ಭಾರತೀಯ ರಬ್ಬರ್ ಬೋರ್ಡ್ ಹಾಗೂ ಆಟೋಮೋಟಿವ್ ಟೈರ್ ತಯಾರಕರ ಸಂಘದ ಸಹಯೋಗದೊಂದಿಗೆ, ಈಶಾನ್ಯ ರಾಜ್ಯಗಳಾದ್ಯಂತ ರಬ್ಬರ್ ಕೃಷಿಯನ್ನು ಉತ್ತೇಜಿಸಲು ಇಂಡಿಯನ್ ನ್ಯಾಚುರಲ್ ರಬ್ಬರ್ ಆರ್ಗನೈಸೇಶನ್ ಫಾರ್ ಅಸಿಸ್ಟೆಡ್ ಡೆವಲಪ್‌ಮೆಂಟ್ ಯೋಜನೆಯನ್ನು ಪ್ರಾರಂಭಿಸಿದೆ.
ವಿಶೇಷವಾಗಿ ಈಶಾನ್ಯ ರಾಜ್ಯಗಳಲ್ಲಿ ರಬ್ಬರ್ ಬೆಳೆಯುವ ಪ್ರದೇಶಗಳನ್ನು ಹೆಚ್ಚಿಸಲು ಉಚಿತ ಸಸಿ ವಿತರಣೆ ಕೂಡಾ ಆರಂಭವಾಗಿದೆ. ಇದರ ಜೊತೆಗೆ ಇತರ ನೆರವು ಕೂಡಾ ಮಾಡಲಾಗುತ್ತಿದೆ. ಸದ್ಯ ಅರುಣಾಚಲ ಪ್ರದೇಶವು ಅತಿದೊಡ್ಡ ರಬ್ಬರ್ ಬೆಳೆಯು ಈಶಾನ್ಯ ರಾಜ್ಯವಾಗಿದೆ. ಮುಂದಿನ ಐದು ವರ್ಷಗಳಲ್ಲಿ (2021-2025) ಎರಡು ಲಕ್ಷ ಹೆಕ್ಟೇರ್ಗಳಷ್ಟು ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ರಬ್ಬರ್ ಮಂಡಳಿಯ ಪ್ರಾದೇಶಿಕ ಕಚೇರಿಯ ಪ್ರಕಟಣೆ ತಿಳಿಸಿದೆ. ಪ್ರಸಕ್ತ ವರ್ಷ 3,500 ಹೆಕ್ಟೇರ್ ಪ್ರದೇಶಕ್ಕೆ ಉಚಿತ ರಬ್ಬರ್ ನಾಟಿ ಸಾಮಗ್ರಿಗಳನ್ನು ವಿತರಿಸುವ ಗುರಿಯನ್ನು ಪ್ರಾದೇಶಿಕ ಕಚೇರಿ ಹೊಂದಿದೆ.
ರಬ್ಬರ್ ಸುಮಾರು 40,000 ಉತ್ಪನ್ನಗಳಲ್ಲಿ ಬಳಸಲಾಗುವ ಬಹುಮುಖ ಕಚ್ಚಾ ವಸ್ತುವಾಗಿದೆ. ಆಟೋಮೊಬೈಲ್ ವಲಯವು ದೇಶದ ಪ್ರಮುಖ ರಬ್ಬರ್ ಗ್ರಾಹಕವಾಗಿದೆ. ಹೀಗಾಗಿ ಭಾರತದಲ್ಲಿಯೇ ರಬ್ಬರ್ ಉತ್ಪಾದನೆಯಾಗುವ ಮೂಲಕ ವಿದೇಶಿ ವಿನಿಮಯ ತಪ್ಪಿಸುವುದು ಹಾಗೂ ಕೃಷಿಕರಿಗೆ ನೆರವಾಗುವ ಉದ್ದೇಶವನ್ನು ಸರ್ಕಾರ ಹೊಂದಿದೆ.