ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಭಾರತದಲ್ಲಿ 2015-2023 ರ ನಡುವೆ ಮಲೇರಿಯಾ ರೋಗ ಮತ್ತು ಅದರಿಂದ ಸಂಭವಿಸುವ ಸಾವುಗಳ ಸಂಖ್ಯೆಯಲ್ಲಿ ಶೇಕಡಾ 80 ರಷ್ಟು ಕಡಿಮೆಯಾಗಿದೆ. ಇದು ಒಂದು ಸಣ್ಣ ಸಾಧನೆಯಲ್ಲ. ಈ ಯಶಸ್ಸು ಜನರ ಭಾಗವಹಿಸುವಿಕೆಯಿಂದ ದೊರೆತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಲೇರಿಯಾ ನಾಲ್ಕು ಸಾವಿರ ವರ್ಷಗಳಿಂದ ಮಾನವಕುಲಕ್ಕೆ ದೊಡ್ಡ ಸವಾಲಾಗಿದೆ. ಒಂದು ತಿಂಗಳ ಶಿಶುವಿನಿಂದ ಹಿಡಿದು ಐದು ವರ್ಷ ವಯಸ್ಸಿನ ಮಕ್ಕಳ ಪ್ರಾಣ ಹರಣ ಮಾಡುವ ಎಲ್ಲಾ ಸಾಂಕ್ರಾಮಿಕ ರೋಗಗಳ ಪೈಕಿ ಮಲೇರಿಯಾ ರೋಗಕ್ಕೆ ಮೂರನೇ ಸ್ಥಾನವಿದೆ. ಹೀಗಾಗಿ ಸಾಂಕ್ರಾಮಿಕ ರೋಗ ನಿಯಂತ್ರಣಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯೂ ಬಹುಮುಖ್ಯ ಎಂದರು.
ಕ್ಯಾನ್ಸರ್ ರೋಗಿಗಳಿಗೆ 30 ದಿನಗಳಲ್ಲಿ ಸಕಾಲದಲ್ಲಿ ಚಿಕಿತ್ಸೆ ನೀಡುವಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಕೆಲಸವನ್ನೂ ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದರು. ಈ ಯೋಜನೆಯಿಂದಾಗಿ 90 ಶೇಕಡಾ ಕ್ಯಾನ್ಸರ್ ರೋಗಿಗಳು ಸಮಯಕ್ಕೆ ಸರಿಯಾಗಿ ಚಿಕಿತ್ಸೆಯನ್ನು ಪ್ರಾರಂಭಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು. ಈ ಹಿಂದೆ ಹಣದ ಕೊರತೆಯಿಂದ ಬಡ ರೋಗಿಗಳು ಕ್ಯಾನ್ಸರ್ ಪರೀಕ್ಷೆ ಮತ್ತು ಚಿಕಿತ್ಸೆಯಿಂದ ಹಿಂದೆ ಸರಿಯುತ್ತಿದ್ದರು. ಈಗ ಆಯುಷ್ಮಾನ್ ಭಾರತ್ ಯೋಜನೆ ಅವರಿಗೆ ದೊಡ್ಡ ಬೆಂಬಲವಾಗಿ ಪರಿಣಮಿಸಿದೆ. ಈಗ ಅವರು ಚಿಕಿತ್ಸೆ ಪಡೆಯಲು ಮುಂದೆ ಬರುತ್ತಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಆರ್ಥಿಕ ಸಮಸ್ಯೆಗಳನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಿದೆ ಎಂದು ಅವರು ಹೇಳಿದರು.