ಈಗಾಗಲೇ ಹದಿಮೂರು ಸಾವಿರ ಶಿಕ್ಷಕರನ್ನು ನೇಮಿಸಲಾಗಿದೆ. ಇನ್ನೂ ಹದಿನೈದು ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಚಿತ್ರದುರ್ಗದ ಮುರುಘಮಠದ ಅನುಭವ ಮಂಟಪದಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ರಾಜ್ಯ ಮಟ್ಟದ ’ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ೨೦೨೪-೨೦೨೫’ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಕಲೆ, ಸಂಗೀತ ಮತ್ತು ಇತರೆ ಸಾಂಸ್ಕೃತಿಕ ಕಲೆಗಳನ್ನು ಕಲಿಸುವ ಶಿಕ್ಷಕರನ್ನು ನೇಮಿಸಲಾಗುವುದು ಎಂದು ಮಾಹಿತಿ ನೀಡಿದರು. ರಾಜ್ಯವು ಅತೀ ಹೆಚ್ಚು ಬುಡಕಟ್ಟು ಕಲೆಗಳನ್ನು ಹೊಂದಿದೆ. ಇಂದು ಆ ಕಲೆಗಳನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸ ಪ್ರತಿಭಾ ಕಾರಂಜಿ ಅಂತಹ ಕಾರ್ಯಕ್ರಮಗಳಿಂದ ಆಗಲಿದೆ. ಇಂದಿನ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ನಾಡಿನ ಕಲೆ, ಸಂಸ್ಕೃತಿಕ ಮತ್ತು ಭಾಷೆಯ ರಾಯಭಾರಿಗಳಾಗಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ೧ ಸಾವಿರದ ೩೦೦ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.