ಹಂಪಿಯು ಭಾರತದ ಅತ್ಯಂತ ಪ್ರಸಿದ್ಧ ಪುರಾತತ್ವ ಕೇಂದ್ರಗಳಲ್ಲಿ ಒಂದಾಗಿದ್ದು ಇಲ್ಲಿಗೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು, ಇತಿಹಾಸ ಪ್ರಿಯರು ಭೇಟಿ ನೀಡುತ್ತಾರೆ. ಹಂಪಿ ಪಟ್ಟಣ ಅತ್ಯಾಧುನಿಕ ಪಟ್ಟಗಳಿಂದ ದೂರದಲ್ಲಿರುವ ಒಂದು ಏಕಾಂತದ ನಗರ ಎಂದರೂ ತಪ್ಪಾಗಲಾರದು. ಹಂಪಿ ಎಂದ ಕೂಡಲೇ ನಮ್ಮ ಕಣ್ಮುಂದೆ ಸುಳಿಯುವುದು ಅಲ್ಲಿನ ಪ್ರಸಿದ್ಧ ವಿಜಯ ನಗರ ರಾಜಮನೆತನ, ಕಲ್ಲಿನಲ್ಲಿ ಅರಳಿ ನಿಂತ ದೇವಾಲಯಗಳು, ಕಲಾ ಕುಸುರಿಯಿಂದಲೇ ಕಣ್ಮನ ಸೆಳೆಯುವ ಗೋಪುರಗಳು, ವಿಶಾಲ ರಸ್ತೆಗಳು ಮತ್ತು ಪ್ರತಿಮೆಗಳು. ಇವೆಲ್ಲವೂ ಈ ನಗರದಾದ್ಯಂತ ಪಸರಿಸಿ ನಿಂತಿವೆ.
ಆದರೆ ಇತ್ತೀಚೆಗೆ ಹಂಪಿಯ ಮಹತ್ವವನ್ನು ಅರಿಯದ ಕೆಲಕಿಡಿಗೇಡಿಗಳು ತಮ್ಮ ಮೋಜು ಮಸ್ತಿಗಾಗಿ ಈ ಪಾರಂಪರಿಕ ಕಟ್ಟಡವನ್ನು ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹಂಪಿಯ ಹೇಮಕೂಟ ಬೆಟ್ಟದಲ್ಲಿ ಯುವಕರು ಕುಣಿದು ಕುಪ್ಪಳಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 14ನೇ ಶತಮಾನದ ಪುರಾತನ ಸ್ಮಾರಕದ ಮಂಟಪಕ್ಕೆ ಹತ್ತುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ವಿರೋಧ ವ್ಯಕ್ತವಾಗಿ ಹಂಪಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಡಿಯೋ ಆಧರಿಸಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಳೆದ ವಾರ ಹಂಪಿಯ ಪವಿತ್ರ ಪುರಂದರ ಮಂಟಪದಲ್ಲಿ ವಿದೇಶಿಗರ ಗುಂಪು ಪಾರ್ಟಿ ಮಾಡುತ್ತಿರುವುದು ಕಂಡು ಬಂದಿತ್ತು. ಇಂತಹ ಘಟನೆಗಳು ನಡೆಯದಂತೆ ಹೆಚ್ಚುವರಿ ಸಿಬಂದಿಗಳನ್ನು ನಿಯೋಜಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಭಾರತೀಯ ಪುರಾತತ್ವ ಸಮೀಕ್ಷೆ (ASI) ಮತ್ತು ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರ (HWHAMA) ನಿಯಮಗಳ ಪ್ರಕಾರ ಹಂಪಿಯಲ್ಲಿರುವ ಸ್ಮಾರಕಗಳ ಮೇಲೆ ಬ್ಲಿಂಬ್ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಲವು ಬಾರಿ ರೀಲ್ಸ್ ತಯಾರಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಘಟನೆ ನಡೆದ ಕೂಡಲೇ ಹಂಪಿಗೆ ಭೇಟಿ ನೀಡಿ ಸ್ಥಳೀಯರನ್ನು ವಿಚಾರಿಸಿರುವುದಾಗಿ ವಿಜಯನಗರ ಜಿಲ್ಲಾಧಿಕಾರಿ ಟಿ ವೆಂಕಟೇಶ್ ತಿಳಿಸಿದ್ದಾರೆ. “ಎಎಸ್‌ಐ ಮಾರ್ಗಸೂಚಿಗಳನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧವಾಗಿದೆ, ಪ್ರವಾಸಿಗರು ಸ್ಮಾರಕಗಳ ಸೌಂದರ್ಯವನ್ನು ಸ್ಪರ್ಶಿಸದೆ ಅಥವಾ ಸ್ಮಾರಕಗಳಿಗೆ ಹಾನಿ ಮಾಡದೆ ಆನಂದಿಸಬೇಕು. ಪ್ರವಾಸಿಗರಿಗೆ ಮಾರ್ಗದರ್ಶನ ನೀಡಲು ಹಂಪಿಯಲ್ಲಿ ಹಲವು ಕಡೆ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು. ಭದ್ರತಾ ಸಿಬ್ಬಂದಿಯನ್ನು ಹೆಚ್ಚಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.