ್ತಿರುವುದರಿಂದ ಪರಿಸ್ಥಿತಿ ಕಾದುನೋಡಬೇಕಾಗಿದೆ. ಈ ಮಧ್ಯೆ ನವೆಂಬರ್ 12 ರಂದು ಶ್ರೀಲಂಕಾ ಪೂರ್ವ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿವೆ. ಈಗಿನಂತೆ ನವೆಂಬರ್ 12ರ ನಂತರ ರಾಜ್ಯದ ದಕ್ಷಿಣ ಒಳನಾಡು, ಮಲೆನಾಡಿನ ಕೊಡಗು, ಹಾಸನ ಮತ್ತು ಕರಾವಳಿಯ ದಕ್ಷಿಣ ಕನ್ನಡ, ಕಾಸರಗೋಡು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಒಂದೆರಡು ಮಳೆಯ ಮುನ್ಸೂಚನೆಯೂ ಇದೆ.

