ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ನದಿ ಪಾತ್ರಗಳಿಗೆ 79 ಸಾವಿರದ 44 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನೀರಿನ ಮಟ್ಟ ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಸುಳಕೂಡ ಬ್ಯಾರೇಜ್ ಮುಖಾಂತರ ದೂಧಗಂಗಾ ನದಿಗೆ 16 ಸಾವಿರದ 544 ಕ್ಯೂಸೆಕ್ ಮತ್ತು ರಾಜಾಪುರ ಬ್ಯಾರೇಜ್ ಮುಖಾಂತರ ಕೃಷ್ಣಾ ನದಿಗೆ 62 ಸಾವಿರದ 500 ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದ್ದು, ನದಿಗಳ ಒಡಲು ತುಂಬಿ ಹರಿಯುತ್ತಿವೆ. ವೇದಗಂಗಾ ನದಿಯ ಬಾರವಾಡ-ಕುನ್ನೂರ, ಅಕ್ಕೊಳ-ಸಿದ್ದಾಳ, ಭೋಜ-ಶಿವಾಪುರವಾಡಿ, ದೂಧಗಂಗಾ ನದಿಯ ಕಾರದಗಾ-ಭೋಜ, ಮಲಿಕವಾಡ-ದತ್ತವಾಡ ಮತ್ತು ಕೃಷ್ಣಾ ನದಿಯ ಕಲ್ಲೋಳ-ಯಡೂರ, ಮಾಂಜರಿ-ಸವದತ್ತಿ ಬ್ಯಾರೇಜ್‌ಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿವೆ.
ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾವಿ ಮಾಹಿತಿ ನೀಡಿ,” ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕೋಡಿ ಉಪವಿಭಾಗದಲ್ಲಿ 6 ಸೇತುವೆಗಳು ಮುಳುಗಡೆಯಾಗಿವೆ. ಪ್ರವಾಹ ಪರಿಸ್ಥಿತಿ ಎದುರಿಸಲು ತಾಲೂಕಾಡಳಿತ ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದೆ” ಎಂದರು.