ಜಲಸಂರಕ್ಷಣೆಗೆ ವಿವಿಧ ಪ್ರಯತ್ನ ನಡೆಯುತ್ತಿದೆ. ತಾಪಮಾನ ಏರಿಕೆಯಾದಂತೆ ಅಂತರ್ಜಲಮಟ್ಟವೂ ಕುಸಿತವಾಗುತ್ತಿದೆ. ಇಂತಹ ಸಮಯದಲ್ಲಿ ಅಂತರ್ಜಲ ಮರುಭರ್ತಿ ಹೇಗೆ?. ಇದಕ್ಕಾಗಿ ಅಂತರ್ಜಲ ಮರುಭರ್ತಿ ಮಾಡುವ ವಿವಿಧ ವಿಧಾನಗಳ ಪರಿಚಯ ಮಾಡಲಾಗುತ್ತುದೆ. ಇದರಲ್ಲಿ ಕಂದಕ ಬದು ನಿರ್ಮಾಣವೂ ಒಂದು.ಇದಕ್ಕಾಗಿಯೇ ಮಂಡ್ಯದಲ್ಲಿ ಕಾರ್ಯಾಗಾರ ನಡೆದಿದೆ.ಕಾರ್ಯಾಗಾರದಲ್ಲಿ 3 ಸಾವಿರಕ್ಕೂ ಅಧಿಕ ರೈತರು ಪಾಲ್ಗೊಂಡಿದ್ದರು.
ಕೇಂದ್ರ ಗ್ರಾಮಿಣಾಭಿವೃದ್ಧಿ ಮಂತ್ರಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಜ್ಯ ಕೃಷಿ ಇಲಾಖೆ ಸಹಯೋಗದಲ್ಲಿ ಮನ್ರೇಗಾ ಕೃಷಿ ಕವಚ ಕಾರ್ಯಕ್ರಮದಡಿ ಕೃಷಿ ಇಲಾಖೆಯ ಯೋಜನೆಗಳ ಒಗ್ಗೂಡಿತ ಕಂದಕ ಬದು ನಿರ್ಮಾಣ ಕುರಿತ ಕಾರ್ಯಾಗಾರವನ್ನು ಮಂಡ್ಯದಲ್ಲಿ ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು , ಕೃಷಿ ಕವಚ ಕಾರ್ಯಕ್ರಮದಡಿ ಕಂದಕ ಬದು ನಿರ್ಮಾಣದಿಂದ ಮಳೆ ನೀರು ಪೋಲಾಗುವುದು ತಪ್ಪುತ್ತದೆ. ಪ್ರಸ್ತುತ 104 ತಾಲೂಕಿನಲ್ಲಿ ಮಾತ್ರ ಕೃಷಿ ಹೊಂಡ ಇದ್ದು, ನೀರಾವರಿ ಯೋಜನೆ ಮೂಲಕ 224 ತಾಲೂಕುಗಳಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಇದಕ್ಕಾಗಿ 2 ರಿಂದ 3 ಲಕ್ಷ ರೂಪಾಯಿವರೆಗೂ ಅನುದಾನ ನೀಡಲಾಗುತ್ತದೆ. ಮನ್ರೇಗಾ ಯೋಜನೆಯಡಿ ಸಿಗುವ ಎಲ್ಲಾ ಪ್ರಯೋಜನಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬೆಲ್ಲದ ನಾಡು ರೈತ ಉತ್ಪಾದಕ ಕಂಪನಿಗಳ ಒಕ್ಕೂಟದ ಅಧ್ಯಕ್ಷ ಕಾರಸವಾಡಿ ಮಹದೇವು ಮಾತನಾಡಿ,ಕಂದಕ ಬದು ನಿರ್ಮಾಣದ ಮೂಲಕ ಮಳೆ ನೀರು ಸಂಗ್ರಹ ಮಾಡಿ ನೀರು ಪೋಲಾಗುವುದನ್ನು ತಪ್ಪಿಸಬಹುದು, ಅಲ್ಲದೆ ಮಣ್ಣಿನ ಸವಕಳಿ ನಿಯಂತ್ರಣ ಕೂಡ ಸಾಧ್ಯ ಎಂದರು.