ಸಾಮಾನ್ಯವಾಗಿ ಇಲ್ಲಿಯವರೆಗೂ ಎಲ್ಲರೂ ಲಯನ್ ಸಫಾರಿ, ಹುಲಿ ಸಫಾರಿ ಎನ್ನುವುದನ್ನೆಲ್ಲಾ ಕೇಳಿದ್ದರು. ಆದರೆ ಗೋ ಸಫಾರಿ ಎನ್ನುವುದನ್ನು ಕೇಳಿರುವ ಸಾಧ್ಯತೆ ಬಹಳ ಕಡಿಮೆ. ಹೀಗಿರುವಾಗ ರಾಜಸ್ಥಾನ ಸರ್ಕಾರ ಇದೇ ಮೊದಲ ಬಾರಿಗೆ ಗೋಸಫಾರಿ ಎಂಬ ವಿಶೇಷ ಪ್ರಯೋಗವನ್ನು ನಡೆಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ.
ರಾಜಸ್ಥಾನವು ದೇಶದಲ್ಲೇ ಗೋವುಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯವನ್ನೇ ಸೃಷ್ಟಿಸಿದ್ದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಹಾಗೆಯೇ ಮೊದಲ ಗೋ ಸಚಿವರನ್ನು ಪರಿಚಯಿಸಿದ ದೇಶದ ಮೊದಲ ರಾಜ್ಯವು ಇದೇ ಆಗಿದೆ. ಹೀಗೆ ತನಗಿರುವ ಗೋವುಗಳ ಮೇಲಿನ ಪ್ರೀತಿಯನ್ನು ಪ್ರದರ್ಶಿಸುವಲ್ಲಿ ಸದಾ ಮುಂದಿರುವ ಈ ರಾಜ್ಯ ಮತ್ತೊಂದು ಐತಿಹಾಸಿಕ ಹೆಜ್ಜೆಯನ್ನು ಮುಂದಿಟ್ಟಿದೆ.
ಸರ್ಕಾರದ ಮಟ್ಟದಲ್ಲಿ ಗೋವುಗಳೊಂದಿಗೆ ಉಳಿಯಲು ಮತ್ತು ಸಂವಹನ ನಡೆಸಲು ಸಾಮಾನ್ಯರಿಗೂ ಸಹಕಾರಿಯಾಗುವಂತೆ ಗೋಸಫಾರಿಯನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಜನರು ಎತ್ತಿನಗಾಡಿಯಲ್ಲಿ ಕುಳಿತು ಸುತ್ತಾಡುತ್ತಾ ಬೇರೆ ಬೇರೆ ತಳಿಯ ದನಗಳನ್ನು ಮತ್ತು ಅವುಗಳ ಚೆಲುವನ್ನು ವೀಕ್ಷಿಸಲು ಅನುವು ಮಾಡಿಕೊಟ್ಟಿದೆ. ಹಿಂದೆಲ್ಲಾ ಪಾರಂಪರಿಕ ಕೋಟೆಗಳು, ವಾಸ್ತು ಶಿಲ್ಪ ವೈಭವ ಮತ್ತು ಅರಮನೆಗಳಿಗೆ ಹೆಸರುವಾಸಿಯಾಗಿದ್ದ ರಾಜಸ್ಥಾನ ಈ ಯೋಜನೆಯ ಮೂಲಕ ಇಂದು ಗೋವುಗಳ ವಿಶಿಷ್ಠ ಪ್ರವಾಸೋದ್ಯಮಕ್ಕೂ ಹೆಸರುವಾಸಿಯಾಗುವಂತಾಗಿದೆ.
ಈ ಪ್ರಯೋಗವನ್ನು ಅಲ್ಲಿಯ ಹಿಂಗೌನಿಯಾ ಎಂಬ ಗೋಶಾಲೆಯಲ್ಲಿ ಅನುಷ್ಠಾನಗೊಳಿಸಲು ಎಲ್ಲ ರೀತಿಯ ಸಹಕಾರವನ್ನು ಇದರ ನೇತೃತ್ವ ವಹಿಸಿರುವ ಅಕ್ಷಯಪಾತ್ರ ಪ್ರತಿಷ್ಠಾನ ಎಂಬ ಸರ್ಕಾರೇತರ ಸಂಸ್ಥೆಗೆ ನೀಡುತ್ತಿದೆ. ಒಂದು ಕಾಲದಲ್ಲಿ ರಾಜಸ್ಥಾನ ಸರ್ಕಾರವೇ ನಡೆಸುತ್ತಿದ್ದ ಈ ಗೋಶಾಲೆಯನ್ನು 2006ರಿಂದ ಈ ಪ್ರತಿಷ್ಠಾನ ವಹಿಸಿಕೊಂಡಿದೆ. ಜೈಪುರದಿಂದ 25 ಕಿಲೋಮೀಟರ್ ದೂರದಲ್ಲಿರುವ ಈ ಗೋಶಾಲೆಯನ್ನು ಈ ಸಂಸ್ಥೆ ವಹಿಸಿಕೊಂಡ ನಂತರ ಇಲ್ಲಿಯ ಚಿತ್ರಣವೇ ಬದಲಾಗುತ್ತಿದೆ. ಗೋಶಾಲೆಯನ್ನು ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸುವ ಬೃಹತ್ ಯೋಜನೆ ಇಲ್ಲಿ ಕಾರ್ಯಗತವಾಗುತ್ತಿದೆ. ಇದರಿಂದ ಸ್ಥಳೀಯ ಒಂದಷ್ಟು ನಿರುದ್ಯೋಗಿ ಯುವಕರಿಗೆ ಉದ್ಯೋಗವು ದೊರೆಯುವಂತಾಗಿದೆ.
2016ರಲ್ಲಿ ರಾಜಸ್ಥಾನದಲ್ಲಿನ ಬಹುತೇಕ ಗೋಶಾಲೆಗಳ ಸ್ಥಿತಿ ಚಿಂತಾಜನಕವಾಗಿತ್ತು. ಇಲ್ಲಿಯ ಗೋಶಾಲೆಗಳಲ್ಲಿ ಗೋವುಗಳನ್ನು ಅತ್ಯಂತ ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ದೂರುಗಳು ಸಹ ಕೇಳಿ ಬಂದಿತ್ತು. ಈ ಸಂದರ್ಭದಲ್ಲಿ ಈ ಗೋಶಾಲೆಯು ಸಹ ಇತರೆ ಗೋಶಾಲೆಯಂತೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿತ್ತು. ಹೀಗಾಗಿ 2016ರಲ್ಲಿ ಇಲ್ಲಿ ಸಾವಿರಾರು ದನಗಳು ಸಾವನ್ನಪ್ಪಿದ್ದವು. ಆದರೂ ರಾಜಸ್ಥಾನ ಸರ್ಕಾರ ಜೈಪುರ ಮುನ್ಸಿಪಲ್ ಕಾರ್ಪೋರೇಷನ್ ಮೂಲಕ ಈ ಗೋಶಾಲೆ ಸೇರಿದಂತೆ ಸಾಕಷ್ಟು ಗೋಶಾಲೆಗಳಿಗೆ ಹಣವನ್ನು ನೀಡಿತ್ತು, ಇಂದಿಗೂ ನೀಡುತ್ತಿದೆ. ಹೀಗೆ ಹಿಂದೊಮ್ಮೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದ ಈ ಗೋಶಾಲೆ ಇಂದು ಸಂಪೂರ್ಣ ಬದಲಾವಣೆಯ ಹಂತದಲ್ಲಿದೆ. ಹಂತ ಹಂತವಾಗಿ ಈ ಗೋಶಾಲೆಯನ್ನು ನವೀಕರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದರೊಂದಿಗೆ ಒಂದಷ್ಟು ಹೊಸ ಪ್ರಕ್ರಿಯೆಗಳಿಗೆ ಒತ್ತು ನೀಡುವ ಮೂಲಕ ಪ್ರವಾಸಿಗರನ್ನು ಸೆಳೆಯುವ ಕೆಲಸ ಮತ್ತು ಹಿಂದೆ ಈ ಗೋಶಾಲೆಗೆ ಇದ್ದ ಕಳಂಕವನ್ನು ಸಂಪೂರ್ಣ ತೊಡೆದುಹಾಕುವ ಕಾರ್ಯ ಇಲ್ಲಿ ಭರದಿಂದ ಸಾಗುತ್ತಿದೆ.
ಈ ನಿಟ್ಟಿನಲ್ಲಿ ಪ್ರಾರಂಭವಾಗಿರುವುದೇ ಗೋಸಫಾರಿ ಎಂಬ ಒಂದು ವಿಶಿಷ್ಟ ಪ್ರಯೋಗ. ಇದರಲ್ಲಿ ವಿಶೇಷವಾಗಿ ಸಿದ್ಧಪಡಿಸಿ ಸಿಂಗರಿಸಲ್ಪಟ್ಟ ಎತ್ತಿನಗಾಡಿಯಲ್ಲಿ ಜನರು ಕುಳಿತು ಇಲ್ಲಿಯ ಸಂಪೂರ್ಣ ಚಟುವಟಿಕೆಯನ್ನು ವೀಕ್ಷಿಸಬಹುದಾಗಿದೆ. ವಿಶೇಷವಾಗಿ ಇಲ್ಲಿಯ ಗೋಸಂಪತ್ತಿನ ಗಮಲನ್ನು ಆಘ್ರಾಣಿಸಬಹುದಾಗಿದೆ. ಇಲ್ಲಿರುವ ಗೋವುಗಳ ಪಾಲನೆ ಪೋಷಣೆಯನ್ನು ಕುಳಿತೇ ವೀಕ್ಷಿಸುವ ಸುವರ್ಣ ಅವಕಾಶವನ್ನು ಬಂದಂತ ಪ್ರವಾಸಿಗರಿಗೆ ಮತ್ತು ಗೋಪ್ರೇಮಿಗಳಿಗೆ ಒದಗಿಸಲಾಗಿದೆ. ಹಾಗೆಯೇ ಕೇಂದ್ರ ಪ್ರವಾಸೋದ್ಯಮ ಇಲಾಖೆಯೊಂದಿಗೆ ರಾಜ್ಯ ಸರ್ಕಾರ ಒಡಂಬಡಿಕೆಯನ್ನು ಮಾಡಿಕೊಂಡು ಜಾರಿಗೆ ತಂದ ಈ ಯೋಜನೆ ಸಂಪೂರ್ಣ ಉಚಿತವಾಗಿರಲಿದೆ.
ಸುಮಾರು 12 ಎಕರೆ ಪ್ರದೇಶದಲ್ಲಿ ಕಳೆದ ವರ್ಷ ಕೃಷ್ಣ ಜನ್ಮಾಷ್ಟಮಿಯಂದು ಈ ಸಫಾರಿಗೆ ಚಾಲನೆಯನ್ನು ನೀಡಲಾಗಿದೆ. ಈ ಸಫಾರಿಯು ಇಲ್ಲಿಯ ಪ್ರಕೃತಿ ಸಹವಾಗಿರುವ ನೀರಿನ ಕೊಳಗಳು, ಗುಡ್ಡ, ಬಯಲುಗಳ ನಡುವೆ ಆಯ್ದ ಪಥಗಳಲ್ಲಿ ಸಂಚರಿಸಲಿದೆ. ಸುಮಾರು ಮೂರು ಎತ್ತಿನ ಗಾಡಿಗಳನ್ನು ಆರಂಭಿಕ ಹಂತದಲ್ಲಿ ಈ ಉದ್ದೇಶಕ್ಕೆಂದೇ ನಿಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆಯಂತೆ. ಈ ಗೋಶಾಲೆಯಲ್ಲಿ ಸುಮಾರು 22,000ಕ್ಕೂ ಹೆಚ್ಚಿನ ಗೋವುಗಳಿದ್ದು, ಅವುಗಳಲ್ಲಿ ಗೀರ್, ಕೆಂಪು ಸಿಂಧಿ, ನಗೌರಿ ಮತ್ತು ಥಾರ್ಪಾಕರ್ ತಳಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆರಂಭಿಕ ಹಂತದಲ್ಲಿ ಸುಮಾರು 10ಕ್ಕೂ ಹೆಚ್ಚು ವಿವಿಧ ದೇಶಿ ತಳಿಯ 200 ರಿಂದ 3೦೦ ಗೋತಳಿಗಳನ್ನು ಸಫಾರಿ ಪ್ರದೇಶದಲ್ಲಿ ಬಿಡಲಾಗಿದೆ ಎಂದು ಯೋಜನೆಯ ಸಮನ್ವಯಕಾರರಾದ ರಾಧಾ ಪ್ರಿಯದಾಸ್‌ರವರು ಹೇಳಿದ್ದಾರೆ.
ಬರೀ ಸಫಾರಿಗಷ್ಟೇ ಸೀಮಿತವಾಗದೆ ಇಲ್ಲಿಗೆ ಬಂದವರಿಗೆಂದೇ ಹತ್ತು ಹಲವು ವಿವಿಧ ಸವಲತ್ತುಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಸುರಕ್ಷತೆಯ ದೃಷ್ಠಿಯಿಂದ ಸುತ್ತಲೂ ಇರುವ ಅರಣ್ಯಕ್ಕೆ ಗೋಡೆಯನ್ನು ಕಟ್ಟಿ ಕಾಡು ಪ್ರಾಣಿಗಳು ಬರದಂತೆ ತಡೆಯಲಾಗಿದೆ. ಬಂದಂತ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಮಚ್ಚನ್ ಎಂದು ಕರೆಯಲಾಗುವ ಟ್ರೀ ಹೌಸ್ ಅಂದರೆ ಮರಗಳ ಮೇಲೆ ತಂಗಲು ಗುಡಿಸಲುಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ರಾತ್ರಿ ಸಹ ತಂಗಲು ವ್ಯವಸ್ಥೆಯನ್ನು ಮಾಡಲಾಗಿದ್ದು, ಇಂತಿಷ್ಟು ಶುಲ್ಕವನ್ನು ಪಾವತಿಸಬೇಕಾಗಿದೆ. ಇದನ್ನು ಹೊರತುಪಡಿಸಿ ಬೇರೆಡೆ ತಂಗಲು ಇಚ್ಚಿಸಿದವರಿಗೂ ಈ ಬೃಹತ್ ಗೋಶಾಲೆಯಲ್ಲಿ ಹಲವು ವ್ಯವಸ್ಥೆಯನ್ನು ಮಾಡಲಾಗಿದೆ.
ವಿಶೇಷವೆಂದರೆ ಗೋಪ್ರೇಮಿಗಳು ಗೋವುಗಳೊಂದಿಗೆ ಮಲಗಲು ಕೂಡ ಇಲ್ಲಿ ವ್ಯವಸ್ಥೆ ಇದೆಯಂತೆ. ಇದರೊಂದಿಗೆ ಅಲ್ಲಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ತಂಗಲು ಬದಲಾವಣೆ ಬಯಸುವವರಿಗೂ ವ್ಯವಸ್ಥೆಯನ್ನು ಮಾಡಲಾಗಿದೆಯಂತೆ. ಮುಖ್ಯವಾಗಿ ಗೋಶಾಲೆಯಲ್ಲಿಯೇ ಸಿಗುವ ಹಾಲು, ತುಪ್ಪ, ರಾಬ್ರಿ, ಲಸ್ಸಿ ಮತ್ತು ಹಾಲಿನಿಂದ ಮಾಡಿದ ಹಲವು ಭಕ್ಷ್ಯಗಳನ್ನು ಉಚಿತವಾಗಿ ಸೇವಿಸುವ ಅವಕಾಶವು ಸಹ ಬಂದಂತ ಎಲ್ಲಾ ಪ್ರವಾಸಿಗರಿಗೂ ಇರಲಿದೆಯಂತೆ. ಈ ಎಲ್ಲಾ ಸೌಕರ್ಯಗಳು ಇಲ್ಲಿಗೆ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಸಹಕಾರಿಯಾಗಿದೆ ಎನ್ನಲಾಗಿದೆ.
ಇದರೊಂದಿಗೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿಯ ಗೋವುಗಳೊಂದಿಗೆ ಒಂದಷ್ಟು ಸಮಯವನ್ನು ಕಳೆಯಬಹುದಾಗಿದೆ. ಗೋವುಗಳಿಗೆ ಮಸಾಜ್ ಮಾಡಿಕೊಂಡು ಅವುಗಳೊಂದಿಗೆ ಅಪ್ಯಾಯತೆಯಿಂದ ಇರಲು ಅನುವು ಮಾಡಿಕೊಡಲಾಗಿದೆ. ಹೀಗೆ ಇವುಗಳನ್ನು ಆರೈಕೆ ಮಾಡುವುದರೊಂದಿಗೆ ಅವುಗಳನ್ನು ದತ್ತು ತೆಗೆದುಕೊಳ್ಳಲು ಸಹ ಅವಕಾಶವನ್ನು ಕಲ್ಪಿಸಲಾಗಿದೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಇಚ್ಚಿಸಿದ್ದಲ್ಲಿ ಗೋವುಗಳಿಗೆ ಮೇವನ್ನು ಸಹ ಪ್ರವಾಸಿಗರು ನೀಡಬಹುದು. ಅಲ್ಲಲ್ಲಿ ಬಿದ್ದ ಸಗಣಿಯನ್ನು ತೆಗೆಯುವ ಮೂಲಕ ಮತ್ತು ಕೊಟ್ಟಿಗೆಯನ್ನು ಸ್ವಚ್ಛಗೊಳಿಸುವ ಮೂಲಕ ಅದರ ಸೇವೆಯನ್ನು ಮಾಡಬಹುದು. ಇಷ್ಟವಾದಲ್ಲಿ ಅಲ್ಲಿಯ ಪುಟ್ಟ ಪುಟ್ಟ ಕರುಗಳಿಗೆ ಬಾಟಲಿಯ ಮೂಲಕ ಹಾಲುಣಿಸಬಹುದು. ಹೀಗೆ ಗೋವಿನ ಸೇವೆ ಮಾಡಚ್ಚಿಸುವವರಿಗೆಂದೇ ಹತ್ತು ಹಲವು ಯೋಜನೆಗಳನ್ನು ಇಲ್ಲಿ ರೂಪಿಸಲಾಗಿದೆ.
ಬಹು ಮುಖ್ಯ ಅಂಶವೆಂದರೆ ಈ ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರು ಗೋವಿಗೆ ನೀಡುವ ಅನುದಾನದಲ್ಲಿ ಬೇರೆ ರಾಜ್ಯಗಳಲ್ಲಾಗುವಂತೆ ತಾರತಮ್ಯವಾಗಿಲ್ಲ. ದೇಶದ ಬೇರೆ ಎಲ್ಲಾ ರಾಜ್ಯಗಳಿಗೆ ಹೋಲಿಸಿದ್ದಲ್ಲಿ ರಾಜಸ್ಥಾನ ಅಂದಿನಿಂದ ಅತಿ ಹೆಚ್ಚಿನ ಅನುದಾನವನ್ನು ಗೋಶಾಲೆಗಳಿಗೆ ಮತ್ತು ಗೋವುಗಳಿಗೆ ನೀಡುತ್ತಾ ಬಂದಿದೆ. ದೇಶದಲ್ಲೇ ಅತಿ ಹೆಚ್ಚು ಗೋವಂಶವನ್ನು ಹೊಂದಿರುವ ಈ ರಾಜ್ಯ ತನ್ನಲ್ಲಿನ ಪ್ರತಿಯೊಂದು ಗೋಶಾಲೆಯಲ್ಲಿರುವ ಪ್ರತಿಯೊಂದು ಗೋವಿಗೂ ಪ್ರತಿ ದಿನ ಇಂತಿಷ್ಟು ಎಂಬುದಾಗಿ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಒಂದು ಸಮೀಕ್ಷೆಯಂತೆ ರಾಜಸ್ಥಾನದಲ್ಲಿ ಸರಿ ಸುಮಾರು ಒಂದು ಕೋಟಿ 30 ಲಕ್ಷ ಗೋವುಗಳಿವೆ ಎಂದು ಹೇಳಲಾಗಿದೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ಗೋವುಗಳು ರೈತರ ಬಳಿ ಆಶ್ರಯ ಪಡೆದಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ರಾಜಸ್ಥಾನ ಕೈಗೊಂಡಿರುವ ಈ ವಿಶಿಷ್ಟ ಪ್ರಯೋಗ ಭಾರತ ದಲ್ಲೇ ಮೊದಲು ಎಂಬುದಂತು ಸತ್ಯ. ಹೀಗೆ ಜನರಿಗೆ ಗೋವುಗಳ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಅವುಗಳ ಮಹತ್ವವನ್ನು ಸಾರುವಲ್ಲಿ ಸರ್ಕಾರವೇ ಮುಂದು ನಿಂತು ಕೆಲಸ ಮಾಡುತ್ತಿರುವುದು ವಿಶೇಷ. ಒಂದು ಮಾತಲ್ಲಿ ಹೇಳುವುದಾದರೆ ಇಂತಹ ಒಂದಷ್ಟು ವಿಶಿಷ್ಠ ಯೋಜನೆಗಳಿಂದ ಜನರಿಗೆ ಗೋವುಗಳ ಬಗ್ಗೆ ಶಿಕ್ಷಣ ನೀಡುವ ಉದ್ದೇಶ ಈ ಗೋಶಾಲೆಯ ಸಂಘಟಕರಿ ಗಿರುವುದಂತೂ ಸ್ಪಷ್ಟವಾಗಿದೆ. ಇಂತಹ ಇನ್ನಷ್ಟು ಪ್ರಯೋಗಗಳು ಯಶಸ್ವಿಯಾಗಿ ನಡೆದು, ದೇಶದೆಲ್ಲೆಡೆ ಗೋಸಂತತಿ ಉಳಿಯುವಂತಾಗಲಿ.
( ಕೆ.ಎನ್. ಶೈಲೇಶ್ ಹೊಳ್ಳ)
ರಾಜ್ಯದಲ್ಲಿ ನಂದಿನಿ ಹಾಲು, ಮೊಸರು ಹಾಗೂ ವಿದ್ಯುತ್ ದರ ದುಬಾರಿಯಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490.
ಒಂದು ದೇವಸ್ಥಾನದ ಎಂದರೆ ಶ್ರದ್ಧೆಯ ಕೇಂದ್ರ, ಒಂದು ಊರಿನ ದೇವಸ್ಥಾನ ಎಂದರೆ ಸೌಹಾದರ್ತೆಯ…
ಏಪ್ರಿಲ್ 3 ಹಾಗೂ 4 ರಂದು ಕರಾವಳಿ ಹಾಗೂ ಉತ್ತರ ಮತ್ತು ದಕ್ಷಿಣ…
ಮಿಜೋರಾಂನ ಚಂಫೈ ಜಿಲ್ಲೆಯ ಕಾಡಿನಲ್ಲಿ ದಾಸ್ತಾನು ಇರಿಸಿದ್ದ 321 ಚೀಲ ಅಡಿಕೆಯನ್ನು ಅಸ್ಸಾಂ…