ಇಳಿದು ಬಾ ತಾಯೀ ಇಳಿದು ಬಾ…
ಹರನ ಜಡೆಯಿಂದ,ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ..
ದೇವದೇವನನು ತಣಿಸಿ ಬಾ..
ದಿಗ್ ದಿಗಂತದಲಿ ಹನಿಸಿ ಬಾ… ಚರಾಚರಗಳಿಗೆ ಉಣಿಸಿ ಬಾ…ತಾಯೆ ಇಳಿದು ಬಾ….
…. ಎಂದು ಕರೆದು ಸ್ವಾಗತಿಸಿದ ವರುಣ ಮಳೆ ನಕ್ಷತ್ರಗಳ ಆದಿಯಾಗಿ ಸುರಿ ಸುರಿದು ಕೊನೆಯ ದಿನಗಳಿಗೆ ತಲುಪಿ, ತನ್ನ ಓಘದ ಓಟದ ಸ್ವಾತಿಯಿಂದ ರಿಲೇ ಕೋಲನ್ನು ಸೆಳೆದ ವಿಶಾಖ ತಾನೇನೂ ಕಡಿಮೆಯಲ್ಲವೆಂದೂ, ಮಳೆದಿನಗಳ ಬಾಲಂಗೋಚಿಯೆಂದು ಅಣಕಿಸಬೇಕಿಲ್ಲವೆಂದು ತನ್ನ ಮೊದಲ ದಿನವೇ ಪ್ರಚಂಡ ಪ್ರದರ್ಶನ ನೀಡಿ ಅಡಿಕೆ,ಭತ್ತ ಮುಂತಾದ ಬೆಳೆಗಾರರನ್ನು ಕಂಗಾಲು ಮಾಡಿದ. ಭಾರೀ ಮಳೆಯ ವಿಡಿಯೋ ಇಲ್ಲಿದೆ….
ಹೌದು, ಮಧ್ಯಾಹ್ನ ಹನ್ನೆರಡು ವರೆಗೇ ರವಿಯನ್ನು ಮರೆಮಾಚುವ ಮುಗಿಲೋಟವಿತ್ತು, ಆದರೆ.. ಮಳೆ ಸುರಿಯುವಂತಹ ಗಟ್ಟಿತನ ಇರಲಿಲ್ಲ…. ಆದರೂ ಎರಡು ಗಂಟೆಯ ಹೊತ್ತಿಗೆ ಬಾನೇ ತೂತಾದಂತೆ ವರುಣಾಘಾತವಾಯಿತು. ಕೃಷಿಕ ಏನು ತಾನೇ ಮಾಡಲು ಸಾಧ್ಯ. ಮಳೆಗಾಲದ ಕೊಳೆರೋಗದಿಂದ ಹೇಗೋ ಏನೋ ಸಾಹಸಮಾಡಿ ಉಳಿಸಿ,ಇದ್ದ ಬಿದ್ದ ಬೆಳೆಯನ್ನು ರೂಢಿ ಮಾಡಿಕೊಳ್ಳುವ ದಿನವಿದು .ಹಣ್ಣಾದ ಅಡಿಕೆ ಮರದಿಂದ ಬಿದ್ದು ನೀರುಪಾಲಾಗುವುದು ಒಂದು ಕಡೆಯಾದರೆ, ಹೆಕ್ಕಿ ತಂದು ಒಣಗಿಸಲು ಅಂಗಳದಲ್ಲಿ ಹರಗಿದರೆ ಕೊಳೆತು ಕಪ್ಪಾಗುವುದು ಇನ್ನೊಂದು ಕಡೆ. ಈ ವರ್ಷ ಪ್ಲಾಸ್ಟಿಕ್ ಅಂಗಡಿಯವರ ಶುಕ್ರದೆಸೆಯಿರಬಹುದು….ಅಡಿಕೆ ಒಣಗಿಸಲೋಸುಗ ವೀಡ್ ಮ್ಯಾಟ್, ಟರ್ಪಾಲ್ ಮುಂತಾಗಿ ಏನೇನೋ ಒದ್ದಾಡುತ್ತಿರುವ ಕೃಷಿಕ ಪ್ರತಿದಿನವೂ ಪೇಟೆ ಕಡೆ ಒಡೋಡಿ ಪ್ಲಾಸ್ಟಿಕ್ ತರುತ್ತಿರುವುದು ಸಾಮಾನ್ಯವಾಗಿದೆ. ಅಂಗಳವನ್ನು ಎತ್ತರಿಸುವುದು, ದೊಡ್ಡ ಪ್ರಮಾಣದ ಡ್ರಯರ್ ಗಳನ್ನು ಮಾಡುವುದು ಮುಂತಾಗಿ ಲಕ್ಷಗಟ್ಟಲೆ ಹಣ ಖರ್ಚಾಗುತ್ತಿದೆ.
ಸುಳ್ಯ ತಾಲೂಕಿನ ವಿವಿದೆಡೆ ಭಾರೀ ಮಳೆ.ಕಲ್ಮಡ್ಕದಲ್ಲಿ ಸುರಿದ ಮಳೆಯ ಮಾಹಿತಿಯನ್ನು @trSURESHCHANDRA ನೀಡಿದ್ದಾರೆ. #rain #ಮಳೆ pic.twitter.com/ZKaj7yCvtK
— theruralmirror (@ruralmirror) November 6, 2021
ಅದಲ್ಲದೆ, ಈ ದಿನಗಳು,ಅಡಿಕೆ ಮರಗಳಲ್ಲಿ ಮುಂದಿನ ವರ್ಷದ ಫಸಲಿನ ನಿರ್ಣಾಯಕ ಕಾಲಘಟ್ಟವೂ ಹೌದು. ಸರಿಯಾದ ಸಮಯದಲ್ಲಿ ಸರಿಯಾದ ಗೊಬ್ಬರ ಕೊಟ್ಟು ಇನ್ನೇನು ತೆರೆದುಕೊಳ್ಳಲಿರುವ ಹಿಂಗಾರಕ್ಕೆ ಶಕ್ತಿ ನೀಡಬೇಕಾದ ಸಮಯ.ಆದರೆ ಹಾಕಿದ ಗೊಬ್ಬರವೆಲ್ಲಾ ನೀರುಪಾಲಾಗುವುದನ್ನು ತಡೆಯಲಾರದ ಹತಾಶ ಪರಿಸ್ಥಿತಿ ಕೃಷಿಕನದ್ದು. ಅಂತೂ ಕೃಷಿಕನ ಬದುಕು ಪ್ರತಿದಿನದ ಹೋರಾಟ ಎಂಬಂತಾಗಿದೆ.
ಆದರೂ ಕೃಷಿಕನ ಆಶಾಭಾವನೆ ಏನೆಂದರೆ, ಈ ಮುಗಿಲು ಕಳೆದು ನಾಳೆ ರವಿ ಮೂಡಲೇ ಬೇಕು, ಆಗ ತನ್ನ ಕೃಷಿ ಬದುಕು ಹಳಿಗೆ ಬಂದೀತೆಂಬ ಆಶಯ.
# ಸುರೇಶ್ಚಂದ್ರ ಟಿ ಆರ್, ಕಲ್ಮಡ್ಕ