ಅನಾದಿ ಕಾಲದಿಂದಲೂ ಹಿಂದೂ ಧರ್ಮವು ತನ್ನ ಪವಿತ್ರತೆ ಮತ್ತು ಆಚರಣೆಗಳಿಂದ ಹೆಸರುವಾಸಿಯಾಗಿದೆ. ವಿದೇಶಿಗರನ್ನು ಭಾರತದ ನೆಲಕ್ಕೆ ಕರೆತಂದ ಹಿಂದೂ ಧರ್ಮವು ತನ್ನದೇ ಆದ ಪದ್ಧತಿಗಳಿಂದ ಮತ್ತು ಸಂಪ್ರದಾಯಗಳಿಂದ ಜನರ ಮನದಲ್ಲಿ ಗಟ್ಟಿಯಾಗಿ ಬೇರೂರಿದೆ. ಹಿಂದೂಗಳು ಅನುಸರಿಸುವ ರೂಢಿ ಸಂಪ್ರದಾಯಗಳು ಸರಳವಾಗಿದ್ದರೂ ಅದಕ್ಕೊಂದು ವೈಚಾರಿಕ ಚೌಕಟ್ಟಿದೆ ಮತ್ತು ಸಾಮಾಜಿಕ ಬದ್ಧತೆ ಇದೆ.
ನಾವು ಧ್ಯಾನವನ್ನೇಕೆ ಮಾಡ ಬೇಕು?: ಧ್ಯಾನ #Meditation ಎಂದರೆ ಏಕಾಗ್ರತೆ. ನಮ್ಮ ಮನಸ್ಸು ಚಂಚಲವಾಗಿರುತ್ತದೆ. ಈ ಚಂಚಲತೆಯನ್ನು ಹೋಗಲಾಡಿಸಿ ಮನಸ್ಸನ್ನು ಧೃಡವಾಗಿರಿಸುವ ಪ್ರಕ್ರಿಯೆಯೇ “ಧ್ಯಾನ”. ದೃಢವಾದ ಮನಸ್ಸಿನಿಂದ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳ ಬಹುದು. ಹಾಗೆ ಸರಿಯಾದ ನಿರ್ಣಯಗಳಿಂದ ತೆಗೆದು ಕೊಂಡ ನಿರ್ಧಾರವು ತಪ್ಪಾಗಲಿಕ್ಕೆ ಸಾಧ್ಯವಿಲ್ಲ.ಯಾವುದೇ ಕಾರ್ಯಗಳನ್ನು ಏಕಾಗ್ರತೆಯಿಂದ ಮಾಡುವವನಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಧ್ಯಾನದಿಂದ ಏಕಾಗ್ರತೆ ಹೆಚ್ಚುತ್ತದೆ. ಮನಸ್ಸಿನ ಸಂಕಟಗಳು ದೂರವಾಗುತ್ತದೆ. ಮನಸ್ಸನ್ನು ಉಲ್ಲಾಸದಾಯಕವಾಗಿ ಇಡುವ ಈ ಧ್ಯಾನವನ್ನು ಮೂಢ ನಂಬಿಕೆಯೆಂದು ದೂರ ಮಾಡಿದರೆ, ಬಹಳ ದೊಡ್ಡ ಪ್ರಮಾಣದ ನಷ್ಟವೆಂದರೆ ಅತಿಶಯೋಕ್ತಿಯಲ್ಲ.
ನಾವು ದೇವರಿಗೆ ದೀಪವನ್ನು ಹಚ್ಚುವುದು ಏಕೆ?: ಭಗವಂತನು ಜ್ಯೋತಿ ಸ್ವರೂಪನಾಗಿದ್ದಾನೆ. ಆತನಿಗೆ ಜ್ಯೋತಿಗಳಿಂದ ಉಪಯೊಗವೇನು? ಅಂದರೆ ನಾವು ಬೆಳಗುವ ದೀಪಗಳು ಪರಮಾತ್ಮನಿಗಲ್ಲ. ಆತನಿಂದ ಜ್ಞಾನವೆಂಬ ಬೆಳಕು ಅಂಧಕಾರದ ನಮ್ಮ ಬಾಳಿನಲ್ಲಿ ಹರಡಲಿ ಎಂಬ ಭಾವನೆಯನ್ನಿಟ್ಟು ಕೊಂಡು ದೀಪವನ್ನು ಬೆಳಗುತ್ತೇವೆ. ಹಾಗೆಂದು ವಿದ್ಯುದ್ದೀಪಗಳನ್ನು ಹಚ್ಚುತ್ತೇವೆಂದರೆ ನಿಮ್ಮ ಅಂದಾಜು ತಪ್ಪು ಎನ್ನುತ್ತೇನೆ. ಏಕೆಂದರೆ, ದೀಪಗಳನ್ನು ತುಪ್ಪ ಅಥವ ಎಣ್ಣೆ ಮತ್ತು ಬತ್ತಿಗಳಿಂದ ಹಚ್ಚುತ್ತೇವೆ. ತುಪ್ಪದ ದೀಪದ ಬೆಳಕು ಕಣ್ಣಿನ ಆರೋಗ್ಯವನ್ನು ವೃಧ್ದಿಸುತ್ತದೆ. ವಿದ್ಯುದ್ದೀಪದ ಬೆಳಕು ದೃಷ್ಠಿಯನ್ನು ಮಂದವಾಗಿಸುತ್ತದೆ. ಎಣ್ಣೆಯ ದೀಪಕ್ಕಿಂತ ತುಪ್ಪದ ದೀಪವು ಅಧಿಕ ಆಮ್ಲಜನಕ ಬಿಡುಗಡೆ ಮಾಡುವುದರಿಂದ ಶ್ರೇಷ್ಟ ಎಂದಿದ್ದಾರೆ. ಅಂತೆಯೇ ನಂದಾ ದೀಪವನ್ನು ಹಚ್ಚುವುದೇಕೆಂದರೆ, ಹಿಂದಿನ ಕಾಲದಲ್ಲಿ ಅಂದರೆ ರಂಜಕದಿಂದ ಬೆಂಕಿಯ ಉಪಯೋಗವು ತಿಳಿಯುವುದಕ್ಕೆ ಮುಂಚೆ ಎರಡು ಬೆಣಚು ಕಲ್ಲುಗಳ ಘರ್ಷಣೆಯಿಂದ ಅಥವಾ ಅರುಣಿಗಳಿಂದ ಬೆಂಕಿಯನ್ನು ಉತ್ಪಾದಿಸುತ್ತಿದ್ದರು. ಇವುಗಳಿಂದ ಬೆಂಕಿಯನ್ನು ಉತ್ಪಾದಿಸುವುದು ಬಹಳ ಕಷ್ಟಕರವಾದ ಮತ್ತು ರೇಜಿಗೆಯ ಕೆಲಸವಾಗಿತ್ತು. ಒಮ್ಮೆ ಹೊತ್ತಿಸಿದ ಬೆಂಕಿಯನ್ನು ದೀರ್ಘ ಕಾಲದವರೆಗೆ ಉಪಯೋಗಿಸುವ ಉದ್ದೇಶವಿಟ್ಟು ಕೊಂಡು ನಂದಾದೀಪವನ್ನು ಹಚ್ಚುವ ಪರಿಪಾಠವನ್ನು ರೂಢಿಸಿ ಕೊಂಡು ಬಂದಿರ ಬೇಕು.
ನಾವು ಧೂಪವನ್ನು ಹಚ್ಚುವುದೇಕೆ?: ಲೋಭಾನ, ಶ್ರೀಗಂಧ, ಚಂಗಲ ಕೋಷ್ಠ, ಗುಗ್ಗುಳ, ಯಾಲಕ್ಕಿ, ಕೃಷ್ಣಾಗರು, ದೇವದಾರು, ಹಾಲುಮಡ್ಡಿ, ಜಟಾಮಾಂಸಿ ಮತ್ತು ಕಚೋರಗಳೆಂಬ ಹತ್ತು ವಿಧವಾದ ಮೂಲಿಕೆಗಳಿಂದ ಸಿದ್ಧ ಮಾಡಿ ಬೆಂಕಿಯಲ್ಲಿ ಸುಟ್ಟು ಅದರ ಹೊಗೆಯನ್ನು ಸೇವಿಸಿದರೆ ಶ್ವಾಸಕೋಶಗಳ ತೊಂದರೆಗಳು ನಿವಾರಣೆಯಾಗುತ್ತದೆ. ಈ ಹತ್ತು ವಿಧವಾದ ಮೂಲಿಕೆಗಳನ್ನು “ದಶಾಂಗ ಧೂಪ” ಎನ್ನುತ್ತಾರೆ. ಸುವಾಸನೆಗಾಗಿ ಹಚ್ಚುವ ಗಂಧದ ಕಡ್ಡಿಗಳು ಹೆಚ್ಚು ಉಪಯೋಗಕಾರಿ ಆಗುವುದಿಲ್ಲ. ಧೂಪವನ್ನು ಹಚ್ಚುವುದರಿಂದ ಅದರ ಸುವಾಸನೆಯು ನಮ್ಮ ಮನಸ್ಸನ್ನು ಹಗುರ ಮಾಡುತ್ತದೆ. ಭಕ್ತಿಯಿಂದ ಪ್ರಾರ್ಥನೆ ಮಾಡುವುದಕ್ಕೆ ಅನುಕೂಲವಾದ ಈ ಧೂಪವನ್ನು ಹಚ್ಚುವುದರಲ್ಲಿ ಹುಚ್ಚು ಕೆಲಸ ಅಲ್ಲವೆಂಬುದು ಸತ್ಯವಷ್ಟೇ.
ನಾವು ಪೂಜೆಗೆ ಮುಂಚೆ ಘಂಟೆಯನ್ನೇಕೆ ಭಾರಿಸುತ್ತೇವೆ?: ಎರಡು ಲೋಹಗಳು ಪರಸ್ಪರ ಢಿಕ್ಕಿ ಹೊಡೆದಾಗ ಶಬ್ದ ತರಂಗಗಳು ಉಂಟಾಗುತ್ತವೆ. ಈ ಶಬ್ಧ ತರಂಗಗಳು ಕಿವಿಯನ್ನು ಹೊಕ್ಕು ಮೆದುಳನ್ನು ಸೇರುತ್ತದೆ. ಸಾಮಾನ್ಯವಾಗಿ ಘಂಟೆಗಳನ್ನು ಕಂಚು, ಪಂಚಲೋಹ, ಬೆಳ್ಳಿ ಅಥವ ಹಿತ್ತಾಳೆಯಿಂದ ಮಾಡುತ್ತಾರೆ. ಪೂಜೆ ಮಾಡುವಾಗ ಹೊರಗಿನ ಎಲ್ಲ ವಿಚಾರಗಳನ್ನು ಪಕ್ಕಕ್ಕಿಟ್ಟು ಶುದ್ಧವಾದ ಮನಸ್ಸಿನಿಂದ ಪೂಜಿಸ ಬೇಕು. ಕಂಚಿನ ಘಂಟೆಯ ಸದ್ದು ಕಿವಿಯಲ್ಲಿ ಗುಂಯಿಗುಡುತ್ತಾ ಹೊರಗಿನ ಪ್ರಪಂಚವನ್ನು ಕ್ಷಣ ಕಾಲ ಮರೆಸಿ ಬಿಡುತ್ತದೆ ಗಮನಿಸಿದ್ದೀರಾ? ಅಂತಹ ಸ್ಥಿತಿಯಲ್ಲಿ ನಮ್ಮ ಮನಸ್ಸು ಪರಿಪೂರ್ಣ ಶುದ್ಧವಾಗಿರುತ್ತದೆ. ಆ ಸಮಯದಲ್ಲಿ ಮಾಡುವ ಆಲೋಚನೆ ಸಫ಼ಲವಾಗುತ್ತದೆ. ಹಾಗೆಯೇ ಘಂಟೆ ಭಾರಿಸುವ ಕೈಗಳ ನಾಡಿಗಳು ಗಂಟೆಯಿಂದ ಹೊರ ಬರುವ ತರಂಗಗಳಿಂದ ಶುದ್ಧವಾಗುತ್ತದೆ. ಪೂಜೆಗೆ ಕಂಚಿನ ಘಂಟೆ ಶ್ರೇಷ್ಠವೆಂದು ಹೇಳಿದ್ದಾರೆ.
ನಾವು ಆಚಮನ ಮಾಡುವುದೇಕೆ?: ಆಚಮನ ಮಾಡುವ ನೀರು ಗಾಳಿಯೊಂದಿಗೆ ಒಳಗೆ ಹೋಗಿ ಅನ್ನನಾಳ ಮತ್ತು ಶ್ವಾಸಕೋಶಗಳು ಸೇರುವ ಸಂಧಿಯಲ್ಲಿ ಸೇರಿರುವ ಕಫ಼ ಮತ್ತು ಕಸದೊಂದಿಗೆ ಹೊಟ್ಟೆಯನ್ನು ಸೇರಿ ಅಲ್ಲಿಂದ ಬಹಿರ್ದೆಸೆಯಲ್ಲಿ ಹೊರ ಬೀಳುತ್ತದೆ. ಗಂಟಲಿನಲ್ಲಿರುವ ಕಫ಼ವು ಶಬ್ಧವನ್ನು ಸ್ವಚ್ಛವಾಗಿ ಉಚ್ಛಾರ ಮಾಡಲು ಬಿಡುವುದಿಲ್ಲ ಎಂಬುದು ಗೊತ್ತಿರುವ ಸಂಗತಿಯಾಗಿದೆ. ಸ್ವಚ್ಛವಾಗಿ ಉಚ್ಛಾರ ಮಾಡದ ಮಂತ್ರಗಳ ಅರ್ಥಗಳು ಬೇರೆಯೇ ಆಗುತ್ತದೆ. ಇದಕ್ಕೆ ಹಲವು ಉದಾಹರಣೆಗಳಿವೆ. ಈ ರೀತಿಯ ತಪ್ಪುಗಳು ಆಗದಿರಲಿ ಎಂದು ಋಷಿ ಮುನಿಗಳು ಕಂಡು ಕೊಂಡ ಉಪಾಯವೇ ಈ “ಆಚಮನ” ಆಗಿದೆ. ಆಚಮನ ಮಾಡುವಾಗ ವೇದಗಳ, ದೇವರ ಸ್ಮರಿಸಿ ನೀರು ಕುಡಿಯುವುದರಿಂದ ವಿಶೇಷ ಶಕ್ತಿ ಸಿಕ್ಕ ಅನುಭವ ಆಗುವುದು.
ನಾವು ಸಂಕಲ್ಪವನ್ನೇಕೆ ಮಾಡುತ್ತೇವೆ?: ನಾವು ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡ ಬೇಕಾದರೆ ಪೂರ್ವ ಯೋಜನೆ ಅಗತ್ಯ. ಪೂರ್ವ ಯೋಜನೆ ಹಾಕಿ ಕೊಂಡು ಮಾಡುವ ಎಲ್ಲ ಕಾರ್ಯಗಳು ಉತ್ತಮ ಫಲದಾಯಕವಾಗಿದ್ದು ಅದೇ ರೀತಿ ಯಾವುದೇ ಪೂಜಾ ಕೈಂಕರ್ಯಗಳಲ್ಲಿ ಮೊದಲು ಪೂರ್ವ ಯೋಜನೆ ಮಾಡಿ ಕೊಳ್ಳುವ ಸಲುವಾಗಿ ಸಂಕಲ್ಪವನ್ನು ಮಾಡಿ ಕೊಳ್ಳುತ್ತೇವೆ. ಸಂಕಲ್ಪದಲ್ಲಿ ನಾವು ವಾಸಿಸುತ್ತಿರುವ ಸ್ಥಳದ ಪರಿಚಯ, ಈಗಿನ ಕಾಲಮಾನ, ಯಾವ ಉದ್ದೇಶದಿಂದ ಏನು ಮಾಡುತ್ತಿದ್ದೇವೆ? ಯಾರನ್ನು ಉದ್ದೇಶಿಸಿ ಮಾಡುತ್ತಿದ್ದೇವೆ? ಇವೆಲ್ಲದರ ಸಂಕ್ಷಿಪ್ತವಾದ ವಿವರಣೆ ಇರುತ್ತದೆ. ಇದರಿಂದ ಕಾರ್ಯಕ್ರಮದ ಯಾವ ಘಟ್ಟವನ್ನೂ ಮರೆಯುವ ಸಾದ್ಯತೆಯಿರುವುದಿಲ್ಲ. ಆದ್ದರಿಂದ ಸಂಕಲ್ಪ ಮಾಡುವುದರಲ್ಲಿ ಯಾವುದೇ ಕಂದಾಚಾರ ಇಲ್ಲವೆಂಬುದು ಸಾಭೀತಾಗುತ್ತದೆ. ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು.. ಹಾಗೆ ಅದು ಜೀವನ ದಾರಿದೀಪವೂ ಹೌದು..
(ಮೂಲ ಬರಹದ ಮಾಹಿತಿ ಇಲ್ಲ- ಸಂಗ್ರಹ ಮಾಹಿತಿ )
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…