21.07.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ ಹಾಗೂ ಕಡಬ ತಾಲೂಕುಗಳಲ್ಲಿ ಮತ್ತೂ ಸ್ವಲ್ಪ ಕಡಿಮೆ ಇರಬಹುದು. ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಕಲಬುರ್ಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ(ಚಿಕ್ಕೋಡಿ ಸಹಿತ) , ಬಾಗಲಕೋಟೆ, ಗದಗ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಒಡಿಸ್ಸಾ ಕರಾವಳಿಯ ವಾಯುಭಾರ ಕುಸಿತದಂತಹ ತಿರುವಿಕೆಯೂ ಇಂದು ರಾತ್ರಿ ಒಡಿಸ್ಸಾ ಕರಾವಳಿ ಪ್ರವೇಶಿಸಿ ಶಿಥಿಲಗೊಳ್ಳಲಿದೆ. ಇದರ ಪ್ರಭಾವದಿಂದ ಮಹಾರಾಷ್ಟ್ರದಾದ್ಯಂತ ಉತ್ತಮ ಮಳೆಯ ಮುನ್ಸೂಚನೆ ಇದೆ. ಉತ್ತರ ಒಳನಾಡು ಭಾಗಗಳಲ್ಲಿ ಸಹ ಅಲ್ಲಲ್ಲಿ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿವೆ.
ಅರಬ್ಬಿ ಸಮುದ್ರದ ಮಾರುತಗಳು ಉತ್ತರಕ್ಕೆ ಸೆಳೆಯಲ್ಪಡುವುದರಿಂದ ಕೇರಳದಲ್ಲಿ ಜುಲೈ 22ರಿಂದ ಮುಂಗಾರು ಸ್ವಲ್ಪ ಮಟ್ಟಿಗೆ ದುರ್ಬಲಗೊಳ್ಳುವ ಸಾಧ್ಯತೆ ಇದ್ದು, ರಾಜ್ಯದ ದಕ್ಷಿಣ ಒಳನಾಡು ಭಾಗಗಳಲ್ಲಿಯೂ ಮುಂಗಾರು ಕ್ಷೀಣಿಸುವ ಲಕ್ಷಣಗಳಿವೆ.