ಇರುಳಿಗ ಸಮುದಾಯ ತಮಿಳುನಾಡಿನ ಪ್ರಮುಖ ಬುಡಕಟ್ಟು ಸಮುದಾಯ. ನಮ್ಮ ಕರ್ನಾಟಕದಲ್ಲಿಯೂ ಈ ಸಮುದಾಯ ಸ್ವಲ್ಪ ಮಟ್ಟಿಗಿದೆ. ಇರುಳಿಗರು ಸಮುದಾಯದ ಜನ ಹಾವುಹಾಗೂ ಇಲಿಗಳನ್ನು ಹಿಡಿಯುವುದರಲ್ಲಿ ಬಹಳ ಪರಿಣಿತರು. ಅದು ಎಷ್ಟರಮಟ್ಟಿಗೆ ಎಂದರೆ ಅಮೇರಿಕಾದ ಒಂದು ಕಡೆ ಹಾವುಗಳ ಕಾಟ ವಿಪರೀತವಾದಾಗ ಇವರನ್ನು ಅಲ್ಲಿಗೆ ಕರಿಸಿಕೊಂಡು ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಲಾಗಿತ್ತು. ಇನ್ನು ಹಾವಿನ ಕಡಿತಕ್ಕೆ ಔಷಧವಾದ ‘ಪ್ರತಿವಿಷ’ತಯಾರಿಸಲು ರಾಷ್ಟ್ರೀಯ ಮಟ್ಟದಲ್ಲಿ ಇವರು ಹಿಡಿದು ವಿಷತೆಗೆಯುವ ವಿಷವೇ ಆಧಾರ. ಸಹಕಾರ ಸಂಘದ ಮೂಲಕ ಇವರು ಹಾವಿನ ವಿಷವನ್ನು ವೈಜ್ಞಾನಿಕ ರೀತಿಯಲ್ಲಿ ಹಾವುಗಳಿಗೆ ತೊಂದರೆಯಾಗದಂತೆ ಸಂಗ್ರಹಿಸುತ್ತಾರೆ.
ಆಚಾರ ವಿಚಾರ ಮತ್ತು ಸಂಪ್ರದಾಯಗಳು ಒಂದು ಜಾತಿಯಿಂದ ಮತ್ತೊಂದು ಜಾತಿಗೆ ಹೇಗೆ ಭಿನ್ನವಾಗಿ ಸಾಗುವುದೋ ಅದೇ ರೀತಿ ಅಹಾರ ಪದ್ಧತಿಯಲ್ಲೂ ಬದಲಾವಣೆಗಳನ್ನು ಕಾಣಬಹುದು. ಕೆಲ ಸಮುದಾಯಗಳು ಸಸ್ಯಾಹಾರವನ್ನು ಕಡ್ಡಾಯವಾಗಿ ಪಾಲನೆ ಮಾಡಿದರೆ, ಕೆಲ ಜಾತಿಗಳ ಪಾಲಿಗೆ ಮಾಂಸದ ಆಹಾರ ಭಾರಿ ಶ್ರೇಷ್ಠ. ಮಾಂಸಹಾರ ಎಂದರೆ ಕೇವಲ ಕುರಿ, ಕೋಳಿ, ಮೀನು,ಮೇಕೆ, ಹಂದಿ ಇವುಗಳಿಗೆ ಮಾತ್ರ ಸೀಮಿತ ಅಲ್ಲ. ಹಾವು, ಇಲಿಗಳನ್ನೂ ಹಿಡಿದು ತಿನ್ನುವ ಮಂದಿ ಇದ್ದಾರೆ. ಇರುಳಿಗ ಎಂಬ ಸಮುದಾಯವಿದೆ. ಆ ಜಾತಿಯ ಜನರಿಗೆ ಇಲಿ ಬೇಯಿಸಿ ಮಾಡುವ ಆಹಾರವೇ ಶ್ರೇಷ್ಠ. ಇಲಿ ತಿಂದರೆ, ದೇಹ ಗಟ್ಟಿಮುಟ್ಟಾಗಿರುತ್ತದೆ. ದೇಹದಲ್ಲಿ ರಕ್ತ ಸಂಚಾರ ಸುಲಭವಾಗುತ್ತದೆ ಎಂದು ಇರುಳಿಗರು ಬಲವಾಗಿ ನಂಬಿದ್ದಾರೆ. ಹೀಗಾಗಿ ಅವರಿಗೆ ಇರುಳಿಗರು ಎಂಬ ಹೆಸರು ಬಂದಿರಬಹುದು ಎಂದು ಹೇಳಲಾಗುತ್ತದೆ.
ಇಲಿ ಹಿಡಿಯುವ ತಂತ್ರಜ್ಞಾನ :ಇರುಳಿಗರು ಇಲಿ ಹಿಡಿಯುವುದರಲ್ಲೂ ಚಾಕಚಕ್ಯತೆ ಮೆರೆಯುತ್ತಾರೆ. ಇದಕ್ಕೆ ಅವರದ್ದೇ ಆದ ತಂತ್ರಜ್ಞಾನ ಇದೆ. ಹೆಜ್ಜೆಯ ಗುರುತಿನ ಜಾಡು ಹಿಡಿದು ಹೋಗುವ ಈ ಮಂದಿ ಇಲಿ ಯಾವ ಬಿಲದಲ್ಲಿದೆ ಎಂಬುದನ್ನು ಮೊದಲು ನೋಡಿಕೊಳ್ಳುತ್ತಾರೆ. ಬಳಿಕ ಬಿಲದ ಅಕ್ಕಪಕ್ಕ ಎರಡು ರಂಧ್ರಗಳನ್ನು ಕೊರೆಯುತ್ತಾರೆ. ಒಂದು ರಂಧ್ರದಲ್ಲಿ ಮಡಕೆ ತೂರಿಸಿ ಅದರ ಹಿಂಭಾಗದಲ್ಲಿ ರಂಧ್ರ ಕೊರೆಯುತ್ತಾರೆ. ಆ ರಂಧ್ರದ ಮೂಲಕ ಬಿಲದ ಒಳಗೆ ಹೊಗೆ ಊದುತ್ತಾರೆ. ಆಗ ಇಲಿ ಉಸಿರುಗಟ್ಟಿದ ಪರಿಣಾಮ ಇನ್ನೊಂದು ರಂಧ್ರದಲ್ಲಿ ಹೊರಗೆ ಬರುತ್ತದೆ. ಆಗ ಹಿಡಿದುಕೊಳ್ಳುತ್ತಾರೆ. ಹೀಗೆ ಕ್ಷಣಾರ್ಧದಲ್ಲಿ ಹತ್ತಾರು ಇಲಿಗಳನ್ನು ಹಿಡಿದು ರಾಶಿ ಹಾಕುತ್ತಾರೆ. ಇಲಿ ಹಿಡಿದ ತಕ್ಷಣ ಆದರ ಬಾಲ ಮುರಿದು ಗಾಯ ಮಾಡುತ್ತಾರೆ. ಬಳಿಕ ಭರ್ಜರಿ ಇಲಿ ಭೋಜನ ಸಿದ್ಧವಾಗುತ್ತದೆ. ಇರುಳಿಗರನ್ನು ಇರುಳ, ಇರುಳರ್ ಎಂಬ ಹೆಸರಿನಿಂದಲೂ ಕರೆಯುವುದುಂಟು.
ಇರುಳಿಗ ಸಮುದಾಯಕ್ಕೆ ಸೇರಿದ ಕುಟುಂಬಗಳು ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಹಲವೆಡೆ ಹೆಚ್ಚಾಗಿ ಕಂಡು ಬರುತ್ತವೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಹಲವು ಗ್ರಾಮಗಳಲ್ಲಿ ಇರುಳಿಗರು ಇದ್ದಾರೆ. ಇವರ ಜನಸಂಖ್ಯೆ 25 ಸಾವಿರ ಎಂದು ಅಂದಾಜು ಮಾಡಲಾಗಿದೆ. ತಮಿಳುನಾಡು ಮತ್ತು ಅಂಧ್ರದಲ್ಲಿಯೂ ಈ ಸಮುದಾಯದ ಜನರನ್ನು ಕಾಣಬಹುದು. ಒಂದು ಅಧ್ಯಯನದ ಪ್ರಕಾರ ಇವರು ಅಲ್ಲಿಂದಲೇ ವಲಸೆ ಬಂದವರು ಎಂದು ಹೇಳಲಾಗುತ್ತದೆ.
ಇಲಿ ಹಿಡಿಯುವುದೇ ಕಸುಬು : ಮೊದಲೇ ಹೇಳಿದಂತೆ ಇಲಿ ಹಿಡಿಯುವುದೇ ಇರುಳಿಗರ ಸಂಸ್ಕೃತಿ. ಅದು ಅವರ ಪಾಲಿಗೆ ಮೆಚ್ಚಿನ ಆಹಾರವೂ ಹೌದು. ಉಳಿದಂತೆ ಕಾಡುಗಳಲ್ಲಿ ವಾಸವಿದ್ದಾಗ ಇವರು ಜೇನು ಕೀಳುವ, ಕಸಪೊರಕೆ ತಯಾರಿಸುವ ಕಾಯಕ ಮಾಡುತ್ತಿದ್ದರು. ಕೆಲವರು ಬಿದಿರು, ಸೌದೆಯನ್ನು ಆರಣ್ಯದಿಂದ ಕಡಿದು ತಂದು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮಾರುತ್ತಿದ್ದರು. ಆದರೆ, ಅರಣ್ಯ ಕಾಯಿದೆ ಜಾರಿಗೆ ಬಂದ ಬಳಿಕ ಇರುಳಿಗರು ಕಾಡು ಬಿಟ್ಟು ಊರುಗಳ ಪಾಲಾಗಿದ್ದಾರೆ. ಅದರೂ ತಮ್ಮ ಸಂಪ್ರದಾಯಗಳನ್ನು ಕೆಲವರು ಇನ್ನೂ ಮರೆತಿಲ್ಲ. ಉಳಿದವರು ಮಾತ್ರ ನಾಗರಿಕತೆಗೆ ಒಗ್ಗಿಕೊಂಡುಬಿಟ್ಟಿದ್ದಾರೆ. ಈ ಹಿಂದೆ ಅವರು ಕಾಡುಗಳಲ್ಲಿ ಗುಹೆ, ಪೊಟರೆಗಳಲ್ಲಿ ವಾಸ ಮಾಡುತ್ತಿದ್ದರು. ಇಲಿ, ಮೊಲ, ಉಡದ ಭೇಟೆಯಾಡುತ್ತಿದ್ದರು. ಗೆಡ್ಡೆ, ಗೆಣಸು, ಹಣ್ಣು, ಹಂಪಲುಗಳ ಮೂಲಕ ಜೀವನ ಸಾಗಿಸುತ್ತಿದ್ದರು.
ನಾಗರಿಕತೆಯತ್ತ ಮುಖ : ಈ ಹಿಂದೆ ಇರುಳಿಗ ಸಮುದಾಯದಲ್ಲಿ ಸಾಕ್ಷರತೆ ಪ್ರಮಾಣ ತೀರಾ ಕೆಳಮಟ್ಟದಲ್ಲಿ ಇತ್ತು. ಮಕ್ಕಳು ಶಾಲೆಯ ಮುಖ ನೋಡಿದವರೇ ಇಲ್ಲ. ಕಾಡುಮೇಡು ಅಲೆಯುತ್ತಿದ್ದ ಅವರಿಗೆ ಆ ಬಗ್ಗೆ ಯೋಚಿಸಲೂ ಪುರುಸೊತ್ತು ಇರಲಿಲ್ಲ. ಆದರೀಗ ಸನ್ನಿವೇಶ ಬದಲಾಗಿದೆ. ಇರುಳಿಗರ ಮಕ್ಕಳು ಶಾಲೆ ಪ್ರವೇಶ ಪಡೆದಿದ್ದಾರೆ. ಓದಿಕೊಂಡ ಮಂದಿ ಉದ್ಯೋಗದ ಕಡೆ ಮುಖ ಮಾಡುತ್ತಿದ್ದಾರೆ. ಸರ್ಕಾರದಿಂದಲೂ ಅವರಿಗೆ ನಾನಾ ಸವಲತ್ತುಗಳು ದೊರೆಯುತ್ತಿವೆ. ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದವರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ, ಎಲ್ಲರಿಗೂ ಸೌಲಭ್ಯಗಳು ಸಿಕ್ಕಿಲ್ಲ. ಇದಕ್ಕೆ ಅರಿವಿನ ಕೊರತೆಯೂ ಕಾರಣ ಇರಬಹುದು. ಜನಸಂಖ್ಯೆ ಕಡಿಮೆ ಇರುವುದರಿಂದ ಸಂಘಟನಾ ಸಾಮರ್ಥ್ಯವೂ ಇವರಿಗೆ ಇಲ್ಲ.
ಸುದ್ದಿ ಸುಳಿವು : ಅಂತರ್ಜಾಲ