ಸಜ್ಜನರ ಸಮಾಧಾನ, ಕ್ಷಮೆ, ಸರಳತೆಯನ್ನು ಎಂದೂ ಅವರ ಅಸಾಮಥ್ರ್ಯ, ದೌರ್ಲಲ್ಯ ಎಂದು ಭಾವಿಸಬಾರದು; ಏಕೆಂದರೆ ಅವರ ಸಿಟ್ಟು ಲೋಕದ ಪಾಲಿಗೆ ಅಷ್ಟೇ ಕಂಟಕ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅವರು ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಐದು ದಿನಗಳ ‘ಸಾಗರಸೇತು’ ರಾಮಕಥಾ ಸರಣಿಯ ಮಂಗಲ ಪ್ರವಚನ ಅನುಗ್ರಹಿಸಿದ ಅವರು, ಸಿಟ್ಟು ನಮ್ಮ ವಿವೇಕವನ್ನು ಹಾಳು ಮಾಡುತ್ತದೆ. ಸಿಟ್ಟು ಶಿವನ ಸೃಷ್ಟಿ. ಅದು ನಮ್ಮ ಕೈಯಲ್ಲಿದ್ದರೆ ಗುಣ. ಆದರೆ ಸಿಟ್ಟಿನ ಕೈಯಲ್ಲಿ ನಾವಿದ್ದರೆ ಅದು ದೋಷವಾಗುತ್ತದೆ. ರಾಮ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾದಾಗ ಒಂದು ಯೋಜನದಷ್ಟು ಹಿಂದೆ ಸರಿದು ಸಮುದ್ರರಾಜ ಎದ್ದು ಬಂದಾಗ, ರಾಮನ ಸಿಟ್ಟಿನ ನಡುವೆಯೂ ವಿವೇಕ, ದಯೆ, ಕಾರುಣ್ಯ ಪ್ರಕಟವಾಯಿತು ಎಂದು ಬಣ್ಣಿಸಿದರು.
ರಾಮನ ಮಹತ್ಕಾರ್ಯಕ್ಕಾಗಿ ಸಮುದ್ರ ತನ್ನ ಸಹಜ ಸ್ವಭಾವವಾದ ಅಗಾಧತೆಯನ್ನೂ ಕೈಬಿಡುವಂತಾಗುತ್ತದೆ. ಶರಣಾಗತರ ಪರಿಪಾಲನೆ ರಾಮನ ಧರ್ಮ. ಇದರಿಂದ ಗುರಿ ಇಟ್ಟ ಬ್ರಹ್ಮಾಸ್ತ್ರವನ್ನೂ ಸಮುದ್ರನ ಮೇಲೆ ಪ್ರಯೋಗಿಸದೇ ಸಮುದ್ರರಾಜನ ಮನವಿಯಂತೆ ದಸ್ವಿಗಳ ಮೇಲೆ ಪ್ರಯೋಗಿಸಿದ್ದು, ರಾಮನ ಕ್ಷಮಾಗುಣಕ್ಕೆ ಸಾಕ್ಷಿ ಎಂದು ಹೇಳಿದರು. ಸಜ್ಜನರ ಸಮಾಧಾನ, ಕ್ಷಮೆ, ಸರಳತೆ, ಹಿತವಚನ ದುಷ್ಟರ ಮುಂದೆ ಅಸಾಮಥ್ರ್ಯ, ದೌರ್ಲಬ್ಯ ಎನಿಸಿಕೊಳ್ಳುತ್ತದೆ. ಒಳ್ಳೆಯತನಕ್ಕೆ ಲೋಕ ಬೆಲೆ ಕೊಡುವುದಿಲ್ಲ. ಸಾಮ, ದಾನ, ಬೇಧ, ದಂಡದಲ್ಲಿ ದಂಡವೇ ಒಳ್ಳೆಯದು ಎಂದು ಕೆಲವೊಮ್ಮೆ ದೇವರಿಗೂ ಅನಿಸುತ್ತದೆ ಎಂದು ಸಮುದ್ರರಾಜನ ಮೇಲೆ ರಾಮನಿಗೆ ಕೋಪ ಪ್ರಕಟವಾದ ಸಂದರ್ಭವನ್ನು ಉದಾಹರಿಸಿದರು. ಸಾಗರದ ಉಪಾಸನೆ ಮಾಡಿ ಸಾಮದಿಂದ ಲಂಕೆಗೆ ದಾರಿ ಕೊಡುವಂತೆ ಮನವಿ ಮಾಡೋಣ ಎನ್ನುವುದು ವಿಭೀಷಣನ ಸಲಹೆ. ಅದರಂತೆ ದರ್ಬೆಯಲ್ಲಿ ಪವಡಿಸಿದ ಪ್ರಭು ರಾಮಚಂದ್ರ ಉಪಾಸನೆ ಮಾಡುವ ಜಾಗೃತ ಸ್ಥಿತಿಯಲ್ಲಿದ್ದಾನೆ. ಸಾಗರ ತರಣ ಅಥವಾ ಇಲ್ಲಿಯೇ ಮರಣ ಎಂಬ ದೃಢಸಂಕಲ್ಪದಿಂದ ಶ್ರೀರಾಮ ಪವಡಿಸಿದ್ದ. ಒಂದೇ ಗುರಿ, ಒಂದೇ ಸಂಕಲ್ಪ ಎನ್ನುವುದು ರಾಮನ ವಿಶೇಷ. ಸಂಪೂರ್ಣ ಮನಸ್ಸು ಶರೀರವನ್ನು ಸಂಯಮದಿಂದ ಇರಿಸಿ ಪವಡಿಸಿದ. ಮೂರು ರಾತ್ರಿ ಹೀಗೆಯೇ ಕಳೆಯಿತು. ಆದರೂ ಸಮುದ್ರ ಮಂದ ಬುದ್ಧಿಯಿಂದಾಗಿ ದರ್ಶನ ನೀಡಲಿಲ್ಲ ಎಂದು ಕಥಾ ಸಾರ ವಿವರಿಸಿದರು. ಆತ್ಮಪ್ರಶಂಸೆ ಮಾಡಿಕೊಳ್ಳುವುದು ಲೋಕದಲ್ಲಿ ಕೆಲವರ ಚಪಲತೆ. ದುಷ್ಟರು, ದೃಷ್ಟರಿಗೆ ಲೋಕ ಮರ್ಯಾದೆ ನೀಡುತ್ತದೆ.ಸಾಮ ಮಾರ್ಗದಲ್ಲಿ ಕೀರ್ತಿ, ಯಶಸ್ಸು, ಜಯ ಇಲ್ಲ ಎಂದು ಲಕ್ಷ್ಮಣನಿಗೆ ಹೇಳುತ್ತಾ, ತನ್ನ ಬಾಹುಬಲದಿಂದ ಸಮುದ್ರವನ್ನೇ ಒಣಗಿಸುತ್ತೇನೆ ಎಂಬ ನಿರ್ಧಾರಕ್ಕೆ ಬರುತ್ತಾನೆ. ಅಕ್ಷೋಭ್ಯ ಎನಿಸಿದ ಸಮುದ್ರ ಇಂದು ಕ್ಷೋಭೆಗೆ ಒಳಗಾಗುತ್ತದೆ ಎಂದು ಹೇಳಿ ಕೋದಂಡವನ್ನು ಹಿಡಿದು ರಾಮ ಯಮರೂಪ ತಳೆದು ಪ್ರಳಯ ಕಾಲದ ಅಗ್ನಿಯಂತೆ ಕಂಗೊಳಿಸಿದ. ಕ್ರೋಧದಿಂದ ಜಗತ್ತನ್ನೇ ನಡುಗಿಸಿ ಉಗ್ರ ಬಾಣಗಳನ್ನು ಪ್ರಯೋಗಿಸುತ್ತಾನೆ. ಕೊನೆಗೆ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾಗುತ್ತಾನೆ ಎಂದು ಹೇಳಿದರು.
ಲೋಕದಲ್ಲಿ ಏಕೈಕ ಸಾಗರಸೇತು ನಿರ್ಮಿಸಿದ ಶ್ರೀರಾಮ ಸೇತು ನಿರ್ಮಾಣ ಚತುರ. ಪ್ರಭು ರಾಮಚಂದ್ರ ನಮ್ಮ ನಿಮ್ಮ ನಡುವೆ ಧರ್ಮಸೇತುವೆ ನಿರ್ಮಿಸುವಂತಾಗಲಿ ಎಂದು ಆಶಿಸಿದರು.

Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

