ನೆನಪಿರಲಿ…ಎಚ್ಚರಿಕೆಯ ಗಂಟೆ ಸಿಕ್ಕಾಗಿದೆ | ಮಾನವಕುಲ ಎಚ್ಚೆತ್ತುಕೊಳ್ಳಲಿ..

April 10, 2024
9:10 PM

ಯುಗ ಯುಗಗಳೇ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಅನ್ನುವ ಹಾಡನ್ನು ಗುಣ ಗುಣಿಸುತ್ತ ಸೈಕಲ್(Cycle) ಮೇಲೆ ಸವಾರಿ ಹೊರಟಿದ್ದವನಿಗೆ ತಲೆ ಸುತ್ತು ಬಂದಂತಾಗಿ ಇಳಿದು ನೆರಳು(Shade) ಹುಡುಕಿದರೆ ಕಣ್ಣಳತೆಯ ದೂರದವರೆಗೂ ನೆರಳು ಕಾಣಿಸುತ್ತಲೇ ಇಲ್ಲ. ಟಾರು ರಸ್ತೆಯ ಮೇಲೆ ಝಳ ಹಾಯುತ್ತಿದ್ದರೆ ಉಸಿರು ಎಳೆದುಕೊಳ್ಳುವಾಗಲೂ ಬಿಸಿ ಗಾಳಿ(Heat Air) ಒಳಗೆ ಹೋದಂತಾಗಿ ಆರುತ್ತಿರುವ ಗಂಟಲು ಕೈಚೀಲದಲ್ಲಿ ತುಂಬಿ ಇಟ್ಟ ನೀರಿನ ಬಾಟಲಿಯಿಂದ(Water bottle) ಹನಿ ಗುಟುಕಿಸ ಹೊರಟರೆ ಅಯ್ಯೋ ನೀರು ಆಗಲೇ ಬಿಸಿಯಾಗಿ ಬಿಟ್ಟಿದೆ ಇದು ಯಾವದೋ ಮರುಭೂಮಿಯ(Desert) ಊರೊಂದರ ಕಥೆಯಲ್ಲ ನನ್ನದೋ ನಿಮ್ಮದೋ ಊರ ಹೊರಗೆ ಐದಾರು ಕಿಲೋಮೀಟರ್ ಅಂತರದಲ್ಲಿ ಬಿಸಿಲಿನ ಝಳಕ್ಕೆ ಬಸವಳಿದ ಜನಸಾಮಾನ್ಯರ ಬದುಕಿನ ನಿತ್ಯದ ವ್ಯಥೆಯ ಕಥೆ.

Advertisement

ಏ ಕಾಕಾ ಇವತ್ ಮಳಿ ಬರತೈತಿ ಎನ ಅಂದ ಕಲ್ಲಪ್ಪನಿಗೆ ಮುದುಕಪ್ಪ ತನ್ನ ಬಲಗೈಯನ್ನು ಹುಬ್ಬಿನ ಮೇಲೆ ಹಣೆಗೆ ಅಡ್ಡ ಹಿಡಿದು ಮುಗಿಲು ನೋಡಿದ ಮುದುಕಪ್ಪ ಈಗ್ಯಾನ ಇಲ್ಲೋ ಬಾಳಾ ಚೆಂಜಿ ಮುಂದ ತಪ್ಪಿದ್ರ ನಾಳಿ ತಟಗ ಮಳಿ ಬರತೈತಿ ಅನ್ನುತ್ತಿದ್ದಂತೆಯೇ ಹಂಗಾದ್ರ ಇವತ್ ಬಿತ್ತೂನೆನ ಅಂದ ಕಲ್ಲಪ್ಪನಿಗೆ ಇವತ್ತು ಎತ್ತಾ ಹೂಡು ಮುಂದಿಂದು ದೇವ್ರ ಬಲಾನೋ ಕಲ್ಯಾ ನಾ ಎನ್ ದೇವ್ರ ಯಾನ್ ಮಗನ ಅಂತ ಬೊಚ್ಚು ಬಾಯಲ್ಲಿ ಫಕ್ಕನೆ ನಕ್ಕ ಮುದುಕಪ್ಪ ಆದರೆ ಅವನು ಹೇಳಿದಂತಯೆ ಸಂಜೆಯ ವೇಳೆಗೆ ಆಖಾಶದಿಂದ ಒಂದಷ್ಟು ಮುತ್ತಿನಂತ ಮಳೆ ಹನಿಗಳು ನೆಲವನ್ನ ತೋಯಿಸಿದ್ದವು….

ನಾವೆಲ್ಲ ಸಣ್ಣವರಿದ್ದಾಗ ದೂರದಲ್ಲಿ ಎಲ್ಲೋ ಮಳೆ ಬಿದ್ದರೂ ಗಾಲಿಯೊಂದಿಗೆ ತೇಲಿ ಬರುತ್ತಿದ್ದ ಮಣ್ಣ ವಾಸನೆ, ಮತ್ತು ಹಗಲು ಹೊತ್ತಿನಲ್ಲಿಯೂ ಕತ್ತಲಾವರಿಸಿದಂತೆ ಕವಿಯುತ್ತಿದ್ದ ಕಾರ್ಮೋಡದ ದಿನಗಳು ಈಗ ದೂರವಾಗಿ ಮನುಷ್ಯ ಎನ್ನುವ ಪ್ರಾಣಿಯ ನಿರೀಕ್ಷೆಗಳೆಲ್ಲ ಮಣ್ಣು ಪಾಲಾಗುತ್ತಿವೆ. ಗಿಡ ಮರಗಳನ್ನ ಕಡಿದು ಕಾಂಕ್ರೀಟ್ ಕಾಡು ಕಟ್ಟಿದ್ದು, ಕೆಸರು ತುಂಬಿ ನಿಲ್ಲುತ್ತಿದ್ದ, ಚಕ್ಕಡಿ ಗಾಲಿಗಳು ಒಂದೆರಡು ಅಡಿಯಷ್ಟು ಆಳಕ್ಕೆ ಸಿಲುಕು ರಸ್ತೆಯಲ್ಲಿ ಹೋಗುತ್ತಿದ್ದ ಮತ್ಯಾರೋ ಅಪರಿಚಿತರನ್ನ ಅಣ್ಣಾರ ಸ್ವಲ್ಪ ಕೈ ಹಚ್ಚರಿ ಅನ್ನುತ್ತಿದ್ದ ದಿನಗಳು ದೂರವಾಗಿ ರಸ್ತೆಗೆ ಜಲ್ಲಿ ಹಾಕಿ ಟಾರು ಸುರಿದ ಬಳಿಕವಂತೂ ಮಳೆ ಹನಿಗೆ ತೋಯ್ದ ಮಣ್ಣ ಘಮ ಅದೆಲ್ಲೋ ಮಾಯವಾಗಿ ಬಿಟ್ಟಿದೆ.

ಮಳೆ ಇಲ್ಲದೆ ಬಿರಿಯುತ್ತಿರುಬ ಭೂಮಿಯ ಮೇಲಿನ ಬರದ ಭವಣೆ ಎನ್ನುವದು ಸದ್ಯದ ಮಟ್ಟಿಗೆ ನಮ್ಮನ್ನು ಊರಿನಿಂದ ಗುಳೆ ಎಬ್ಬಿಸಿದೆಯಾದರೂ ಈ ಭೂಮಿಯಿಂದಲೂ ಗುಳೆ ಎಬ್ಬಸುವ ದಿನಗಳು ದೂರವಿಲ್ಲ ಯಾಕೆಂದರೆ ನೀರಿನಲ್ಲಿ ದೋಣಿ ಮುಳುಗೆ ಈಜಿ ದಡವ ಸೇರುವೆ ಸುಳಿಗೆ ದೋಣಿ ಸಿಲುಕಿದಾಗ ಬದುಕಿ ಬರಲು ಸಾಧ್ಯವೆ ಹಣತೆಯಲ್ಲಿ ದೀಪ ಉರಿಯೇ ಬೆಳಕಿನಲ್ಲಿ ಬಾಳುವೆ ಧರೆಯೇ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ ಅನ್ನುವ ಸಾಲುಗಳ ಅರ್ಥ ನಮಗೆ ತಡವಾಗಿ ಆಗದಿರಲಿ ಅನ್ನುವ ಆಶಯ ನನ್ನದು.

ಪ್ರತಿ ವರ್ಷದ ಎಪ್ರೀಲ್ ಇಪ್ಪತ್ತೆರಡನೆಯ ತಾರೀಖು ವಿಶ್ವ ಭೂದಿನ ಅಂತ ಮಣ್ಣಿನ ಪಾವಿತ್ರ್ಯತೆ ಮತ್ತು ಫಲವತ್ತತೆ ಕಾಪಾಡುವ ಮಾತನಾಡುವ ನಾವುಗಳು ಕೃಷಿ ಭೂಮಿಗೆ ಹೆಚ್ಚಿನ ಫಸಲು ಬರಲಿ ಅಂತ ಸುರಿಯುತ್ತಿರುವ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ಸಲ್ಫೇಟ್ ನಂತಹ ರಸಾಯನಿಗಳೇ ಕೆಲವೊಮ್ಮೆ ನೆಲದ ಸಹಜ ಫಲವತ್ತತೆಗೆ ಧಕ್ಕೆ ತಂದ ಉದಾಹರಣೆಗಳೂ ಸಾಕಷ್ಟಿವೆ. ಸಕ್ಕರೆ ಕಾರ್ಖಾನೆಗಳ ತ್ಯಾಜ್ಯವನ್ನ ರೈತರ ಭೂಮಿಗೆ ಸುರಿಯುವದರಿಂದ ಹಿಡಿದು ಹೆಚ್ಚು ನೀರು ಬೇಕಾಗುವ ವಾಣಿಜ್ಯ ಬೆಳೆಗಳನ್ನು ನಿರಂತರವಾಗಿ ಭೂಮಿಯಲ್ಲಿ ಬೆಳೆಯುವ ಮೂಲಕ ಮಣ್ಣಿಗೆ ಹೆಚ್ಚಿನ ಲವಣಯುಕ್ತ ನೀರು ಹರಿಸಿ ಭೂಮಿಯ ಫಲವತ್ತತೆಗೆ ಧಕ್ಕೆ ತರುವ ಮನುಷ್ಯನ ವೀಕೃತಿಗಳೇನೂ ಒಂದಾ ಎರಡಾ..??

ನದಿ ಹಳ್ಳ ಕೊಳ್ಳಗಳು ಸೇರಿದಂತೆ ಎಲ್ಲೆಂದರಲ್ಲಿ ಬಳಸಿ ಬೀಸಾಡುವ ಪ್ಲಾಸ್ಟಿಕ್ ತ್ಯಾಜ್ಯ ಭೂಮಿಯಲ್ಲಿ ಕರಗದೆ ಇರುವದರ ಫಲವಾಗಿ ಮತ್ತು ಅಕಾಲಿಕ ಮಳೆಗೆ ಭೂಮಿಯ ಬದುವಿನಲ್ಲಿ ಮರಗಿಡಗಳೂ ಇಲ್ಲದೆ ಮಣ್ಣಿನ ಸವಕಳಿ ಹೆಚ್ಚಾಗುತ್ತ ಹೋಗಿ ಫಲವತ್ತಾದ ಭೂಮಿಯ ಕೊರತೆ ಸದ್ಯ ಜಾಗತಿಕವಾಗಿ ಎಲ್ಲ ದೇಶಗಳನ್ನು ಬಹುವಾಗಿ ಕಾಡುತ್ತಿದೆ. ದಾನೆ ದಾನೆ ಪೆ ಲಿಖಾ ಹೇ ಖಾನೆವಾಲೇ ಕಾ ನಾಮ್ ಅನ್ನುವ ಮಂತ್ರ ಜಪಿಸುವ ನಾವುಗಳು ನೈಸರ್ಗಿಕವಾಗಿ ಮಣ್ಣಿನ ಫಲವತ್ತತೆಯನ್ನ ಹೆಚ್ಚಿಸುವ ಕೆಲಸಕ್ಕೆ ಮುಂದಾಗಬೇಕಾದ ತುರ್ತು ಸದ್ಯದ ಮಟ್ಟಿಗೆ ಚಿಕ್ಕ ಪುಟ್ಟ ಜಮೀನುಗಳ ರೈತರಿಂದ ಹಿಡಿದು ದೊಡ್ಡ ಹಿಡುವಳಿದಾರರ ತನಕ ಎಲ್ಲರಿಗೂ ಇದೆ.

ಒಂದು ಕಡೆ ಕೀಟ ಭಾಧೆ ತಡೆಯಲು ಸಿಂಪಡಣೆ ಮಾಡುವ ಔಷಧಿಗಳು, ಮತ್ತು ತಾಜಾತನ ಕಾಯ್ದುಕೊಳ್ಳಲು ಬಳಸುವ ರಸಾಯನಿಕಗಳು, ಸೇರಿದಂತೆ ಮನುಷ್ಯ ಜೀವಿಯ ಮೇಲೆ ಹಲವಾರು ದುಷ್ಪರಿಣಾಮಗಳು ಸದ್ದಿಲ್ಲದೆ ಆಗುತ್ತಿದ್ದು ಸಾವಯವ ಕೃಷಿ ಕಣ್ಮರೆ ಆಗುತ್ತಿರುವ ಕಾರಣದಿಂದ ನೆಲದ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿರುವದು ದುರಂತವೇ ಸರಿ.

ಭೂಮಿಯನ್ನು ತಾಯಿಗೆ ಹೋಲಿಸುವ ಮನುಷ್ಯ ಅವಳ ರಕ್ಷಣೆಗೆ ಶ್ರಮಿಸಬೇಕಿರುವದನ್ನೇ ಮರೆತು ಕಾಗದದ ನೋಟಿನ ಮಾಟಕ್ಕೆ ಮರುಳಾಗಿ ನೀರಿನ ಕೊರತೆ ಎದುರಾದಾಗ ಕೊಳವೆ ಭಾವಿ ಕೊರೆಯುವದು, ರಾಶಿ-ರಾಶಿ ಕರಗದ ಘನತ್ಯಾಜ್ಯವನ್ನ ಸೃಷ್ಟಿಸುತ್ತಿರುವದು ಸೇರಿದಂತೆ ಐಶಾರಾಮಿ ಬದುಕಿನತ್ತ ಹೊರಳುತ್ತ ನಿಸರ್ಗದತ್ತ ಸೌಂದರ್ಯವನ್ನೂ ಕಣ್ಮಣ ತುಂಬಿಕಿಂಡು ಅನುಭವಿಸದೇ, ಡೇ ಔಟ್ ಅನ್ನುವ ಹೆಸರಿನಲ್ಲಿ ಜಂಗಲ್ ರೆಸಾರ್ಟಗಳಿಗೆ ತೆರಳಿ ಮೋಜು ಮಸ್ತಿಯಲ್ಲಿ ತೊಡಗುತ್ತ ಯೂಜ್ ಯಾಂಡ್ ಥ್ರೋ ಹೆಸರಲ್ಲಿ ಪ್ಲಾಸ್ಟಿಕ್ ಬಾಟಲ್, ಗ್ಲಾಸ್,ಮತ್ತು ಬಳಸಿ ಬಿಸಾಡುವ ತಟ್ಟೆಗಳಿಂದ ಹಿಡಿದು ವರ್ಷಗಟ್ಟಲೆ ನೆಲದಲ್ಲಿ ಕೊಳೆಯದೆ ಉಳಿಯುವ ಸಿಗರೇಟಿನ ಪಿಲ್ಟರಿನ ತನಕ ನೆಲಕ್ಕೆ ನಿತ್ಯವೂ ವಿಷವನ್ನೇ ಉಣ್ಣಿಸುತ್ತಿರುವಾಗ ಕ್ಷಮಯಾ ಧರಿತ್ರಿಯಾದ ಧರಣಿ ದೇವಿಯಾದರೂ ಮನುಷ್ಯರನ್ನ ಅದು ಹೇಗೆ ತಾನೆ ಕ್ಷಮಿಸಿಯಾಳು ಅಲ್ಲವಾ..??

ಪರಿಣಾಮವಾಗಿ ಭೀಕರ ಬರ, ಸವಳು ಜವಳು, ಜಾಗತಿಕ ತಾಪಮಾನದ ಹೆಚ್ಚಳ, ಅಂತರ್ಜಲದ ಕೊರತೆ, ಅಷ್ಟೇ ಅಲ್ಲದೆ ಕೆಲ ವರ್ಷಗಳ ಹಿಂದಷ್ಟೇ ಕಣ್ಣಿಗೆ ಕಾಣದ ವೈರಾಣುವೊಂದರ ಹಾವಳಿಗೆ ಜೀವ ಭಯದಿಂದ ಮುಖಕ್ಕೆ ಹಾಕಿದ ಮಾಸ್ಕಿನ ತನಕ ಎಲ್ಲವನ್ನೂ ಅನುಭವಿಸಿದರೂ ಕೂಡ ಹೇಳುವದಕ್ಕೂ ಕೇಳುವದಕ್ಕೂ ಸಮಯವಿಲ್ಲ ಅಂತ ತನಗೆ ತಾನೇ ನಿರ್ಭಂಧ ಹೇರಿಕೊಂಡ ಮನುಷ್ಯ ಇಂದಲ್ಲ ನಾಳೆ ನಮ್ಮ ಮುಂದಿನ ಪೀಳಿಗೆ ಅಳಿವಿನ ಅಂಚಿನಲ್ಲಿರುವ ಅದೆಷ್ಟೋ ಗಿಡಮರ, ಸಸ್ಯ ಮತ್ತು ಪ್ರಾಣಿ ಸಂಕುಲವನ್ನ ಕೇವಲ ಚಿತ್ರಗಳಲ್ಲಿ ನೋಡಿ ಯಾಕ್ ಹೀಗೆ ಮಾಡಿದ್ರಿ ಅಂತ ಮುಂದೊಮ್ಮೆ ನಮ್ಮನ್ನು ಶಪಿಸುವ ದಿನಗಳು ದೂರವಿಲ್ಲ.

ನೆಲದ ಮೇಲಿನ ಒಂದು ಪದರು ಭೂಮಿ ಫಲವತ್ತಾದ ಭೂಮಿಯಾಗಿ ಪರಿವರ್ತನೆ ಆಗಲು ಸಾವಿರಾರು ವರ್ಷಗಳ ಅವಧಿ ಬೇಕು ಅನ್ನುವ ಅರಿವಿದ್ದರೂ ಕಾಟಾಚಾರಕ್ಕೆ ವಿಶ್ವ ಭೂದಿನ, ಮಣ್ಣಿನ ದಿನ ಅಂತ ಭಾಷಣಗಳನ್ನು ಬಿಗಿಯುತ್ತ ಕಾಲಹರಣ ಮಾಡುತ್ತಿರುವ ಮನುಷ್ಯ ತನ್ನ ಸುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಿದಾಗಲಷ್ಟೇ ನಮ್ಮೆಲ್ಲರ ಬದುಕು ಸುಂದರವಾಗಬಹುದು. ಕೃಷಿಗೆ ಅಧುನಿಕ ತಂತ್ರಜ್ಞಾನ ಅಳವಡಿಕೆ ಹೆಸರಿನಲ್ಲಿ ಮತ್ತು ಬೇಡಿಕೆ ಹಾಗೂ ಬೆಲೆ ಇದೆ ಅನ್ನುವ ಕಾರಣಕ್ಕಾಗಿ ರೈತರು ಹಣದಾಹಿಗಳಗಿ ವಾಣಿಜ್ಯ ಬೆಳೆಗಳ ಬೆನ್ನು ಬೀಳದೆ ಸಹಜ ಕೃಷಿಯತ್ತ ಹೊರಳಬೇಕಾದ ಅವಶ್ಯಕತೆ ಕೂಡ ಇಂದಿನ ಅನಿವಾರ್ಯಗಳಲ್ಲಿ ಒಂದು.

ಚಳಿಗಾಲದಲ್ಲಿ ಬೇಕೆನ್ನಿಸುವ ಮೈ ತುಂಬ ಹಾಕುವ ಬಟ್ಟೆ ಬೇಸಿಗೆಯಲ್ಲಿ ವೈರಾಗ್ಯ ಹುಟ್ಟಿಸುವಂತಾಗಲು ಅತಿಯಾದ ಜಾಗತಿಕ ತಾಪಮಾನ ಹೆಚ್ಚಲು ಇರುವ ಕಾರಣಗಳ ಜೊತೆಗೆ ಮಣ್ಣಿನ ಸಂರಕ್ಷಣೆಯ ಪಾಠ ಕೇವಲ ಪುಸ್ತಕದ ಬದನೆಕಾಯಿ ಆಗದೆ ಈ ನೆಲದ ರಕ್ಷಣೆಯ ಹೊಣೆ ಎನ್ನುವದು ಅರಣ್ಯ ಇಲಾಖೆ, ಕೃಷಿ ಇಲಾಖೆ, ಮತ್ತು ನೀರಾವರಿ ಇಲಾಖೆಯಂತಹ ಕೆಲವು ಇಲಾಖೆಗಳದ್ದೋ ಅಥವಾ ಸರ್ಕಾರದ್ದೋ ಮಾತ್ರವಲ್ಲ ಅದು ಎಲ್ಲ ನಾಗರೀಕರ ಜವಾಬ್ದಾರಿ ಅನ್ನುವ ಪ್ರಜ್ಞೆಯನ್ನು ಎಲ್ಲರಲ್ಲಿಯೂ ಮೂಡಿಸುವ ಕೆಲಸವಾಗಬೇಕಿದೆ.

ಆಗಷ್ಟೇ ಕಾಲ ಕಾಲಕ್ಕೆ ಮಳೆ, ಬೆಳೆ ಆಗುವದರ ಜೊತೆಗೆ ಎಲ್ಲೋ ಮಳೆಯಾದರೆ ಮಣ್ಣಿನ ವಾಸನೆ ನಮ್ಮ ಮೂಗಿಗೆ ಅಡರಿ ನಮ್ಮನ್ನು ಆಹ್ಲಾದಕರ ಭಾವನೆಯತ್ತ ಮಂತ್ರ ಮುಗ್ಧಗೊಳಿಸುವದು ಸಾಧ್ಯವಾದೀತು. ಏನಂತೀರಿ…..??

Source : ಡಿಜಿಟಲ್‌ ಮೀಡಿಯಾ (ಮೂಲ ಬರಹಗಾರರ ಮಾಹಿತಿ ಇಲ್ಲ, ಇಂದಿನ ವಾಸ್ತವ ಪರಿಸ್ಥಿತಿ ಇದಾಗಿದೆ. )

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ
April 13, 2025
11:03 PM
by: The Rural Mirror ಸುದ್ದಿಜಾಲ
ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ
April 13, 2025
7:42 AM
by: The Rural Mirror ಸುದ್ದಿಜಾಲ
2025ರಲ್ಲಿ ಶನಿ ತಮ್ಮ ನಕ್ಷತ್ರ ಅಥವಾ ರಾಶಿಯಲ್ಲಿ ಅಧೋಗತಿಯ ಚಲನೆ
April 13, 2025
6:38 AM
by: ದ ರೂರಲ್ ಮಿರರ್.ಕಾಂ
ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |
April 12, 2025
9:16 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group