ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ದೇವತೋಪಾಸನೆ, ತಪಸ್ಸು, ಸಚ್ಚಿಂತನೆ, ಕಾರ್ಯಾನ್ವಯದ ಉದ್ದೇಶದಿಂದ ಶಿಷ್ಯಭಕ್ತರು ಸುಮಾರು ಐದು ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಅಶೋಕೆಯಲ್ಲಿ ನಿರ್ಮಿಸಿರುವ ವಿಶಿಷ್ಟ ‘ಸೇವಾಸೌಧ’ ಸಮರ್ಪಣಾ ಸಮಾರಂಭ ಶನಿವಾರ ನಡೆಯಲಿದೆ
ರಾಘವೇಶ್ವರಭಾರತೀ ಶ್ರೀಗಳ ಸಾನ್ನಿಧ್ಯದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯುವ ಸಮರ್ಪಣಾ ಸಮಾರಂಭದಲ್ಲಿ ಕೊಯಮತ್ತೂರಿನ ಶ್ರೀ ಚಂದ್ರಶೇಖರ ಭಾರತೀ ಚಂದ್ರಶೇಖರ ಸರಸ್ವತಿ ವೇದಪಾಠಶಾಲೆಯ ಮುಖ್ಯಸ್ಥರಾದ ವೇದಬ್ರಹ್ಮ ಶ್ರೀ ಜಂಬೂನಾಥ ಘನಪಾಠಿಗಳು, ತಿರುವನಂತಪುರಂ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ನಾರಾಯಣ ಪಟ್ಟೇರಿ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಟಿಟಿಡಿ ಮಂಡಳಿ ಅಧ್ಯಕ್ಷ ವೈ,ವಿ.ಸುಬ್ಬಾರೆಡ್ಡಿ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸುವರು ಎಂದು ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು ವಿವರ ನೀಡಿದ್ದಾರೆ.
ರಾಜ್ಯ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತ ಕುಮಾರ್ ಹೆಗಡೆ, ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಿವರಾಮ ಹೆಬ್ಬಾರ್, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ದಿನಕರ ಶೆಟ್ಟಿ, ಸುನೀಲ್ ನಾಯಕ್, ರೂಪಾಲಿ ನಾಯಕ್ ಮತ್ತಿತರ ಗಣ್ಯರು ಈ ಅಪೂರ್ವ ಸಮಾರಂಭಕ್ಕೆ ಸಾಕ್ಷಿಗಳಾಗಲಿದ್ದಾರೆ.ಅಗಸ್ತ್ಯರಿಂದ ಪೂಜಿತವಾದ, ವರದ ಮುನಿಗಳು ನೀಡಿದ ಅಶೋಕೆಯಲ್ಲಿ ಶ್ರೀ ಶಂಕರಾಚಾರ್ಯರಿಂದ ಅನುಗ್ರಹಿಸಲ್ಪಟ್ಟ, ವೀರಪರಂಪರೆಯ ಎಲ್ಲ ಪೀಠಾಧಿಪತಿಗಳಿಂದ ಪ್ರತಿದಿನ ಸೇವೆ ಸ್ವೀಕರಿಸುತ್ತಿರುವ ಶ್ರೀರಾಮದೇವರಿಗೆ ಅಶೋಕೆಯಲ್ಲಿ ಪ್ರಥಮ ಬಾರಿಗೆ ಸಾಮ್ರಾಜ್ಯ ಪಟ್ಟಾಭಿಷೇಕವನ್ನೂ ನೆರವೇರಿಸಲಾಯಿತು. ಶ್ರೀಕರಾರ್ಚಿತ ಶ್ರೀಚಂದ್ರಮೌಳೀಶ್ವರ ದೇವರಿಗೆ 56 ಭಕ್ಷ್ಯಗಳ ನೈವೇದ್ಯ ಮತ್ತು 108 ದ್ರವ್ಯಗಳಿಂದ ವಿಶೇಷ ಅಭಿಷೇಕ ಮೆರವೇರಿತು.
ನಾಲ್ಕು ಗಿನಿಸ್ ದಾಖಲೆಗಳ ವೀರ, ಮೃದಂಗ ಮಾಂತ್ರಿಕ ಡಾ.ಕುನ್ನಂಕುಳಂ ಡಾ.ರಾಮಕೃಷ್ಣನ್ ಮತ್ತು ಯೋಗೀಶ್ ಶರ್ಮಾ ಅವರ ಸಂಗೀತ ಕಾರ್ಯಕ್ರಮವೂ ಇರುತ್ತದೆ. ಅನೂಪ್ (ವಯಲಿನ್), ಗೋವಿಂದ ಪ್ರಸಾದ್, ಉಣ್ಣಿಕೃಷ್ಣನ್ ಕಾಸರಗೋಡು ಜಿಲ್ಲೆ ಪೆರಿಯಾ ನಾಗರತ್ನ ಹೆಬ್ಬಾರ್ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ, ಕುಮಾರಿ ರಚಿತಾ ತಂಡದಿಂದ ಭರತನಾಟ್ಯ ವೈಭವ ನಡೆಯಲಿದೆ.