ಅವನು ರಾಮು……!

October 13, 2020
9:37 PM
ಅಂದು ನಾನು ಚಿಕ್ಕವಳಾಗಿದ್ದೆ. ಅಜ್ಜಿಯ ಮಡಿಲಲ್ಲಿ ಮಲಗಿ ಕಥೆಗಳನ್ನು ಆಲಿಸುತ್ತಿದ್ದ ಸಮಯವದು. ನಮ್ಮನೆಯಲ್ಲಿ ಬೆಕ್ಕು ನಾಯಿ ದನ ಎಂದರೆ ಬಲು ಪ್ರೀತಿ. ಎಲ್ಲರೂ ಪ್ರಾಣಿ ಪ್ರಿಯರು.ನನ್ನ ಮನಸ್ಸಿಗೆ ಎಷ್ಟೋ ಬಾರಿ ಅನಿಸಿದುಂಟು ನಾನು ಪ್ರಾಣಿಯಾಗಿ ಹುಟ್ಟಬೇಕಿತ್ತು. ಆ ರೀತಿಯ ಪ್ರೀತಿ ಆ ಪ್ರಾಣಿಗಳಿಗೆ ಸಿಗುತ್ತಿತ್ತು.
ಹೀಗೆ ಒಂದು ದಿನ ಅಂಗಳದಲ್ಲಿ ಆಟವಾಡುತ್ತಿದ್ದಾಗ ಅಲ್ಲೇ ಸಮೀಪದಲ್ಲಿದ್ದ ತೆಂಗಿನಮರವನ್ನು ಏರುತ್ತಾ ಇಳಿಯುತ್ತಾ ಆಟವಾಡುತ್ತಿದ್ದ ಪುಟ್ಟ ಅಳಿಲಿನ ಮರಿಗಳು ನನ್ನ ಕಣ್ಣಿಗೆ ಬಿದ್ದವು.ಅದೇಕೋ ಗೊತ್ತಿಲ್ಲ ನನಗದು ಬೇಕೆನಿಸಿತು.ಅದರ ಬಾಲದಲ್ಲಿರುವ ರೇಷ್ಮೆ ಯಂತ ಕೂದಲಿನಿಂದ ನನ್ನ ಕೆನ್ನೆಯನ್ನೊಮ್ಮೆ ಸವರಿಕೊಳ್ಳಬೇಕೆನಿಸಿತು. ಬೆನ್ನ ಮೇಲಿರುವ ಗೆರೆಯ ಮೇಲೆ ನನ್ನ ಬೆರಳುಗಳಿಂದ ಗೆರೆಯೆಳೆಯಬೇಕೆನಿಸಿತು.
ಮನೆಯ ಚಿಟ್ಟೆಯ ಮೇಲೆ ಪೇಪರ್ ಓದುತ್ತಾ ಕುಳಿತ್ತಿದ್ದ ಅಪ್ಪನ ಬಳಿ ಓಡಿ ” ಅಪ್ಪಾ , ನನಗೆ ಆ ಅಳಿಲ ಮರಿಯನ್ನು ಹಿಡಿದುಕೊಡಿ. ಅದರೊಂದಿಗೆ ನಾನು ಆಟವಾಡಬೇಕು , ಅದನ್ನು ನಾನು ಮುದ್ದಾಡಬೇಕು” ಎಂದು ಹಠ ಮಾಡಿದೆ. ಅಪ್ಪ ” ನೋಡು ಅದು ಹಿಡಿಯಲು ಸಿಗುವುದಿಲ್ಲ, ಹಿಡಿಯಲು ಹೋದರೆ ಕಚ್ಚುವುದು, ಮತ್ತು ಅದನ್ನು ನಾವು ಮನೆಗೆ ತಂದರೆ ನಮ್ಮ ನಾಯಿ ಕೊಲ್ಲಬಹುದು ,ಅದು ಕಾಡಿನಲ್ಲಿಯೇ ಸ್ವಚ್ಚಂಧವಾಗಿ ಆಡಿಕೊಂಡಿರಲಿ” ಎಂದು ಬಿಟ್ಟರು.ಅಪ್ಪನ ಯಾವ ಮಾತು ನನಗೆ ಬೇಡವಾಗಿತ್ತು.ನನ್ನ ಮನದ ತುಂಬೆಲ್ಲಾ ಆ ಅಳಿಲ ಮರಿಯೊಂದಿಗೆ ಆಡುವ ಕನಸು ಹೆಚ್ಚಾಗತೊಡಗಿತು. ಅಕ್ಕ ಪಕ್ಕದ ಮನೆಯವರೊಡನೆ ,ಮನೆಗೆ ಬಂದವರೊಡನೆ, ದಾರಿಯಲ್ಲಿ ಸಿಕ್ಕಿದವರೊಡನೆ ಹೀಗೆ ಸಿಕ್ಕ ಸಿಕ್ಕವರೆಲ್ಲರೊಡನೆ ಅಳಿಲಿನ ಮರಿಯನ್ನು ಹಿಡಿದುಕೊಡಲು ಹೇಳುತ್ತಿದ್ದೆ. ಕೆಲವೊಮ್ಮೆ ಬೇಡಿಕೊಳ್ಳುತ್ತಿದ್ದೆ.
 ಅದೊಂದು ದಿನ‌ ನಮ್ಮ ಮನೆಗೆ ಬರುತ್ತಿದ್ದ ಕೂಲಿಯವನೊಬ್ಬ ಬೆಳಿಗ್ಗೆ ಬರುವಾಗ ಅಳಿಲಿನ ಮರಿಯನ್ನು ತಂದಿದ್ದ.ಅಪ್ಪನಿಗೆ ಅರಿವಾಗದ ನನ್ನ ಮನದ ಬಯಕೆ ಅವನಿಗೆ ಅರಿವಾಗಿತ್ತೋ ಏನೋ …? ಮನದಲ್ಲೇ ಸಂಭ್ರಮಿಸಿದ್ದೆ. ಆತ ಅಳಿಲ ಮರಿಗೆ ಬಲೆ ಬೀಸಿ ಹಿಡಿದದ್ದಲ್ಲ, ತಾಯಿಯೊಂದಿಗೆ ಹಾಯಾಗಿ ಮಲಗಿದ್ದಾಗ ಕದ್ದು ತಂದದ್ದಲ್ಲ. ಆತ ಮನೆಯ ಹತ್ತಿರವಿದ್ದ ಮರವನ್ನು ಕಡಿದಾಗ ಗೂಡು ಕೆಳಗೆ ಬಿದ್ದು ಮರದ ನಡುವೆ ಸಿಲಿಕಿಕೊಂಡಿದ್ದ ಅಳಿಲಿನ ಮರಿಯನ್ನು ರಕ್ಷಿಸಿ ತಂದು‌ಕೊಟ್ಟಿದ್ದ.ನನಗಂತೂ ಸಂಭ್ರಮವೋ ಸಂಭ್ರಮ. ಆ ದಿನ ಶಾಲೆಗೆ ಹೋಗೋದೇ ಬೇಡ ಅನಿಸಿತು.ಆದರೆ ಅಮ್ಮಾ ಬಿಡಬೇಕಲ್ಲಾ…! ಒಲ್ಲದ ಮನಸ್ಸಿನಿಂದ ಶಾಲೆಯ ಒಳಹೊಕ್ಕ ನನ್ನ ಮನವೆಲ್ಲವೂ ಮನೆಯಲ್ಲಿರುವ ಅಳಿಲಿನ ಮರಿಯ ಕಡೆಗೇ ಇತ್ತು. ಯಾವ ಪಾಠಗಳೂ ನನ್ನ ಕಿವಿಯ ಒಳಹೊಕ್ಕು ಮನಸ್ಸನ್ನು ತಟ್ಟಲೇ ಇಲ್ಲ. ಕೊನೆಗೂ ಶಾಲೆಯ ಘಂಟೆ ಬಾರಿಸಿತು. ಬೆನ್ನಿಗೆ ಬ್ಯಾಗ್ ಹಾಕಿಕೊಂಡದ್ದೇ ತಡ, ಶಾಲೆಯ ಗೇಟಿನಿಂದ ಆರಂಭಿಸಿದ ಓಟ ನಿಂತದ್ದು ಮನೆ ಅಂಗಳದಲ್ಲಿಯೇ…
    ಏದುಸಿರು ಬಿಡುತ್ತಾ ಮನೆಯ ಒಳನುಗ್ಗಿದ್ದ ನನ್ನ ಕಂಡು ಅಜ್ಜಿ ಗಾಬರಿಗೊಂಡಿದ್ದರು. ನನ್ನ ಅವಸ್ಥೆಯನ್ನು ನೋಡಿ ಅವರಿಗೆ ಯಾರಿಗೋ ಏನೋ ಆಗಿ ಬಿಟ್ಟಿದೆ ಅನ್ನಿಸಿತ್ತು. ನಾನು ಓಡಿ ಬಂದ ಕಾರಣ ಕೇಳಿ ಚೆನ್ನಾಗಿಯೇ ಬೈದರು.ಆದರೆ ನನ್ನ ಆತಂಕ ಅವರಿಗೇನು ಗೊತ್ತು? ಅಳಿಲ ಮರಿ ಹಿಡಿದುಕೊಡಿ ಎಂದಾಗ ತತ್ವ ಬೊಧನೆ ಮಾಡಿದ ಅಪ್ಪ ಆ ಅಳಿಲಿನ ಮರಿಯನ್ನು ಕಾಡಿಗೆ ಬಿಟ್ಟಿದ್ದರೆ…? ಅದರೊಂದಿಗೆ ಆಡಲು ಸಿಕ್ಕಿದ ಒಂದು ಅವಕಾಶವೂ‌ ಇಲ್ಲದಂತಾಗುವುದು.. ನನ್ನ ಆಲೋಚನೆ ಸುಳ್ಳಾಗಿತ್ತು. ಅಪ್ಪ ಅಳಿಲಿನ ಮರಿಗಾಗಿ ಸುಂದರವಾದ ಗೂಡೊಂದನ್ನು ಮಾಡುತ್ತಿದ್ದರು.
          ನಾವು ಆ ಮುದ್ದಾದ ಅಳಿಲಿನ ಮರಿಗೆ ರಾಮು ಎಂದು ಹೆಸರಿಟ್ಟೆವು.ಅವನಿಗಾಗಿ ತಿನ್ನಲು ಬಾಳೆಹಣ್ಣು, ದ್ರಾಕ್ಷಿ , ಸೇಬಿನ ಹಣ್ಣುಗಳನ್ನು ಕೊಟ್ಟೆವು. ಅವನು ಎರಡು ಕಾಲುಗಳಲ್ಲಿ ನಿಂತು , ಎರಡು ಕೈಗಳಿಂದ ಹಣ್ಣನ್ನು ಹಿಡಿದು ತಿನ್ನುವುದನ್ನು ನೋಡುವುದೇ ಒಂದು ಖುಷಿಯಾಗಿತ್ತು.ದಿನ ಕಳೆದಂತೆ ಅವನು  ನಮ್ಮೆಲ್ಲರಿಗೂ ಆತ್ಮೀಯನಾಗತೊಡಗಿದ. ಸಮಯ ಸಿಕ್ಕಾಗಲೆಲ್ಲಾ ಆಟವಾಡುತ್ತಿದ್ದ, ಮಿಕ್ಕ ಸಮಯದಲ್ಲಿ ಅದಕ್ಕಾಗಿ ಮಲಗಲು ಮೀಸಲಿಟ್ಟ ಬಟ್ಟೆಯ ಮೇಲೆ ಮಲಗಿ ನಿದ್ರಿಸುತ್ತಿದ್ದ. ಅವನು  ಗೂಡಿನಲ್ಲಿ ಇರುತ್ತಿದುದು ಕಡಿಮೆಯೇ… ಅವನು ನಮ್ಮೊಂದಿಗೆ ಮನೆಯ ತುಂಬೆಲ್ಲಾ ಸ್ವಚ್ಛಂದವಾಗಿ ಓಡಾಡಿಕೊಂಡಿರುತ್ತಿದ್ದ.
     ನಾವು ಮಲಗುವ ಕೊಠಡಿಯಲ್ಲಿಯೇ ರಾಮು ಮಲಗಿಕೊಂಡಿರುತ್ತಿದ್ದ.ಯಾರಾದರೂ ರಾತ್ರಿ ಎದ್ದು ಬಾಗಿಲು ತೆರೆದರೆ ಸಾಕು, ಅವನು ಎದ್ದು ಓಡಿ ಬರುತ್ತಿದ್ದ. ಒಂದು ದಿನ ಅಂಗಡಿಗೆ ಹೋದಾಗ ಅಪ್ಪನ ಅಂಗಿಯ ಕಿಸೆಯಲ್ಲಿಯೇ ಕುಳಿತು ಅಂಗಡಿಗೂ ಹೋಗಿ ಬಂದಿದ್ದ. ರಾಮು ನಮ್ಮ ಮನೆಯ ಮಗುವಿನಂತೆಯೇ ಆಗಿದ್ದ.
‌‌‌‌‌          ಅದೊಂದು ದಿನ ನಾವು ಯಾರೂ‌‌ ಊಹಿಸಿರದ ಘಟನೆಯೊಂದು ನಡೆದೇ ಹೋಯಿತು. ಯಾವಾಗಲೂ ಅಮ್ಮಾ ಎದ್ದೊಡನೆ ಓಡಿ ಬರುತ್ತಿದ್ದ ರಾಮುವಿಗೆ ಆ ದಿನ ಎಚ್ಚರವಾಗಲೇ ಇಲ್ಲ. ಅಮ್ಮಾ ಸುಮ್ಮನೇ ಮಲಗಲಿ ಎಂದು ಬಿಟ್ಟು ತಮ್ಮ ಕೆಲಸದಲ್ಲಿ ತೊಡಗಿಕೊಂಡರು. ನಾನು ಎದ್ದಾಗಲೂ ಅದು ಮುದ್ದಾಗಿ‌ ಮಲಗಿತ್ತು. ಎಬ್ಬಿಸಲು ಹೋದಾಗ ಅಮ್ಮಾ ಬೈದರು. ನಾನು ಸುಮ್ಮನಾಗಿ ಬಿಟ್ಟೆ.ತಂಗಿ ತುಂಬಾನೇ ಚಿಕ್ಕವಳು.ಎರಡೋ ಮೂರೋ ವರುಷವಿರಬೇಕು. ಅವಳು ಎದ್ದಾಗ ರಾಮು ಎದ್ದನು. ನಿಮಗೂ ಗೊತ್ತಲ್ವ ಚಿಕ್ಕ ಮಕ್ಕಳು ಏಳುವುದೇ ಅಮ್ಮಾsss ಅಂದು ಅಳುತ್ತಾ ಮಕ್ಕಳು ಎದ್ದಾಗ ಬಳಿಯಲ್ಲಿ ಅಮ್ಮನಿದ್ದರೆ ಮಾತ್ರ ಸಮಾಧಾನದಿಂದ ಏಳುವುದು‌. ಇಲ್ಲವಾದಲ್ಲಿ ರಂಪಾಟವೇ..‌.! ಅವಳದು ಇದಕ್ಕಿಂತ ಹೊರತಾಗಿರಲಿಲ್ಲ.ಅಳುತ್ತಾ ಎದ್ದು ಹೊರಬಂದಳು . ಅವಳ ಅಳುವಿನ ಸದ್ದಿಗೆ ರಾಮುವಿಗೆ ಎಚ್ಚರವಾಯಿತೋ ಏನೋ….? ಅವನು ಅವಳ ಹಿಂದೆಯೇ ಓಡುತ್ತಾ ಬಂದ.ಅವನಿಗೊಂದು ಅಭ್ಯಾಸವಿತ್ತು .ಯಾರಾದರೂ ಎದ್ದು ಬಂದ ಕೂಡಲೇ ಓಡಿ ಬಂದು ಕಾಲನ್ನು ಹಿಡಿದುಕೊಳ್ಳುವುದು.ಬಹುಷಃ ಅವನು ನಮ್ಮ ಗಮನ ಸೆಳೆಯಲು ಅವನೇ ರೂಪಿಸಿಕೊಂಡ ತಂತ್ರವಿರಬಹುದು.
‌           ಅಂದುಕೊಂಡ ಅದನ್ನೇ ಮಾಡಿದ್ದ ಓಡಿ ಬಂದು ತಂಗಿಯ ಕಾಲನ್ನು ಹಿಡಿದುಕೊಂಡನು. ತಂಗಿ ಗಾಬರಿಗೊಂಡು ಕಿರುಚಾಡಿ , ರಂಪಾಟ ಮಾಡಿ ಅಮ್ಮನನ್ನು ಹುಡುಕುತ್ತಾ ಓಡಿ ಬಂದಳು. ರಾಮು ಅವಳ ಹಿಂದೆಯೇ ಓಡಿ ಬಂದು ಅವಳ ಕಾಲು ಹಿಡಿದುಕೊಂಡನು. ಅವಳು ರಾಮುವನ್ನು‌ ತಡೆಯಲು ದಢಾರನೆ ಬಾಗಿಲು ಎಳೆದುಕೊಂಡಳು. ಅವಳಿಗೆ ರಾಮುವಿನಿಂದ ತಪ್ಪಿಸಿಕೊಂಡ ಖುಷಿ ಆದರೆ ಅವಳು ಬಾಗಿಲು ಎಳೆದುಕೊಂಡಾಗ ರಾಮು ಬಾಗಿಲಿನ ನಡುವೆ ಸಿಲುಕಿಕೊಂಡು ಪ್ರಾಣ ಕಳೆದುಕೊಂಡಿದ್ದ. ಅವನಿಗೂ ಹೀಗಾಗಬಹುದೆಂದೂ ತಿಳಿದಿರಲಿಲ್ಲ. ಅವಳಿಗೂ ಇದರ ಅರಿವಿರಲಿಲ್ಲ. ಎರಡು ಮುಗ್ದ ಮನಸ್ಸುಗಳ ಮುಗ್ದತನಕ್ಕೆ ಒಂದು ಜೀವವೇ ಬಲಿಯಾಯಿತು. ಇಂದೂ ಅವನ ನೆನಪೂ ಕಾಡುತ್ತಿದೆ. ತೆಂಗಿನ ಮರದಲ್ಲು ಆಡುವ ಅಳಿಲಿನ ಮರಿಗಳನ್ನು ಕಂಡಾಗಲೆಲ್ಲಾ, ಅವರ ಮಧ್ಯೆ ರಾಮು ಹುಟ್ಟಿ ಬಂದಿರಬಹುದೆನೆಸುತ್ತಿದೆ. ಸದಾ ಮನಸ್ಸು ಆಟ ವಾಡುವ ಅಳಿಲಿನ‌ಮರಿಗಳನ್ನು ಕಂಡಾಗಲೆಲ್ಲಾ ರಾಮುವಿಗಾಗಿಯೇ ಹುಡುಕಾಡುತ್ತಿದೆ.
‌    # ಅಪೂರ್ವ ‌ಕೊಲ್ಯ

 

Advertisement
Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಛದ್ಮ ವೇಷದಲ್ಲಿ ನಮ್ಮ ಪ್ರಜಾಪ್ರಭುತ್ವ
May 22, 2025
6:53 AM
by: ಡಾ.ಚಂದ್ರಶೇಖರ ದಾಮ್ಲೆ
1954 ರಿಂದ 2025 | ಅಡಿಕೆ ಮೇಲೆ ಆಪಾದನೆಗಳು ಬಂದ ದಾರಿ ಯಾವುದೆಲ್ಲಾ…?
May 20, 2025
7:32 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಬದುಕು ಪುರಾಣ | ವಿಶ್ವದ ಮೊದಲ ಪತ್ರಕರ್ತ!
May 18, 2025
7:07 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಹಣ್ಣಿನ ಜಾಮ್
May 17, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group