ಕೃಷಿಕರು ಹಾಗೂ ಅಡಿಕೆ ಬೆಳೆಗಾರರು ಅನೇಕ ಸಮಸ್ಯೆಗಳಿಂದ ಇಂದು ಹತಾಶರಾಗಿದ್ದಾರೆ. ಅವರ ಬಗ್ಗೆ ಸಂಸತ್‍ನಲ್ಲಿ ಧ್ವನಿ ಎತ್ತುವುದಲ್ಲದೆ ರೈತರು ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭ ಸದಸ್ಯ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಗುರುವಾರ ಧರ್ಮಸ್ಥಳದಲ್ಲಿ ವಸಂತಮಹಲ್ ಬಳಿ ರಾಜ್ಯಸಭಾ ಸದಸ್ಯರ ಅಧಿಕೃತ ಕಾರ್ಯಾಲಯದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನರ ಸಮಸ್ಯೆಗಳಿಗೆ ಸೃಜನಾತ್ಮಕ ಪರಿಹಾರ ಕ್ರಮಗಳನ್ನು ವ್ಯವಸ್ಥಿತವಾಗಿ ಚಾಚೂ ತಪ್ಪದೆ ಮಾಡಲಾಗುತ್ತದೆ. ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಸರಿಯಾಗಿ ಸ್ಪಂದಿಸಿ ಸೃಜನಾತ್ಮಕಪರಿಹಾರ ಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದು ಧರ್ಮಸ್ಥಳದ ಹೆಗ್ಗಳಿಕೆಯಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಹಾಗೂ ರಾಜ್ಯದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದ ತನ್ನ ಯೋಚನೆಗಳನ್ನು ಹಾಗೂ ಯೋಜನೆಗಳನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಿಸಲಾಗುವುದು ಎಂದರು. ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯದಲ್ಲಿ ಏಳು ಸಾವಿರ ಸಾಮಾನ್ಯ ಸೇವಾ ಕೇಂದ್ರಗಳನ್ನು ಈಗಾಗಲೆ ಪ್ರಾರಂಭಿಸಿದ್ದು ಜನಸಾಮಾನ್ಯರಿಗೆ ಆಧಾರ್ ಕಾರ್ಡ್, ಆರೋಗ್ಯ ವಿಮೆ, ನೆರೆ-ಬರ ಪರಿಹಾರ, ಕೂಲಿ ಕಾರ್ಮಿಕರಿಗೆ ಇ-ಶ್ರಮಕಾರ್ಡ್, ಆಯುಷ್ಮಾನ್ ಕಾರ್ಡ್ ಮೊದಲಾದ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗಿದೆ ಎಂದರು.
ರಾಜ್ಯಸಭಾ ಸದಸ್ಯನಾದರೂ ತನ್ನಆಹಾರ-ವಿಹಾರ, ಆಚಾರ-ವಿಚಾರ, ಧರಿಸುವ ಧಿರಿಸು, ಶಿಷ್ಟಾಚಾರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ತಾನು ಎಂದಿನಂತೆ ಜನಸಾಮಾನ್ಯರ ಮಧ್ಯೆ ಪ್ರೀತಿ-ವಿಶ್ವಾಸ ಗೌರವದಿಂದ ಇರುತ್ತೇನೆ. ಪಕ್ಷಾತೀತನಾಗಿ, ರಾಜಕೀಯ ರಹಿತವಾಗಿ ದೇಶ ಸೇವೆ ಮಾಡುವುದಾಗಿ ಹೆಗ್ಗಡೆಯವರು ಭರವಸೆ ನೀಡಿದರು.ಎಲ್ಲಿಯೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಕಾರ್ಯಾಲಯವನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ ಮಾತನಾಡಿ, ರಾಜ್ಯ ಸಭೆಯು ಹಿರಿಯ ಹಾಗೂ ಅನುಭವಿ ಸದಸ್ಯರ ವೇದಿಕೆಯಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರೆ ಹೆಗ್ಗಡೆಯವರ ಸೇವೆ, ಸಾಧನೆ ಮತ್ತು ವರ್ಚಸ್ಸನ್ನು ಗಮನಿಸಿ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿದ್ದಾರೆ. ಸಾಮಾನ್ಯವಾಗಿ ಸಂಸದರ ಕಾರ್ಯಾಲಯ ಜಿಲ್ಲಾ ಕೇಂದ್ರದಲ್ಲಿಯೂ, ಶಾಸಕರ ಕಾರ್ಯಾಲಯ ತಾಲೂಕು ಕೇಂದ್ರದಲ್ಲಿಯೂ ಇರುತ್ತದೆ. ಆದರೆ, ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಸದರ ಕಾರ್ಯಾಲಯ ಆರಂಭವಾಗಿರುವುದು ದೇಶದಲ್ಲೆಇದು ಪ್ರಥಮ ಹಾಗೂ ಐತಿಹಾಸಿಕ ಘಟನೆಯಾಗಿದೆ ಎಂದರು.
ಧರ್ಮಸ್ಥಳ ದಲ್ಲಿ ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಕಚೇರಿ ಉದ್ಘಾಟನೆ | ಕೃಷಿಕರ, ಗ್ರಾಮೀಣ ಜನರ ಧ್ವನಿಯಾಗುವೆ ಎಂದ ಡಾ.ವೀರೇಂದ್ರ ಹೆಗ್ಗಡೆ | #ಧರ್ಮಸ್ಥಳ #dharmasthala #veerendraheggade #rajyasabhamp pic.twitter.com/PLYDv0R8A5
Advertisement— theruralmirror (@ruralmirror) August 11, 2022
ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಸಮಾಜ ಸೇವೆಯೇ ದೇವರ ಸೇವೆ ಎಂದು ಭಾವಿಸಿ ಜನತಾ–ಜನಾರ್ದನ ಸೇವೆ ಮಾಡಿದ ಹೆಗ್ಗಡೆಯವರಿಗೆ ರಾಜ್ಯಸಭಾ ಸದಸ್ಯ ಸ್ಥಾನ ಅತ್ಯಂತ ಗೌರವ ಪೂರ್ವಕವಾಗಿ ದೊರಕಿದೆ.ರಾಜ್ಯ ಸಭೆಯು ಹಿರಿಯರ, ಅನುಭವಿಗಳ ಹಾಗೂ ತಜ್ಞರ ವೇದಿಕೆಯಾಗಿದ್ದು ಸಮಗ್ರ ದೇಶದ ಅಭಿವೃದ್ಧಿಯೇ ಅದರ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ. ಹರೀಶ್‍ಕುಮಾರ್ ಶುಭಾಶಂಸನೆ ಮಾಡಿ ಹೆಗ್ಗಡೆಯವರು ರಾಜ್ಯಸಭಾ ಸದಸ್ಯರಾಗಿರುವುದರಿಂದ ರಾಜ್ಯಸಭೆಗೆ ವಿಶೇಷ ಶೋಭೆ ಬಂದಿದೆ. ಶ್ರೀ ಮಂಜುನಾಥ ಸ್ವಾಮಿಯ ಪ್ರತಿನಿಧಿಯಾದ ಹೆಗ್ಗಡೆಯವರಿಗೆ ಸರ್ವ ರೀತಿಯ ಯಶಸ್ಸು ದೊರಕಲೆಂದು ಅವರು ಹಾರೈಸಿದರು.