ಬಳ್ಳಾರಿ ಜಿಲ್ಲೆಯ 36,944 ರೈತರ ಖಾತೆಗೆ (Farmers Account) ಎರಡು ಹಂತಗಳಲ್ಲಿ ಡಿಬಿಟಿ ಮೂಲಕ ಒಟ್ಟು 41.40 ಕೋಟಿ ರೂ. ಬರ ಪರಿಹಾರ (Drought Relief) ಹಣವನ್ನು ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, 2023-24 ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಎಲ್ಲಾ 05 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಸರ್ಕಾರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಹಾನಿಯಾಗಿರುವ ಬೆಳೆಗಳಿಗೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇರೆಗೆ ನಿಖರ ದಾಖಲೆ ಹೊಂದಿರುವ, ಪಹಣಿ ಜೋಡಣೆಯಾಗಿರುವ ರೈತರಿಗೆ ಡಿಬಿಟಿ ಮೂಲಕ ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ಬಿಡುಗಡೆ ಮಾಡಲಾಗಿದೆ. ಮೊದಲ ಹಂತದ 9 ಕಂತುಗಳಲ್ಲಿ ಒಟ್ಟು 36,944 ರೈತರಿಗೆ ರೂ.7.26 ಕೊಟಿ ರೂ. ಬೆಳೆ ಹಾನಿ ಪರಿಹಾರ ವಿತರಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
2ನೇ ಹಂತದಲ್ಲಿ ಜಿಲ್ಲೆಯ ಅರ್ಹ 31,351 ರೈತರಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ 34.03 ಕೋಟಿ ರೂ. ಪರಿಹಾರ (ಇನ್ ಪುಟ್ ಸಬ್ಸಿಡಿ) ವಿತರಣೆ ಮಾಡಲು ಅನುಮೋದನೆ ನೀಡಿ, ಡಿಬಿಟಿ ಮೂಲಕ ರೈತರ ಖಾತೆಗೆ ಜಮೆ ಮಾಡಲಾಗಿದೆ. ಇಲ್ಲಿಯವರೆಗೆ ಜಿಲ್ಲೆಯ 2 ಹಂತದಲ್ಲಿ ಒಟ್ಟು 36,944 ರೈತರ ಖಾತೆಗಳಿಗೆ ನೇರವಾಗಿ 41.40 ಕೋಟಿ ರೂ.ಗಳನ್ನು ಜಮೆ ಮಾಡಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
- ಅಂತರ್ಜಾಲ ಮಾಹಿತಿ